Advertisement

ಜೂ. 8-11: ನಿಟ್ಟೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

05:01 PM Jun 07, 2023 | Team Udayavani |

ಪತ್ರಿಕಾಭವನ: ನಿಟ್ಟೆ ವಿಶ್ವವಿದ್ಯಾನಿಲಯದ ವತಿಯಿಂದ ನಾಲ್ಕನೇ ವರ್ಷದ ನಿಟ್ಟೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜೂ. 8ರಿಂದ 11ರ ವರೆಗೆ ಮಂಗಳೂರಿನ ಭಾರತ್‌ ಸಿನೆಮಾಸ್‌ನಲ್ಲಿ ಆಯೋಜಿಸಲಾಗಿದೆ.

Advertisement

ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಚಲನಚಿತ್ರೋತ್ಸವದ ನಿರ್ದೇಶಕ ಪ್ರೊ| ರವಿರಾಜ್‌ ಮಾಹಿತಿ ನೀಡಿ, ಚಲನಚಿತ್ರೋತ್ಸವದಲ್ಲಿ 50ಕ್ಕೂ ಮಿಕ್ಕಿ ಚಲನಚಿತ್ರಕಾರರು ಭಾಗವಹಿಸಲಿದ್ದಾರೆ. ಎಲ್ಲ ಚಲನಚಿತ್ರಗಳಿಗೂ ಉಚಿತ ಪ್ರವೇಶ ಇರಲಿದೆ. ಭಾರತೀಯ ಭಾಷೆಗಳ ಅನೇಕ ಪ್ರಶಸ್ತಿ ವಿಜೇತ ಚಲನಚಿತ್ರ ಸಹಿತ ಜರ್ಮನಿಯ 13 ಸಿನೆಮಾಗಳು ಪ್ರದರ್ಶನಗೊಳ್ಳಲಿವೆ. ಅಶ್ವತ್ಥ ನಾರಾಯಣ ಅವರಿಂದ ಕನ್ನಡ ಚಿತ್ರರಂಗದ ಇತಿಹಾಸವನ್ನು ನೆನಪಿಸುವ ಛಾಯಾಚಿತ್ರ ಪ್ರದರ್ಶನ ನೆರವೇರಲಿದೆ ಎಂದರು.

ಜೂ. 8ರಂದು ಬೆಳಗ್ಗೆ 8 ಗಂಟೆಗೆ ನಡೆಯುವ ಉದ್ಘಾಟನ ಸಮಾರಂಭದಲ್ಲಿ ಫೆಡರೇಶನ್‌ ಆಫ್‌ ಫಿಲ್ಮ್ ಸೊಸೈಟಿ ಆಫ್‌ ಇಂಡಿಯದ ಉಪಾಧ್ಯಕ್ಷ ಪ್ರೇಮೇಂದ್ರ ಮಜುಂದಾರ್‌, ನಿಟ್ಟೆ ಡಿಯು ಪ್ರೊ-ಚಾನ್ಸಲರ್‌ ಡಾ| ಎಂ. ಶಾಂತಾರಾಮ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಎನ್‌ಐಸಿಒ ಮುಖ್ಯಸ್ಥ ಪೊ| ರವಿರಾಜ್‌ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ವಿಶೇಷ ಆಹ್ವಾನಿತರಾಗಿ ರಾಜ್‌ ಬಿ. ಶೆಟ್ಟಿ, ಮನೀಶ್‌ಸೈನಿ, ಶಿವಧ್ವಜ್‌, ಶಿಶಿರ್‌ ಝಾ, ರಾಹುಲ್‌ ಪಿ.ಕೆ., ಮಂಸೋರೆ, ಜ್ಯೋ ಬೇಬಿ, ಚಂಪಾ ಶೆಟ್ಟಿ, ಭರತ್‌ ಮಿರ್ಲೆ, ಸೌರಬ್‌ ಕಾಂತಿದತ್ತ, ಅಮರ್ಮೃ ಭಟ್ಟಾಚಾರ್ಯ, ಉಮೇಶ್‌ ಬಡಿಗೇರ್‌ ಭಾಗವಹಿಸಲಿದ್ದಾರೆ ಎಂದರು.

ಪೃಥ್ವಿ ಕೊಣ್ಣನೂರ್‌ ನಿರ್ದೇಶನದ ಹದಿನೇಳೆಂಟು ಕನ್ನಡ ಚಲನಚಿತ್ರ ಪ್ರದರ್ಶನದ ಮೂಲಕ ಪ್ರದರ್ಶನಗಳು ಅಧಿಕೃತವಾಗಿ ಆರಂಭವಾಗಲಿದೆ. ಕಾಂತಾರ (ಕನ್ನಡ), ಫ್ಯಾಮಿಲಿ (ಮಲಯಾಳ), ಕೋರಮ್ಮ (ತುಳು), ಏಕ್‌ ಜಗಹ್‌ ಅಪ್ನಿ (ಹಿಂದಿ), ವಾಲ್ವಿ (ಮರಾಠಿ), ಅನುನಾದ್‌ (ಅಸ್ಸಾಮಿ), ಗಾಂಧಿ ಆ್ಯಂಡ್‌ ಕೋ (ಗುಜರಾತಿ), ಧೂಯಿನ್‌ (ಮೈಥಿಲಿ), ಟೋರ್ಟಾಯಿಸ್‌ ಅಂಡರ್‌ ದಿ ಅರ್ಥ್ (ಸಾಂಥಲಿ) ಸಹಿತ ಅನೇಕ ಚಲನಚಿತ್ರ ಪ್ರದರ್ಶನಗೊಳ್ಳಲಿದೆ ಎಂದರು. ಕಿರು ಚಿತ್ರ ನಿರ್ಮಾಣದ ಬಗ್ಗೆ ಗಣೇಶ್‌ ಬಿ. ಶೆಟ್ಟಿ ಜೂ. 8ರಂದು ಸಂಜೆ 6ಗಂಟೆಗೆ ಉಪನ್ಯಾಸ ನೀಡಲಿದ್ದಾರೆ. ಜೂ. 9ರಂದು ಸಂಜೆ 6 ಗಂಟೆಗೆ ಕಲಾ ನಿರ್ದೇಶನದ ಬಗ್ಗೆ ಶಶಿಧರ ಅಡಪ, ಜೂ. 10ರಂದು 5 ಗಂಟೆಗೆ ಚಲನಚಿತ್ರ ನಿರ್ದೇಶನದ ಬಗ್ಗೆ ಮಿಖೀಲ್‌ ಮುಸಳೆ, 6 ಗಂಟೆಗೆ ಚಲನಚಿತ್ರ ವಿಮರ್ಶೆ ಬಗ್ಗೆ ನಮ್ರತಾ ಜೋಶಿ, ಜೂ. 11ರಂದು 6 ಗಂಟೆಗೆ ಕಥನ ಕಟ್ಟುವ ಕಲೆಯ ಬಗ್ಗೆ ಜಯಂತ ಕಾಯ್ಕಿಣಿ ಮಾತನಾಡಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಅನುಪಮಾ ರತೀಶ್‌, ಸಮರ್ಥ್, ಉಮೇರ್‌ ಉಪಸ್ಥಿತರಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next