ಅಕ್ಲೆಂಡ್: ನ್ಯೂಜಿಲೆಂಡ್‌ನಲ್ಲಿ ನಡೆದ ಸಂಸತ್ ಚುನಾವಣೆ ಫಲಿತಾಂಶ ಶನಿವಾರ ಹೊರಬಿದ್ದಿದ್ದು, ಆಡಳಿತರೂಢ ನ್ಯೂಜಿಲೆಂಡ್ ಲೇಬರ್ ಪಕ್ಷದ ವಿರುದ್ಧ ಕನ್ಸರ್ವೇಟಿವ್ ಪಕ್ಷವು ಅಭೂತಪೂರ್ವ ಜಯ ಗಳಿಸಿದೆ. ಮಾಜಿ ಉದ್ಯಮಿ, ಕನ್ಸರ್ವೇಟಿವ್ ಪಕ್ಷದ ನಾಯಕ ಕ್ರಿಸ್ಟೋಫರ್ ಲುಕ್ಸಾನ್ ಮುಂದಿನ ನ್ಯೂಜಿಲೆಂಡ್ ಪ್ರಧಾನಿ ಆಗುವುದು ಬಹುತೇಕ ಖಚಿತವಾಗಿದೆ.
ಆರು ವರ್ಷಗಳ ಕಾಲ ನ್ಯೂಜಿಲೆಂಡ್‌ನಲ್ಲಿ ಆಡಳಿತ ನಡೆಸಿದ ಲೇಬರ್ ಪಕ್ಷದ ಸರ್ಕಾರದ ವಿರುದ್ಧ ಅಡಳಿತ ವಿರೋಧಿ ಅಲೆಯ ಹಿನ್ನೆಲೆಯಲ್ಲಿ ಕನ್ಸರ್ವೇಟಿವ್ ಪಕ್ಷದ ಪರವಾಗಿ ಅಲ್ಲಿನ ನಾಗರಿಕರು ಒಲವು ವ್ಯಕ್ತಪಡಿಸಿದ್ದಾರೆ.
ಈ ಹಿಂದಿನ ಚುನಾವಣೆಯಲ್ಲಿ ಲೇಬರ್ ಪಕ್ಷ ಅಧಿಕಾರಕ್ಕೆ ಬಂದು ಜೆಸಿಂದಾ ಅರ್ಡೆರ್ನ್ ಪ್ರಧಾನಿಯಾಗಿದ್ದರು. ಆದರೆ ಕೊರೊನಾ ಪರಿಸ್ಥಿತಿ ನಿಭಾಯಿಸುವಲ್ಲಿ ಹಾಗೂ ಹಣದುಬ್ಬರವನ್ನು ನಿಯಂತ್ರಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ಅವರು ಪ್ರಧಾನಿ ಹುದ್ದೆಗೆ ಕಳೆದ ಜನವರಿಯಲ್ಲಿ ರಾಜೀನಾಮೆ ನೀಡಿದ್ದರು. ನಂತರ 9 ತಿಂಗಳ ಕಾಲ ಪ್ರಧಾನಿಯಾಗಿ ಕ್ರಿಸ್ ಹಿಪ್‌ಕಿನ್ಸ್ ಆಡಳಿತ ನಡೆಸಿದ್ದರು. ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ಬಳಸಿಕೊಂಡ ಕ್ರಿಸ್ಟೋಫರ್ ಲುಕ್ಸಾನ್ ನೇತೃತ್ವದ ಕನ್ಸರ್ವೇಟಿವ್ ಪಕ್ಷವು, ಜನರ ಒಲುವು ಗಳಿಸುವ ಮೂಲಕ ಭರ್ಜರಿ ಜಯ ಸಾಧಿಸಿದೆ.
ಭಾರತೀಯ ಮೂಲದವರು:
ಮಹೇಶ್ ಮುರಳೀಧರ್, ಶಿವ ಕಿಲಾರಿ, ನವತೇಜ್ ಸಿಂಗ್ ರಂಧಾವಾ ಸೇರಿದಂತೆ 12 ಮಂದಿ ಭಾರತೀಯ ಮೂಲದವರು ಈ ಬಾರಿ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ.