ಉಡುಪಿ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರಿಗೆ ಸೋಲಿನ ಭೀತಿ ಎದುರಾಗಿದೆ. ಚುನಾವಣೆ ಮುಗಿದ ತತ್‌ಕ್ಷಣವೇ ಕಾಂಗ್ರೆಸ್ ಪಕ್ಷ ಹೋಳಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಳಗಿಳಿಯಲಿದ್ದಾರೆ ಮತ್ತು ಬಿಜೆಪಿ ಸರಕಾರ ಪುನಃ ರಚನೆಯಾಗಲಿದೆ ಎಂದು ರೈತಮೋರ್ಚಾದ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ ಹೇಳಿದರು.
ಕಡಿಯಾಳಿಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹಿತ ಕಾಂಗ್ರೆಸ್ ನಾಯಕರಿಗೆ ಸೋಲಿ ಭೀತಿ ಈಗಾಗಲೇ ಎದುರಾಗಿದೆ. ರಾಜ್ಯದ 28 ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಸೋಲಲಿದ್ದಾರೆ. ಸೋಮವಾರ ಮೈಸೂರಿನಲ್ಲಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಯು ಕಾಂಗ್ರೆಸ್‌ನಲ್ಲಿ ಅಧಿಕಾರದ ಒಳಜಗಳ ಹಾಗೂ ಸೋಲಿನ ಭೀತಿಯನ್ನು ಸ್ಪಷ್ಟಪಡಿಸುತ್ತದೆ ಎಂದರು.
ಬಿಜೆಪಿ ಗ್ರಾಮ ಪರಿಕ್ರಮಣ ಯಾತ್ರೆ ಉತ್ತಮವಾಗಿ ನಡೆಯುತ್ತಿದೆ. ಕೇಂದ್ರ ಸರಕಾರದ ರೈತ ಪರ ಯೋಜನೆಯ ಕಾರ್ಯ ಜಿಲ್ಲೆಯ ಎಲ್ಲ ಗ್ರಾಮದ ರೈತರಿಗೆ ಮುಟ್ಟಿಸಲಾಗುತ್ತಿದೆ ಎಂದರು. ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ ಪಾಲನ್ನು ರೈತರಿಗೆ ನೀಡುವುದನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ತತ್‌ಕ್ಷಣವೇ ನಿಲ್ಲಿಸಿದ್ದಾರೆ ಎಂದು ದೂರಿದರು.
ಹೈನುಗಾರರಿಗೆ ಹಾಲಿನ ಪ್ರೋತ್ಸಾಹಧನ ಸಿಗುತ್ತಿಲ್ಲ. ಕಳೆದ ಆರು ತಿಂಗಳಿಂದ ರಾಜ್ಯ ಸರಕಾರ ಪ್ರೋತ್ಸಾಹಧನ ಹೈನುಗಾರರಿಗೆ ನೀಡಿಲ್ಲ. ಹೀಗೆ ರಾಜ್ಯ ಸರಕಾರ ಎಲ್ಲ ಹಂತದಲ್ಲೂ ರೈತ ವಿರೋಧಿ ನಿಲುವು ಹೊಂದಿದೆ. ರೈತರ ಪಂಪ್‌ಸೆಟ್‌ಗಳಿಗೂ ಸಬ್ಸಿಡಿ ನೀಡುತ್ತಿಲ್ಲ ಎಂದು ಆರೋಪಿಸಿದರು.
ಶಾಸಕರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಮೂರುಡಪ್ಪ, ಜಿಲ್ಲಾ ವಕ್ತಾರರಾದ ವಿಜಯ ಕುಮಾರ್ ಉದ್ಯಾವರ, ಗೀತಾಂಜಲಿ ಸುವರ್ಣ, ಮೋರ್ಚಾದ ಪದಾಧಿಕಾರಿಗಳಾದ ಶ್ರೀಕಾಂತ್ ಕಾಮತ್, ಪುಷ್ಪರಾಜ್ ಸುದ್ದಿಗೋಷ್ಠಿಯಲ್ಲಿದ್ದರು.