ತಿರುವನಂತಪುರ: ದಕ್ಷಿಣ ಭಾರತಾದ್ಯಂತ ಭೀತಿ ಹುಟ್ಟಿಸಿರುವ ನಿಫಾ ವೈರಸ್ ಕೇರಳದಲ್ಲಿ ಇದುವರೆಗೆ 10 ಜೀವಗಳನ್ನು ಬಲಿತೆಗೆದುಕೊಂಡಿದೆ. ಕಲ್ಲಿಕೋಟೆ ಮತ್ತು ಮಲಪ್ಪುರಂನಲ್ಲಿ ಈ ವರೆಗೆ 10 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಮಾಹಿತಿ ನೀಡಿದ್ದಾರೆ.
ಈ ವೈರಸ್ ಕುರಿತು ವಿಶ್ವ ಆರೋಗ್ಯ ಸಂಸ್ಥೆಗೂ ಮಾಹಿತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕಲ್ಲಿಕೋಟೆಯ ಪೆರಂಬರ ಗ್ರಾಮವೊಂದರ ಮನೆಯೇ ಈ ವೈರಸ್‌ನ ಕೇಂದ್ರಬಿಂದು ಎಂದು ಗುರುತಿಸಲಾಗಿದೆ. ಈ ಮನೆಯ ಇಬ್ಬರು ಸಹೋದರರು ಮತ್ತು ಅವರೊಂದಿಗೆ ಆಸ್ಪತ್ರೆಯಲ್ಲಿದ್ದ ಮಹಿಳೆ ಮೃತಪಟ್ಟಿದ್ದಾರೆ. ಅವರ ಮನೆಯ ಬಾವಿಯಲ್ಲಿ ಬಾವಲಿಗಳು ಸತ್ತು ಬಿದ್ದಿದ್ದವು. ಅದರಿಂದಲೇ ಸೋಂಕು ಹರಡಿದೆ ಎಂದು ಅಂದಾಜಿಸಲಾಗಿದ್ದು, ಬಾವಿಯನ್ನು ಅಧಿಕಾರಿಗಳು ಮುಚ್ಚಿದ್ದಾರೆ.
ಈ ರೋಗ ಲಕ್ಷಣಗಳಿರುವ ಒಟ್ಟು 18 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಈ ಪೈಕಿ 12 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಇವರಲ್ಲಿ 10 ಮಂದಿ ಮೃತಪಟ್ಟಿದ್ದು, ಇನ್ನೂ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಏಮ್ಸ್ ಆಸ್ಪತ್ರೆಯ ಉನ್ನತ ಮಟ್ಟದ ತಂಡವೊಂದು ಈಗಾಗಲೇ ಕೇರಳಕ್ಕೆ ತಲುಪಿದೆ ಎಂದೂ ಸಚಿವೆ ಶೈಲಜಾ ತಿಳಿಸಿದ್ದಾರೆ.
ಪರಿಸ್ಥಿತಿ ನಿಯಂತ್ರಣದಲ್ಲಿ: ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಯಾರೂ ಭೀತಿ ಪಡಬೇಕಾದ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮಂಗಳವಾರ ತಿಳಿಸಿದ್ದಾರೆ. ರೋಗ ಅಷ್ಟು ಬೇಗವೇನೂ ಹರಡುವುದಿಲ್ಲ. ಅದು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಾಗಾಗಿ ಆತಂಕ ಬೇಡ ಎಂದು ಅವರು ತಿಳಿಸಿದ್ದಾರೆ.
ಇನ್ನೊಂದೆಡೆ, ನಿಫಾ ವೈರಸ್ ಬಗ್ಗೆ ಆತಂಕ ಬೇಡ, ಸೋಂಕು ಹರಡದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗೋವಾ ಮತ್ತು ಮಹಾರಾಷ್ಟ್ರ ಸರಕಾರ ಕೂಡ ಜನತೆಗೆ ಅಭಯ ನೀಡಿದೆ.