ಕ್ರೈಸ್ಟ್ ಚರ್ಚ್: ರೋಚಕ ಹಣಾಹಣಿಯಲ್ಲಿ ನ್ಯೂಜಿಲ್ಯಾಂಡ್ ತಂಡವು ಅಂತಿಮ ಎಸೆತದಲ್ಲಿ ಕ್ರೈಸ್ಟ್ ಚರ್ಚ್ ಪಂದ್ಯವನ್ನು ಗೆದ್ದುಕೊಂಡಿದೆ. ಈ ಸೋಲಿನ ಮೂಲಕ ಶ್ರೀಲಂಕಾದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಆಸೆ ಕಮರಿದ್ದು, ಭಾರತ ತಂಡವು ಫೈನಲ್ ಗೆ ಅರ್ಹತೆ ಪಡೆದಿದೆ.
ಗೆಲುವಿಗೆ 285 ರನ್ ಗುರಿ ಪಡೆದ ಕಿವೀಸ್ ತಂಡಕ್ಕೆ ಕೇನ್ ವಿಲಿಯಮ್ಸನ್ ಶತಕ ಬಾರಿಸಿ ನೆರವಾದರು. ಎಂಟು ವಿಕೆಟ್ ಕಳೆದುಕೊಂಡ ಕಿವೀಸ್ ಅಂತಿಮ ಎಸೆತದಲ್ಲಿ ಪಂದ್ಯ ಗೆದ್ದುಕೊಂಡಿತು.
ಒಂದು ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿದ್ದಲ್ಲಿಂದ ಅಂತಿಮ ದಿನದಾಟ ಆರಂಭಿಸಿದಾಗ ಮಳೆ ಅಡ್ಡಿಯಾಯಿತು. ಮಳೆಯ ಕಾರಣದಿಂದ 37 ಓವರ್ ಗಳ ಪಂದ್ಯ ನಷ್ಟವಾಯಿತು. 53 ಓವರ್ ಗಳಲ್ಲಿ 257 ರನ್ ಗಳಿಸಬೇಕಾದ ಅನಿವಾರ್ಯತೆಗೆ ಸಿಲುಕಿದ ಕಿವೀಸ್ ಗೆ ಕೇನ್ ವಿಲಿಯಮ್ಸನ್ ಮತ್ತು ಡ್ಯಾರೆಲ್ ಮಿಚೆಲ್ ನೆರವಾದರು.
ವಿಲಿಯಮ್ಸನ್ ಅಜೇಯ 121 ರನ್ ಗಳಿಸಿದರೆ, ಮೊದಲ ಇನ್ನಿಂಗ್ಸ್ ನ ಶತಕವೀರ ಮಿಚೆಲ್ 86 ಎಸೆತಗಳಲ್ಲಿ 81 ರನ್ ಮಾಡಿ ನೆರವಾದರು. ಕೊನೆಯ ಮೂರು ಎಸೆತದಲ್ಲಿ ಐದು ರನ್ ಅಗತ್ಯವಿದ್ದಾಗ ವಿಲಿಯಮ್ಸನ್ ಅವರು ಬೌಂಡರಿ ಮತ್ತು ಕೊನೆಯ ಎಸೆತದಲ್ಲಿ ಒಂದು ರನ್ ಕದಿಯುವ ಮೂಲಕ ತಂಡಕ್ಕೆ ಗೆಲುವು ತಂದಿತ್ತರು.
Related Articles
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ತಲುಪಬೇಕಾದರೆ ಶ್ರೀಲಂಕಾ ತಂಡವು ಕಿವೀಸ್ ವಿರುದ್ಧದ ಎರಡೂ ಪಂದ್ಯ ಗೆಲ್ಲಬೇಕಿತ್ತು. ಹೀಗಾಗಿ ಈ ಸೋಲಿನೊಂದಿಗೆ ಲಂಕಾದ ಅಭಿಯಾನ ಅಂತ್ಯಗೊಂಡಿತು. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಫೈನಲ್ ತಲುಪಿದವು.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ: 355 ಮತ್ತು 302
ನ್ಯೂಜಿಲ್ಯಾಂಡ್: 373 ಮತ್ತು 285/8