Advertisement

ಅಭ್ಯಾಸದಲ್ಲಿ ಎಡವಿದ ನ್ಯೂಜಿಲ್ಯಾಂಡ್‌

12:30 PM Oct 18, 2017 | |

ಮುಂಬಯಿ: ನ್ಯೂಜಿಲ್ಯಾಂಡ್‌ ತಂಡ ಭಾರತ ಪ್ರವಾಸವನ್ನು ಸೋಲಿನೊಂದಿಗೆ ಆರಂಭಿಸಿದೆ. ಮಂಗಳವಾರದ ಮೊದಲ ಏಕದಿನ ಅಭ್ಯಾಸ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಮಂಡಳಿ ಅಧ್ಯಕ್ಷರ ಇಲೆವೆನ್‌ ವಿರುದ್ಧ 30 ರನ್ನುಗಳಿಂದ ಎಡವಿದೆ. 

Advertisement

ಮುಂಬಯಿಯಲ್ಲಿ ನಡೆದ ಈ ದೊಡ್ಡ ಮೊತ್ತದ ಮೇಲಾಟದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಬೋರ್ಡ್‌ ಪ್ರಸಿಡೆಂಟ್ಸ್‌ ಇಲೆವೆನ್‌ 9 ವಿಕೆಟಿಗೆ 295 ರನ್‌ ಬಾರಿಸಿ ಸವಾಲಿಕ್ಕಿದರೆ, ನ್ಯೂಜಿಲ್ಯಾಂಡ್‌ 47.4 ಓವರ್‌ಗಳಲ್ಲಿ 265 ರನ್ನಿಗೆ ಆಲೌಟ್‌ ಆಯಿತು. ಭಾರತದ ಎದುರು ಏಕದಿನ ಹಾಗೂ ಟಿ20 ಸರಣಿ ಆಡಲಿರುವ ಪ್ರವಾಸಿಗರಿಗೆ ಇದೊಂದು ಹಿನ್ನಡೆಯಾಗಿದೆ.

ನ್ಯೂಜಿಲ್ಯಾಂಡಿನ ಬ್ಯಾಟಿಂಗ್‌ ಸರದಿಯಲ್ಲಿ ಎಲ್ಲರದೂ “ಎವರೇಜ್‌ ಮೊತ್ತ’ವಾಗಿತ್ತು. ಏಕೈಕ ಅರ್ಧ ಶತಕ ಟಾಮ್‌ ಲ್ಯಾಥಂ ಅವರಿಂದ ಬಂತು (59). ಆರಂಭಕಾರ ಲ್ಯಾಥಂ ಇಲ್ಲಿ 5ನೇ ಕ್ರಮಾಂಕದಲ್ಲಿ ಆಡಲಿಳಿದಿದ್ದರು. ನಾಯಕ ವಿಲಿಯಮ್ಸನ್‌ 47, ಗ್ರ್ಯಾಂಡ್‌ಹೋಮ್‌ 33 ರನ್‌, ಟಯ್ಲರ್‌ 34 ರನ್‌ ಹೊಡೆದರು. ಮುನ್ರೊ ಮತ್ತು ಸ್ಯಾಂಟ್ನರ್‌ ತಲಾ 26 ರನ್‌ ಮಾಡಿದರೆ, ಆರಂಭಕಾರ ಗಪ್ಟಿಲ್‌ ಆಟ 22 ರನ್ನಿಗೆ ಕೊನೆಗೊಂಡಿತು. 

ಸ್ಪಿನ್ನರ್‌ ಶಾಬಾಜ್‌ ನದೀಂ ಮತ್ತು ವೇಗಿ ಜೈದೇವ್‌ ಉನಾದ್ಕತ್‌ ತಲಾ 3 ವಿಕೆಟ್‌ ಉರುಳಿಸಿ ಮಿಂಚಿದರು. ಧವಳ್‌ ಕುಲಕರ್ಣಿ, ಗುರುಕೀರತ್‌, ಆವೇಶ್‌ ಖಾನ್‌, ಕಣ್‌ì ಶರ್ಮ ಒಂದೊಂದು ವಿಕೆಟ್‌ ಕಿತ್ತರು.

ಮಿಂಚಿದ ಅಗ್ರ ಕ್ರಮಾಂಕ: ಮಂಡಳಿ ಅಧ್ಯಕ್ಷರ ಬಳಗದ ಬೃಹತ್‌ ಮೊತ್ತಕ್ಕೆ ಕಾರಣವಾದದ್ದು ಅಗ್ರ ಕ್ರಮಾಂಕದ ಬ್ಯಾಟಿಂಗ್‌ ವೈಭವ. ಆರಂಭಿಕರಾದ ಪೃಥ್ವಿ ಶಾ, ಕೆ.ಎಲ್‌. ರಾಹುಲ್‌ ಮತ್ತು ಕರುಣ್‌ ನಾಯರ್‌ ಸೊಗಸಾದ ಅರ್ಧ ಶತಕದೊಂದಿಗೆ ಕಿವೀಸ್‌ ಬೌಲರ್‌ಗಳಿಗೆ ಕಂಟಕವಾಗಿ ಪರಿಣಮಿಸಿದರು. ಮುಂಬಯಿಯ ಓಪನರ್‌ ಪೃಥ್ವಿ ಶಾ 66 ರನ್‌, ಸೋಮವಾರವಷ್ಟೇ ತಂಡಕ್ಕೆ ಕರೆ ಪಡೆದ ಕೆ.ಎಲ್‌. ರಾಹುಲ್‌ 68 ರನ್‌ ಹಾಗೂ ಕರ್ನಾಟಕದ ಮತ್ತೂಬ್ಬ ಬ್ಯಾಟ್ಸ್‌ಮನ್‌ ಕರುಣ್‌ ನಾಯರ್‌ 78 ರನ್‌ ಬಾರಿಸಿದರು.

Advertisement

ಇನ್ನಿಂಗ್ಸಿನ ಅರ್ಧದಷ್ಟು ಓವರ್‌ಗಳನ್ನು ಶಾ ಮತ್ತು ರಾಹುಲ್‌ ಜೋಡಿಯೇ ನಿಭಾಯಿಸಿತು. 25.1 ಓವರ್‌ಗಳ ಜತೆಯಾಟ ನಡೆಸಿದ ಇವರು ಮೊದಲ ವಿಕೆಟಿಗೆ 147 ರನ್‌ ಪೇರಿಸಿದರು. ನ್ಯೂಜಿಲ್ಯಾಂಡಿನ ಯಾವುದೇ ರೀತಿಯ ಬೌಲಿಂಗ್‌ ತಂತ್ರಗಾರಿಕೆ ಇವರ ಮುಂದೆ ನಡೆಯಲಿಲ್ಲ. ಇಬ್ಬರೂ ಒಂದೇ ವೇಗದಲ್ಲಿ, ಜತೆ ಜತೆಯಾಗಿ ಸಾಗಿ ಇನ್ನಿಂಗ್ಸ್‌ ಬೆಳೆಸುತ್ತ ಹೋದರು. ಶಾ ಅವರ 66 ರನ್‌ 80 ಎಸೆತಗಳಿಂದ ಬಂದರೆ, ರಾಹುಲ್‌ ಅವರ 68 ರನ್‌ 75 ಎಸೆತಗಳಿಂದ ದಾಖಲಾಯಿತು. ಇಬ್ಬರೂ 9 ಬೌಂಡರಿ, ಒಂದು ಸಿಕ್ಸರ್‌ ಬಾರಿಸಿದ್ದು ವಿಶೇಷವಾಗಿತ್ತು. 26ನೇ ಓವರಿನ ಮೊದಲ ಎಸೆತದಲ್ಲಿ ಐಶ್‌ ಸೋಧಿ ಈ ಜೋಡಿಯನ್ನು ಬೇರ್ಪಡಿಸಿ ನ್ಯೂಜಿಲ್ಯಾಂಡಿಗೆ ಮೊದಲ ಯಶಸ್ಸು ತಂದಿತ್ತರು. ರಾಹುಲ್‌ ನಿರ್ಗಮಿಸಿದ ನಾಲ್ಕೇ ರನ್‌ ಅಂತರದಲ್ಲಿ ಶಾ ವಿಕೆಟ್‌ ಬಿತ್ತು. ಇಬ್ಬರೂ ಬದಲಿ ಫೀಲ್ಡರ್‌ ಹೆನ್ರಿ ನಿಕೋಲ್ಸ್‌ಗೆ ಕ್ಯಾಚ್‌ ನೀಡಿದರು.2ನೇ ಅಭ್ಯಾಸ ಪಂದ್ಯ ಗುರುವಾರ ಮುಂಬಯಿಯಲ್ಲೇ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌ ಮಂಡಳಿ ಅಧ್ಯಕ್ಷರ ಬಳಗ-9 ವಿಕೆಟಿಗೆ 295 (ನಾಯರ್‌ 78, ರಾಹುಲ್‌ 68, ಶಾ 66, ಬೌಲ್ಟ್ 38ಕ್ಕೆ 5, ಸ್ಯಾಂಟ್ನರ್‌ 40ಕ್ಕೆ 2). ನ್ಯೂಜಿಲ್ಯಾಂಡ್‌-47.4 ಓವರ್‌ಗಳಲ್ಲಿ 265 (ಲ್ಯಾಥಂ 59, ವಿಲಿಯಮ್ಸನ್‌ 47, ಟಯ್ಲರ್‌ 34, ಗ್ರ್ಯಾಂಡ್‌ಹೋಮ್‌ 33, ಮುನ್ರೊ 26, ಸ್ಯಾಂಟ್ನರ್‌ 26, ಗಪ್ಟಿಲ್‌ 22, ನದೀಂ 41ಕ್ಕೆ 3, ಉನಾದ್ಕತ್‌ 62ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next