ಮುಂಬಯಿ: ನೆರೂಲ್ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರದ ಪ್ರಥಮ ವಾರ್ಷಿಕ ಉತ್ಸವ ಹಾಗೂ 28ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾ ಪೂಜೆ, ಮಂಡಲ ಪೂಜೆ ಹಾಗೂ ಮಹಾ ಅನ್ನಸಂತರ್ಪಣೆಯು ಡಿ. 15ರಂದು ಪ್ರಾರಂಭಗೊಂಡಿದ್ದು, ಡಿ. 17ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಲಿದೆ.
ಧಾರ್ಮಿಕ ಕಾರ್ಯಕ್ರಮವಾಗಿ ತಂತ್ರಿಗಳಾದ ವಿದ್ವಾನ್ ರಾಮಚಂದ್ರ ಬಾಯಾರ್ ಇವರ ನೇತೃತ್ವದಲ್ಲಿ, ಪ್ರಧಾನ ಅರ್ಚಕ ಕೃಷ್ಣ ಭಟ್ ಅವರ ಮುಂದಾಳತ್ವದಲ್ಲಿ, ಅಯ್ಯಪ್ಪ ವೃತಧಾರಿಗಳ ಉಪಸ್ಥಿತಿಯಲ್ಲಿ ಡಿ. 16ರಂದು ಬೆಳಗ್ಗೆ 5ರಿಂದ ಉಷಾ ಕಾಲಪೂಜೆ, ಪಂಚಗವ್ಯ, ಪಂಚಾಮೃತಾಭಿಷೇಕ, ಅಯ್ಯಪ್ಪ ದೇವರ 49 ಕಲಾಶಾಧಿವಾಸ, ದುರ್ಗಾ-ಗಣಪತಿ ದೇವರ ಪಂಚ ವಿಂಶತಿ ಕಲಾಶಾಧಿವಾಸ, ಪ್ರಧಾನ ಹೋಮ, ಬ್ರಹ್ಮ ಕುಂಭಾಭಿಷೇಕ, ನ್ಯಾಸ ಪೂಜೆ, ಲಕ್ಷ ಸುಗಂಧ ಪುಷ್ಪಾರ್ಚನೆ, ಮಹಾ ಪೂಜೆ, ಉತ್ಸವ ಬಲಿ, ಪಲ್ಲ ಪೂಜೆ, ಮಹಾ ಅನ್ನ ಸಂತರ್ಪಣೆ ಜರಗಿತು.
ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಅಪರಾಹ್ನ 2ರಿಂದ ಶ್ರೀ ಶನೀಶ್ವರ ಭಜನಾ ಮಂಡಳಿ ನೆರೂಲ್, ಶ್ರೀ ಮೂಕಾಂಬಿಕಾ ಭಜನಾ ಮಂಡಳಿ ಘನ್ಸೋಲಿ, ಸಂಜೆ 4ರಿಂದ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಭಜನಾ ಮಂಡಳಿಯವರಿಂದ ಭಜನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಜೆ 5.30ರಿಂದ ಆರಾಧನಾ ಪೂಜೆ, ರಾತ್ರಿ ಪೂಜೆ, ಮಹಾ ರಂಗ ಪೂಜೆ, ಶ್ರೀಭೂತ ಬಲಿ, ಅಷ್ಟವಾಧಾನ ಸೇವೆ, ಓಕುಳಿ, ಕಟ್ಟೆ ಪೂಜೆ, ಜಳಕದ ಬಲಿ, ಶಯನೋತ್ಸವ, ಕವಾಟ ಬಂಧನ, ರಾತ್ರಿ 9.30ರಿಂದ ಅನ್ನಪ್ರಸಾದ ವಿತರಣೆ ನಡೆಯಿತು. ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಶ್ರೀ ಮಣಿಕಂಠ ಸೇವಾ ಸಂಘದ ಅಧ್ಯಕ್ಷ ಸಂಜೀವ ಎನ್. ಶೆಟ್ಟಿ, ಉಪಾಧ್ಯಕ್ಷ ಸುರೇಶ್ ಜಿ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಹರಿ ಎಲ್. ಶೆಟ್ಟಿ, ಜೊತೆ ಕಾರ್ಯದರ್ಶಿ ಮೋಹನದಾಸ್ ಕೆ. ರೈ, ಗೌರವ ಕೋಶಾಧಿಕಾರಿ ಖಾಂದೇಶ್ ಭಾಸ್ಕರ್ ವೈ. ಶೆಟ್ಟಿ, ಜೊತೆ ಕೋಶಾಧಿಕಾರಿ ರಾಜೇಂದ್ರ ಪ್ರಸಾದ್ ಮಾಡಾ, ಮಹಿಳಾ ವಿಭಾಗದ ಅಧ್ಯಕ್ಷೆ ರಾಜೇಶ್ವರಿ ಸದಾಶಿವ ಶೆಟ್ಟಿ, ಟ್ರಸ್ಟಿಗಳಾದ ಕೆ. ಡಿ. ಶೆಟ್ಟಿ, ಸುರೇಂದ್ರ ಯು. ಪೂಜಾರಿ, ಮಹೇಶ್ ಡಿ. ಪಟೇಲ್, ದಾಮೋದರ ಎಸ್. ಶೆಟ್ಟಿ, ರವಿ ಆರ್. ಶೆಟ್ಟಿ, ರಿತೇಶ್ ಜಿ. ಕುರುಪ್, ಎನ್. ಜೆ. ಪಟೇಲ್, ಪ್ರಕಾಶ್ ಮಹಾಡಿಕ್, ಡಾ| ಶಿವ ಮೂಡಿಗೇರೆ, ಸದಾಶಿವ ಎನ್. ಶೆಟ್ಟಿ, ಸುರೇಂದ್ರ ಆರ್. ಶೆಟ್ಟಿ, ಅಣ್ಣಪ್ಪ ಕೋಟೇಕಾರ್, ಮೇಘರಾಜ್ ಎಸ್. ಶೆಟ್ಟಿ, ಸುರೇಶ್ ಆರ್. ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ಧೀರಜ್ ಎಸ್. ಶೆಟ್ಟಿ, ಧರ್ಮ ಶಾಸ್ತಾ ಭಕ್ತ ವೃಂದ ಚಾರಿಟೇಬಲ್ ಟ್ರಸ್ಟ್‌ನ ಆಧ್ಯಕ್ಷ ಕಿಶೋರ ಕುಮಾರ್ ಎಂ. ಶೆಟ್ಟಿ, ಉಪಾಧ್ಯಕ್ಷ ಪ್ರಕಾಶ್ ಮಹಾಡಿಕ್, ಗೌರವ ಪ್ರಧಾನ ಕಾರ್ಯದರ್ಶಿ ರಘು ವಿ. ಶೆಟ್ಟಿ, ಜೊತೆ ಕಾರ್ಯದರ್ಶಿ ರಾಮಕೃಷ್ಣ ಎಸ್. ಶೆಟ್ಟಿ, ಗೌರವ ಕೋಶಾಧಿಕಾರಿ ನಿತ್ಯಾನಂದ್ ವಿ. ಶೆಟ್ಟಿ, ಜೊತೆ ಕೋಶಾಧಿಕಾರಿ ಮೇಘರಾಜ್ ಎಸ್. ಶೆಟ್ಟಿ, ಗುರುಸ್ವಾಮಿ ಹರೀಶ್ ಎನ್. ಶೆಟ್ಟಿ ಹಾಗೂ ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯ-ಸದಸ್ಯೆಯರ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳು ಅದ್ದೂರಿಯಾಗಿ ನಡೆದವು.
ನವಿಮುಂಬಯಿ ಹಾಗೂ ವಿವಿಧ ಉಪ ನಗರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಸ್ಥಳೀಯ ವಿವಿಧ ಜಾತೀಯ ಹಾಗೂ ಕನ್ನಡಪರ ಸಂಸ್ಥೆಗಳ ಪದಾಧಿಕಾರಿಗಳು, ಸ್ಥಳೀಯ ಉದ್ಯಮಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ದಾನಿಗಳು, ಅಯ್ಯಪ್ಪ ವ್ರತಧಾರಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಡಿ. 17ರಂದು ಮುಂಜಾನೆ 7ರಿಂದ ಕವಾಟೋದ್ಘಾಟನೆ, ವಿಶೇಷ ಅಭಿಷೇಕಗಳು, ಪ್ರಾತಃಕಾಲ ಪೂಜೆ, ಪ್ರಧಾನ ಹೋಮ, ಸಂಪ್ರೋಕ್ಷಣೆ ಕಲಶಾಭಿಷೇಕ, ತುಲಾಭಾರ ಸೇವೆಗಳು,ಮಧ್ಯಾಹ್ನ ಮಹಾಪೂಜೆ, ಮಹಾ ಮಂತ್ರಾಕ್ಷತೆ, ಮಧ್ಯಾಹ್ನ 1ರಿಂದ ಅನ್ನಪ್ರಸಾದ ವಿತರಣೆ, ಸಂಜೆ 4.30ರಿಂದ ಮಹಿಳಾ ಬಳಗದವರಿಂದ ಅರಸಿನ ಕುಂಕುಮ ಕಾರ್ಯಕ್ರಮ ನಡೆಯಲಿದೆ. ಸಂಜೆ 6ರಿಂದ ಸಂಸ್ಥೆಯ ಅಧ್ಯಕ್ಷ ಸಂಜೀವ ಎನ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಗಣ್ಯಾತಿ-ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆಯನ್ನು ಆಯೋಜಿಸಲಾಗಿದೆ. ರಾತ್ರಿ 8ರಿಂದ ಕಾಜಲ್ ಕುಂದರ್ ಅವರ ಸಂಯೋಜನೆಯಲ್ಲಿ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಸ್ವರ ಸಿಂಚನ ಬಳಗ ಮುಂಬಯಿ ಚಂದ್ರಹಾಸ್ ರೈ ಪುತ್ತೂರು ಮತ್ತು ಬಳಗದವರಿಂದ ಹಾಗೂ ಊರಿನ ಖ್ಯಾತ ಗಾಯಕ ಬಾಲಕೃಷ್ಣ ನೆಟ್ಟಾರು ಅವರಿಂದ ಭಕ್ತಿ ರಸಮಂಜರಿ ನಡೆಯಲಿದೆ.