Advertisement

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇವಸ್ಥಾನ

05:49 PM Apr 16, 2024 | Team Udayavani |

ಶಿರ್ವ: ಐತಿಹಾಸಿಕ ಹಿನ್ನೆಲೆಯಿರುವ ಮೂಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇವಸ್ಥಾನದ ಶಿಲಾಮಯ ಗರ್ಭಗೃಹದ ನೂತನ ದೇಗುಲ ಸಮರ್ಪಣೆ, ಪುನಃಪ್ರತಿಷ್ಠಾ ಅಷ್ಟಬಂಧ, ಅಷ್ಟೋತ್ತರ ಸಹಸ್ರಕಲಶ ಸಹಿತ ಬ್ರಹ್ಮಕಲಶಾಭಿಷೇಕ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವವು ಕ್ಷೇತ್ರದ ತಂತ್ರಿಯವರಾದ ವಿದ್ವಾನ್‌ ಸಗ್ರಿ ಹರಿದಾಸ್‌ ಐತಾಳ್‌ ಅವರ ನೇತೃತ್ವದಲ್ಲಿ ಎ. 18 ರಿಂದ 29ರ ವರೆಗೆ ನಡೆಯಲಿದೆ.

Advertisement

ಕಾರಣಿಕ ಕ್ಷೇತ್ರ

ಸಾವಿರ ವರ್ಷಗಳ ಇತಿಹಾಸವಿರುವ, ಕಾರಣಿಕ ಕ್ಷೇತ್ರ ಮೂಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯವರಿಂದ ನೇಮಿಸಲ್ಪಟ್ಟ ಆಡಳಿತ ಮಂಡಳಿಯ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ. ಶ್ರೀ ಸೂರ್ಯ ದೇವರ ಮೂರ್ತಿ ಇರುವ ಅತ್ಯಪರೂಪದ ಸಾನಿಧ್ಯವಿರುವ ದೇಗುಲವು ಬೆಳ್ಳೆ ಗ್ರಾಮದ ಮೂಡುಬೆಳ್ಳೆಯ ದೇವರಗುಡ್ಡೆಯಲ್ಲಿದ್ದು,ಬೆಳ್ಳೆ ಮೇಲ್ಮನೆ ಮತ್ತು ಬೆಳ್ಳೆ ಕೆಳಮನೆಯವರ ಆನುವಂಶಿಕ ಆಡಳಿತಕ್ಕೆ ಒಳಪಟ್ಟಿದೆ.

ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ

ಎ. 19 ರಂದು ಸಾಯಂಕಾಲ 4ಕ್ಕೆ ಮೂಡುಬೆಳ್ಳೆ ಗೀತಾ ಮಂದಿರದಿಂದ ದೇವಸ್ಥಾನದವರೆಗೆ ವಿವಿಧ ಕಲಾತಂಡಗಳ ವಿಶೇಷ ಆಕರ್ಷಣೆ ಹಾಗೂ ವಿವಿಧ ವಾದ್ಯ ಘೋಷಗಳೊಂದಿಗೆ ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.

Advertisement

ಧಾರ್ಮಿಕ ಕಾರ್ಯಕ್ರಮಗಳು

ಎ. 18ರಂದು ಸಾಯಂಕಾಲ ಋತ್ವಿಜರ ಸ್ವಾಗತದೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭ ಗೊಳ್ಳಲಿದ್ದು, ಎ. 21ರಂದು ಬೆಳಗ್ಗೆ 5-50ಕ್ಕೆ ಶ್ರೀ ಮಹಾಲಿಂಗೇಶ್ವರ, ಶ್ರೀ ಸೂರ್ಯನಾರಾಯಣ ಹಾಗೂ ಶ್ರೀ ಮಹಾಗಣಪತಿ ದೇವರ ಬಿಂಬ ಪ್ರತಿಷ್ಠೆ, ಅಷ್ಟಬಂಧ ಪ್ರತಿಷ್ಠೆ, ಕಲಶಾಭಿಷೇಕ, ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ 109 ಕಲಶಾಭಿಷೇಕ, ಶ್ರೀ ಧೂಮಾವತಿ ಮತ್ತು ಬಂಟ ದೈವ ಪ್ರತಿಷ್ಠೆ, ನಾಗಸನ್ನಿಧಿಯಲ್ಲಿ ಆಶ್ಲೇಷಾ ಬಲಿ ನಡೆಯಲಿದೆ.

ಎ. 23 ರಂದು ಶ್ರೀ ಸೂರ್ಯನಾರಾಯಣ ದೇವರಿಗೆ 109 ಕಲಶಾಭಿಷೇಕ, ಶ್ರೀ ಮಹಾಲಿಂಗೇಶ್ವರ ದೇವರಿಗೆ ತತ್ವಕಲಶಾಭಿಷೇಕ, ಎ.24 ರಂದು ಬೆಳಗ್ಗೆ 10-10ಕ್ಕೆ 1008 ಕಲಶ ಸಹಿತ ಶ್ರೀ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.

ಎ. 25 ರಂದು ಬೆಳಗ್ಗೆ ಧ್ವಜಾರೋಹಣ, ಎ. 27 ರಂದು ವಾರ್ಷಿಕ ಮಹೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಕವಾಟಬಂಧನ, ಶಯನೋತ್ಸವ, ಎ. 28 ರಂದು ಕವಾಟೋದ್ಘಾಟನೆ, ತುಲಾಭಾರ ಸೇವೆ, ಅವಭೃಥೋತ್ಸವ, ಧ್ವಜಾವರೋಹಣ, ರಾತ್ರಿ ಶ್ರೀ ಧೂಮಾವತಿ ಬಂಟ ದೈವದ ಕೋಲ ಹಾಗೂ ಎ. 29 ರಂದು ಬೆಳಗ್ಗೆ ಮಹಾ ಸಂಪ್ರೋಕ್ಷಣೆ, ಮಹಾಮಂತ್ರಾಕ್ಷತೆ ನಡೆಯಲಿದೆ.

ಧಾರ್ಮಿಕ ಸಭಾ ಕಾರ್ಯಕ್ರಮ

ಎ.23ರಂದು ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀ ಪಾದರು ದೀಪ ಪ್ರಜ್ವಲನೆ ಮಾಡಲಿರುವರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ|ಹೆಚ್‌.ಬಿ.ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳ ಉಪಸ್ಥಿತಿಯಲ್ಲಿ ವಿದ್ವಾನ್‌ ರವೀಂದ್ರನಾಥ್‌ ಆಚಾರ್ಯ ಧಾರ್ಮಿಕ ಉಪನ್ಯಾಸ ನೀಡುವರು.

ಸಾಂಸ್ಕೃತಿಕ ಕಾರ್ಯಕ್ರಮ

ಸಾಂಸðತಿಕ ಕಾರ್ಯಕ್ರಮದ ಅಂಗವಾಗಿ ಎ. 21 ರಂದು ಸಂಜೆ ಮೂಡುಶೆಡ್ಡೆ ಗೀತಾ ನರ್ತನ ತಂಡದಿಂದ ಪೌರಾಣಿಕ ಗೀತ ರೂಪಕ ಭಗವದ್ಭಕ್ತಿ ಪಾರಮ್ಯ, ಎ. 22 ರಂದು ಸಾಲಿಗ್ರಾಮ ಮೇಳದವರಿಂದ ಶ್ರೀ ಶನೀಶ್ವರ ಮಹಾತ್ಮೆ, ಕಾಲಮಿತಿ ಯಕ್ಷಗಾನ, ಎ. 23 ರಂದು ಕಲ್ಲಡ್ಕ ವಿಟ್ಠಲ ನಾಯಕ್‌ ಅವರಿಂದ ಗೀತಾ ಸಾಹಿತ್ಯ ಸಂಭ್ರಮ, ಎ. 24 ರಂದು ಬೆಳಗ್ಗೆ ಪುತ್ತೂರು ಜಗದೀಶ ಆಚಾರ್ಯ ಅವರಿಂದ ಗಾಯನ ಭಜನೆ, ಅಪರಾಹ್ನ ಪಾವಂಜೆ ಮೇಳದವರಿಂದ ಶ್ರೀ ಮಹಾದೇವಿ ಲಲಿತೋಪಾಖ್ಯಾನ ಕಾಲಮಿತಿ ಯಕ್ಷಗಾನ, ಎ 27 ರಂದು ಬೆಳಗ್ಗೆ ವಿಜಯ ಶೆಟ್ಟಿ ಮುಂಬೈ ಅವರಿಂದ ಭಕ್ತಿಗೀತೆ, ಭಜನೆ, ರಾತ್ರಿ ಕಿನ್ನಿಗೋಳಿ ವಿಜಯಾ ಕಲಾವಿದರಿಂದ ಪಿರಾವುಡು ಒರಿ ಉಲ್ಲೆ ತುಳು ನಾಟಕ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಮತ್ತು ಆಡಳಿತ ಮಂಡಳಿಯ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next