Advertisement

New Zealand ನಾಗಾಲೋಟ: ಕಿವೀಸ್‌ ವಿರುದ್ಧ ನಡೆಯಲಿಲ್ಲ ಅಫ್ಘಾನ್‌ ಆಟ; 4ನೇ ಜಯ

11:48 PM Oct 18, 2023 | Team Udayavani |

ಚೆನ್ನೈ: ನ್ಯೂಜಿಲ್ಯಾಂಡ್‌ ಸತತ 4ನೇ ಜಯದೊಂದಿಗೆ ನಾಗಾಲೋಟ ಬೆಳೆಸಿದೆ. ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌ ತಂಡಕ್ಕೆ ಆಘಾತವಿಕ್ಕಿದ ಅಫ್ಘಾನಿಸ್ಥಾನವನ್ನು ಕೇವಲ 96 ಗಂಟೆಗಳಲ್ಲಿ “ರಿಯಾಲಿಟಿ ಚೆಕ್‌’ಗೆ ಒಳಪಡಿಸಿದ ಕಿವೀಸ್‌ ಪಡೆ 149 ರನ್ನುಗಳ ಪ್ರಚಂಡ ಗೆಲುವು ಸಾಧಿಸಿತು.

Advertisement

ಚೆನ್ನೈಯಲ್ಲಿ ನಡೆದ ಮುಖಾಮುಖಿಯಲ್ಲಿ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಜಿ ಲ್ಯಾಂಡ್‌ 6 ವಿಕೆಟ್‌ ನಷ್ಟಕ್ಕೆ 288 ರನ್‌ ಗಳಿಸಿದರೆ, ಅಫ್ಘಾನಿಸ್ಥಾನ 34.4 ಓವರ್‌ಗಳಲ್ಲಿ 139 ರನ್ನಿಗೆ ಸರ್ವಪತನ ಕಂಡಿತು. ಇದರೊಂದಿಗೆ 13ನೇ ವಿಶ್ವಕಪ್‌ನಲ್ಲಿ ಮೊದಲ ನಾಲ್ಕೂ ಪಂದ್ಯಗಳನ್ನು ಗೆದ್ದ ನ್ಯೂಜಿ ಲ್ಯಾಂಡ್‌ 8 ಅಂಕಗಳೊಂದಿಗೆ ಮತ್ತೆ ಅಗ್ರಸ್ಥಾನ ಅಲಂಕರಿಸಿತು. ಎಲ್ಲ 3 ಪಂದ್ಯಗಳನ್ನು ಜಯಿಸಿರುವ ಭಾರತ ದ್ವಿತೀಯ ಸ್ಥಾನಕ್ಕೆ ಇಳಿಯಿತು.
ಇದು ವಿಶ್ವಕಪ್‌ನಲ್ಲಿ ನ್ಯೂಜಿಲ್ಯಾಂಡ್‌ ಸಾಧಿಸಿದ ರನ್‌ ಅಂತರದ 2ನೇ ದೊಡ್ಡ ಗೆಲುವು. 1975ರ ಚೊಚ್ಚಲ ಟೂರ್ನಿಯಲ್ಲಿ ಪೂರ್ವ ಆಫ್ರಿಕಾವನ್ನು 181 ರನ್ನುಗಳಿಂದ ಮಣಿಸಿದ್ದು ದಾಖಲೆ.

ಕಿವೀಸ್‌ ಅಮೋಘ ಚೇತರಿಕೆ
ಈ ಕೂಟದಲ್ಲಿ ಆರಂಭದಿಂದಲೇ ಅಬ್ಬರಿ ಸುತ್ತ ಬಂದಿದ್ದ ನ್ಯೂಜಿಲ್ಯಾಂಡ್‌, ಅಫ್ಘಾನ್‌ ವಿರುದ್ಧ ಇದೇ ಜೋಶ್‌ ತೋರುವಲ್ಲಿ ವಿಫ‌ಲ ವಾಯಿತು. ಆರಂಭಿಕ ವಿಕೆಟಿಗೆ 6.3 ಓವರ್‌ ಗಳಿಂದ ಬರೀ 30 ರನ್‌ ಬಂತು. 20 ರನ್‌ ಮಾಡಿದ ಕಾನ್ವೇ ಅವರನ್ನು ಮುಜೀಬ್‌ ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದರು.

ದ್ವಿತೀಯ ವಿಕೆಟಿಗೆ ಜತೆಗೂಡಿದ ವಿಲ್‌ ಯಂಗ್‌ ಮತ್ತು ರಚಿನ್‌ ರವೀಂದ್ರ ಸೇರಿಕೊಂಡು ಮೊತ್ತವನ್ನು 109ರ ತನಕ ಏರಿಸಿದರು. ಈ ಹಂತದಲ್ಲಿ ಅಫ್ಘಾನ್‌ ಬೌಲಿಂಗ್‌ ಹರಿತಗೊಂಡಿತು. ಒಂದು ರನ್‌ ಅಂತರದಲ್ಲಿ 3 ವಿಕೆಟ್‌ ಕೆಡವಿ ಮೇಲುಗೈ ಸಾಧಿಸಿತು. ಒಂದಕ್ಕೆ 109 ರನ್‌ ಮಾಡಿದ್ದ ಕಿವೀಸ್‌, 110ಕ್ಕೆ ತಲುಪುವಷ್ಟರಲ್ಲಿ 4 ವಿಕೆಟ್‌ ಕಳೆದುಕೊಂಡಿತು.

ಈ ಹಂತದಲ್ಲಿ ಅಫ್ಘಾನಿಸ್ಥಾನ ಪಂದ್ಯದ ಮೇಲೆ ಹಿಡಿತ ಸಾಧಿಸಬಹುದೆಂಬ ನಿರೀಕ್ಷೆ ದಟ್ಟವಾಗಿತ್ತು. ಆದರೆ ಉಸ್ತುವಾರಿ ನಾಯಕ ಟಾಮ್‌ ಲ್ಯಾಥಂ ಮತ್ತು ಗ್ಲೆನ್‌ ಫಿಲಿಪ್ಸ್‌ ಸೇರಿಕೊಂಡು ತಂಡವನ್ನು ದೊಡ್ಡ ಸಂಕಟ ದಿಂದ ಪಾರುಮಾಡಿದರು. ಕೊನೆ ಯಲ್ಲಿ ಸವಾಲಿನ ಮೊತ್ತ ದಾಖಲಿಸುವಲ್ಲಿ ನ್ಯೂಜಿಲ್ಯಾಂಡ್‌ ಯಶಸ್ವಿಯಾಯಿತು.

Advertisement

110ರ ಒಳಗೆ ಪೆವಿಲಿಯನ್‌ ಸೇರಿ ಕೊಂಡವರೆಂದರೆ ಕಾನ್ವೇ (20), ರಚಿನ್‌ ರವೀಂದ್ರ (32), ವಿಲ್‌ ಯಂಗ್‌ (54) ಮತ್ತು ಡ್ಯಾರಿಲ್‌ ಮಿಚೆಲ್‌ (1). ಅಜ್ಮತುಲ್ಲ ಒಮರ್‌ಜಾಯ್‌, ಮುಜೀಬ್‌ ಉರ್‌ ರೆಹಮಾನ್‌ ಮತ್ತು ರಶೀದ್‌ ಖಾನ್‌ ಈ ಹಂತದಲ್ಲಿ ಅತ್ಯಂತ ಘಾತಕವಾಗಿ ಪರಿಣಮಿಸಿದರು. ಇದನ್ನು ನಿಭಾಯಿಸಿ ನಿಂತ ಯಂಗ್‌ 64 ಎಸೆತ ಎದುರಿಸಿ 54 ರನ್‌ ಬಾರಿಸಿದರು (4 ಬೌಂಡರಿ, 3 ಸಿಕ್ಸರ್‌).

144 ರನ್‌ ಜತೆಯಾಟ
5ನೇ ವಿಕೆಟಿಗೆ ಜತೆಗೂಡಿದ ಟಾಮ್‌ ಲ್ಯಾಥಂ-ಗ್ಲೆನ್‌ ಫಿಲಿಪ್ಸ್‌ ಕ್ರೀಸ್‌ ಆಕ್ರಮಿಸಿ ಕೊಳ್ಳುವುದರೊಂದಿಗೆ ನ್ಯೂಜಿ ಲ್ಯಾಂಡ್‌ ಚೇತರಿಕೆ ಕಾಣುತ್ತ ಹೋಯಿತು. ಇಬ್ಬರೂ ನಿಧಾನವಾಗಿ ಕಿವೀಸ್‌ ಇನ್ನಿಂಗ್ಸ್‌ ಬೆಳೆಸ  ತೊಡಗಿದರು. ರನ್‌ಗತಿ ಏರುತ್ತ ಹೋಯಿತು. ಮೇಲುಗೈ ನಿರೀಕ್ಷೆಯಲ್ಲಿದ್ದ ಅಫ್ಘಾನ್‌ ಬೌಲರ್ ಹತಾಶರಾದರು.

ಲ್ಯಾಥಂ-ಫಿಲಿಪ್ಸ್‌ ಜೋಡಿಯಿಂದ 5ನೇ ವಿಕೆಟಿಗೆ 144 ರನ್‌ ಹರಿದು ಬಂತು. ಇಬ್ಬರೂ ಚೆನ್ನೈ ಅಂಗಳದಲ್ಲಿ ಚೆಂದದ ಆಟವಾಡಿ ಅರ್ಧ ಶತಕಗಳೊಂದಿಗೆ ಮೆರೆದರು. ಆಕ್ರಮಣಕಾರಿಯಾಗಿ ಬ್ಯಾಟ್‌ ಬೀಸಿದ ಫಿಲಿಪ್ಸ್‌ ಅವರದು ಸರ್ವಾಧಿಕ 71 ರನ್‌ ಕೊಡುಗೆ. ಬೀಸಿದ್ದು 4 ಫೋರ್‌, 4 ಸಿಕ್ಸರ್‌. ಲ್ಯಾಥಂ 74 ಎಸೆತ ನಿಭಾಯಿಸಿ 68 ರನ್‌ ಹೊಡೆದರು. ಇದರಲ್ಲಿ 3 ಬೌಂಡರಿ, 2 ಸಿಕ್ಸರ್‌ ಒಳಗೊಂಡಿತ್ತು. ಇವರಿಬ್ಬರು ನಿರ್ಗಮಿಸಿದ ಬಳಿಕ ಮಾರ್ಕ್‌ ಚಾಪ್‌ಮನ್‌ ಪಟಪಟನೆ 25 ರನ್‌ ಹೊಡೆದರು.

Advertisement

Udayavani is now on Telegram. Click here to join our channel and stay updated with the latest news.

Next