ಮುಂಬೈ: ರಿಲಯನ್ಸ್ ಫೌಂಡೇಶನ್ ನ ಪ್ರೇರಕ ಶಕ್ತಿಯಾಗಿರುವ ನೀತಾ ಅಂಬಾನಿ ಅವರು ನೂತನವಾಗಿ ವಿಲೀನಗೊಂಡಿರುವ ಸ್ಟಾರ್ ಇಂಡಿಯಾ-ವಯಾಕಾಮ್ 18ರ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ ಎಂದು ಎಕಾನಾಮಿಕ್ಸ್ ಟೈಮ್ಸ್ ವರದಿ ತಿಳಿಸಿದೆ.
ಇದನ್ನೂ ಓದಿ:ED: ಅಕ್ರಮ ಹಣ ವರ್ಗಾವಣೆ; ʼಬಿಗ್ ಬಾಸ್ʼ ಖ್ಯಾತಿಯ ಅಬ್ದು ರೋಝಿಕ್ ವಿಚಾರಣೆ ಮಾಡಿದ ಇಡಿ
ಅಮೆರಿಕದ ವಾಲ್ಟ್ ಡಿಸ್ನಿ ಭಾರತೀಯ ವ್ಯವಹಾರಗಳನ್ನು ರಿಲಯನ್ಸ್ ಗ್ರೂಪ್ ಗೆ ಸೇರಿದ ವಯಾಕಾಮ್ 18 ಜೊತೆ ವಿಲೀನಗೊಳಿಸಿದೆ. ಈ ಸಂಬಂಧ ಎರಡೂ ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿರುವುದಾಗಿ ವರದಿ ವಿವರಿಸಿದೆ.
ಕಳೆದ ಒಂದು ತಿಂಗಳಿನಿಂದ ವಿಲೀನದ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಬುಧವಾರ ಸಂಜೆ ವೇಳೆಗೆ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದ್ದಿರುವುದಾಗಿ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಕಳೆದ ವರ್ಷ ನೀತಾ ಅಂಬಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್ ಗೆ ಮಂಡಳಿಗೆ ರಾಜೀನಾಮೆ ನೀಡಿದ್ದು, ಪ್ರಸ್ತುತ ಅವರು ರಿಲಯನ್ಸ್ ಫೌಂಡೇಶನ್ ನ ಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಏತನ್ಮಧ್ಯೆ ವಿಲೀನಗೊಂಡ ನೂತನ ಸಂಸ್ಥೆಯ ಅಧ್ಯಕ್ಷರಾಗುವ ಸಾಧ್ಯತೆ ಇದ್ದಿರುವುದಾಗಿ ವರದಿ ಹೇಳಿದೆ.
ಸ್ಟಾರ್ ಇಂಡಿಯಾ ಮತ್ತು ವಯೋಕಾಮ್ 18 ವಿಲೀನ ಯಶಸ್ವಿಗೊಂಡರೆ, ಇದು ಮಾಧ್ಯಮ ಕ್ಷೇತ್ರದಲ್ಲಿ ರಿಲಯನ್ಸ್ ಹಿಡಿತ ಇನ್ನಷ್ಟು ಹೆಚ್ಚಾಗಲಿದ್ದು, ನೀತಾ ಅಂಬಾನಿಯ ಚುಕ್ಕಾಣಿಯಲ್ಲಿ ಹೊಸ ಹಾದಿಯತ್ತ ಹೆಜ್ಜೆ ಇಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ನೀತಾ ಅಂಬಾನಿಯವರು ರಿಲಯನ್ಸ್ ಫೌಂಡೇಶನ್ ಮೂಲಕ ಆಸ್ಪತ್ರೆ ಸೇರಿದಂತೆ ಇನ್ನಿತರ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ಕ್ರಿಕೆಟ್ ತಂಡದ ಮಾಲೀಕರಾಗಿದ್ದು, ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿ ಆಯೋಜಿಸುವ ಫುಟ್ಬಾಲ್ ಸ್ಫೋರ್ಟ್ಸ್ ಡೆವಲಪ್ ಮೆಂಟ್ ಲಿಮಿಟೆಡ್ ನ ಮುಖ್ಯಸ್ಥರಾಗಿದ್ದಾರೆ.