ಪಟ್ನಾ : ಬಿಹಾರದಲ್ಲಿನ ಎನ್‌ಡಿಎ ಕೂಟದಲ್ಲಿ ಉಂಟಾಗಿರುವ ಬಿರುಕುಗಳು ಈಗ ಬಹಿರಂಗಕ್ಕೆ ಬಂದಿವೆ.
ಬಿಹಾರದಲ್ಲಿನ ಆಳುವ ಕೂಟದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಬಹಿರಂಗಪಡಿಸಲಾಗಿರುವ ವಿದ್ಯಮಾನದಲ್ಲಿ ಕೇಂದ್ರ ಸಚಿವ ಮತ್ತು ರಾಷ್ಟ್ರೀಯ ಲೋಕ ಸಮತಾ ಪಕ್ಷದ ಮುಖ್ಯಸ್ಥ ಉಪೇಂದ್ರ ಕುಶವಾಹ ಅವರು ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿಯು ಮುಖ್ಯಸ್ಥ, ನಿತೀಶ್ ಕುಮಾರ್ ಅವರು ಆರ್‌ಎಲ್‌ಎಸ್‌ಪಿ ಶಾಸಕರ ಖರೀದಿಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.
“ನಿತೀಶ್ ಕುಮಾರ್ ಜಿ ಅವರು ಉಪೇಂದ್ರ ಕುಶವಾಹ ಮತ್ತು ಅವರ ಪಕ್ಷವನ್ನು ನಾಶ ಮಾಡುವ ಪ್ರಯತ್ನಕ್ಕೆ ಕೈಹಾಕುತ್ತಿದ್ದಾರೆ. ಆದರೆ ಅವರು ನನ್ನ ಪಕ್ಷಕ್ಕಾಗಲೀ ನನಗಾಲೀ ಯಾವುದೇ ಹಾನಿ ಉಂಟು ಮಾಡಲಾರರು; ಏಕೆಂದರೆ ಅವರು ಕೂಡ ಎನ್‌ಡಿಎ ಭಾಗವೇ ಆಗಿದ್ದಾರೆ ಮತ್ತು ನಾವು ಕೂಡ ಹಾಗೆಯೇ ಇದ್ದೇವೆ; ಆದುದರಿಂದ ನಿತೀಶ್ ಕುಮಾರ್ ಆರ್‌ಎಲ್‌ಎಸ್‌ಪಿ ಶಾಸಕರನ್ನು ಖರೀದಿಸುವ ಯತ್ನಕ್ಕೆ ಕೈ ಹಚ್ಚಕೂಡದು’ ಎಂದು ಕುಶವಾಹ ಹೇಳಿದರು.
ಆರ್‌ಎಲ್‌ಎಸ್‌ಪಿ ಮುಖ್ಯಸ್ಥ ಕುಶವಾಹ ಅವರು ನಿತೀಶ್ ವಿರುದ್ದ ಈ ಆರೋಪ ಮಾಡಿರುವುದು ಲೋಕತಾಂತ್ರಿಕ ಜನತಾ ದಳ ಮತ್ತು ಎನ್‌ಡಿಎ ಸಂಚಾಲಕ ಶರದ್ ಯಾದವ್ ಜತೆಗೆ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಸಭೆ ನಡೆದುದನ್ನು ಅನುಸರಿಸಿ.
ಟ್ವಿಟರ್‌ನಲ್ಲಿ ಕುಶವಾಹ ಅವರು ಈ ಸಭೆಯನ್ನು ಸೌಹಾರ್ದ ಮತ್ತು ಸೌಜನ್ಯದ ಮಾತುಕತೆ ಎಂದು ಹೇಳಿದ್ದಾರೆ. ಉಭಯ ನಾಯಕರು ಬಿಹಾರದಲ್ಲಿನ ರಾಜಕೀಯ ಸ್ಥಿತಿಗತಿಗಳ ಕುರಿತು ಚರ್ಚಿಸಿದರೆಂದು ಆರ್‌ಎಲ್‌ಎಸ್‌ಪಿ ಮೂಲಗಳು ಹೇಳಿವೆ.