Advertisement

World Cup: ಕಿವೀಸ್‌ ಗೆಲುವಿಗೆ ಆಸರೆಯಾದ ರಚಿನ್‌ ಕನ್ನಡಿಗ !

01:22 AM Oct 06, 2023 | Team Udayavani |

ಬೆಂಗಳೂರು: ನ್ಯೂಜಿಲೆಂಡ್‌ ಆಲ್‌ರೌಂಡರ್‌, 23 ವರ್ಷದ ರಚಿನ್‌ ರವೀಂದ್ರ ಗುರುವಾರ ದೊಡ್ಡ ಸದ್ದು ಮಾಡಿದ್ದಾರೆ. ಅವರು ಇಂಗ್ಲೆಂಡ್‌ ವಿರುದ್ಧ ವಿಶ್ವಕಪ್‌ ಉದ್ಘಾಟನ ಪಂದ್ಯದಲ್ಲಿ ಕೇವಲ 96 ಎಸೆತಗಳಲ್ಲಿ 123 ರನ್‌ ಸಿಡಿಸಿದರು. ವಿಶೇಷ ಎಂದರೆ ರಚಿನ್‌ ಅವರ ತಂದೆ-ತಾಯಿ, ಅಜ್ಜ -ಅಜ್ಜಿ ಬೆಂಗಳೂರಿನವರು! ಈ ಹಿನ್ನೆಲೆಯಲ್ಲಿ ರಚಿನ್‌ ಅಜ್ಜ, ಬಾಲಕೃಷ್ಣ ಅಡಿಗ “ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿದ್ದಾರೆ.

Advertisement

ರಚಿನ್‌ಗೆ ಕ್ರಿಕೆಟ್‌ ಆಸಕ್ತಿ ಉಂಟಾದದ್ದು ಹೇಗೆ?
ರಚಿನ್‌ನ ತಂದೆ ರವೀಂದ್ರ ಅವರಿಗೆ ಕ್ರಿಕೆಟ್‌ನಲ್ಲಿ ವಿಪರೀತ ಆಸಕ್ತಿಯಿತ್ತು. ನ್ಯೂಜಿಲೆಂಡ್‌ನ‌ಲ್ಲಿ ಸಾಫ್ಟ್ವೇರ್‌ ಎಂಜಿನಿಯರ್‌ ಆಗಿದ್ದಾರೆ. ಅಪ್ಪನ ಕ್ರಿಕೆಟ್‌ ಆಸಕ್ತಿಯೇ ಮಗನಲ್ಲೂ ಬೆಳೆಯಿತು.

ರಚಿನ್‌ಗೆ ಕನ್ನಡ ಬರುತ್ತದಾ?
ರಚಿನ್‌ ಹುಟ್ಟಿದ್ದು, ಬೆಳೆದದ್ದೆಲ್ಲ ಸಂಪೂರ್ಣ ನ್ಯೂಜಿಲೆಂಡ್‌ನ‌ಲ್ಲೇ. ಆದರೂ ಅವನಿಗೆ ಕನ್ನಡ ಚೆನ್ನಾಗಿ ಅರ್ಥವಾಗುತ್ತದೆ. ನಿರರ್ಗಳವಾಗಿ ಅಲ್ಲದಿದ್ದರೂ ಕನ್ನಡ ಮಾತನಾಡಬಲ್ಲ.

ಕರ್ನಾಟಕದೊಂದಿಗೆ ರಚಿನ್‌ನ ಬಾಂಧವ್ಯ ಹೇಗಿದೆ?
ರಚಿನ್‌ ಪ್ರತೀವರ್ಷ ಕರ್ನಾಟಕಕ್ಕೆ ತಂದೆ-ತಾಯಿಯೊಂದಿಗೆ ಬರುತ್ತಾನೆ. ಬೆಂಗ ಳೂರಿನಲ್ಲಿ ಕ್ರಿಕೆಟ್‌ ಅಭ್ಯಾಸವನ್ನೂ ನಡೆಸಿದ್ದಾನೆ. ಇಲ್ಲಿನ ಸಂಸ್ಕೃತಿ, ಊಟ-ಉಪಾಹಾರ ಎಂದರೆ ಅವನಿಗೆ ಬಹಳ ಇಷ್ಟ. ಬಂದಾಗ ನಮ್ಮೊಂದಿಗೆ ಬಹಳ ಕಾಲ ಕಳೆಯುತ್ತಾನೆ.

ರಚಿನ್‌ ಅಂದರೆ ರಾಹುಲ್‌ -ಸಚಿನ್‌!
ರಚಿನ್‌ಗೆ ಈ ಹೆಸರು ಬರಲು ವಿಶೇಷ ಕಾರಣವಿದೆ. ಅವನ ತಂದೆ ರವೀಂದ್ರ ಅವರಿಗೆ ರಾಹುಲ್‌ ದ್ರಾವಿಡ್‌ ಮತ್ತು ಸಚಿನ್‌ ತೆಂಡುಲ್ಕರ್‌ ಮೇಲೆ ಬಹಳ ಅಭಿಮಾನ. ಹೀಗಾಗಿ ರಾಹುಲ್‌ ಮತ್ತು ಸಚಿನ್‌ ಹೆಸರಿನ ಅಕ್ಷರಗಳನ್ನು ತೆಗೆದು ಕೊಂಡು ಮಗನಿಗೆ ರಚಿನ್‌ ಎಂದು ಹೆಸರಿಟ್ಟಿದ್ದಾರೆ.

Advertisement

ರಚಿನ್‌ ಅವರ ತಾಯಿ ದೀಪಾ ಅವರು ಬಾಲಕೃಷ್ಣ ಅಡಿಗರ ಪುತ್ರಿ. ಅಜ್ಜ ಬಾಲಕೃಷ್ಣ ಅಡಿಗರು ವಿಜಯ ಕಾಲೇಜಿನ ನಿವೃತ್ತ ಪ್ರಾಂಶುಪಾಲರು, ಪ್ರಾಣಿಶಾಸ್ತ್ರದ ಪ್ರೊಫೆಸರ್‌ ಕೂಡ ಹೌದು. ಬಾಲಕೃಷ್ಣ ಅಡಿಗರ ಪೂರ್ವಜರು ಉಡುಪಿ ಜಿಲ್ಲೆಯ ನೀಲಾವರ ಮೂಲದವರು.

Advertisement

Udayavani is now on Telegram. Click here to join our channel and stay updated with the latest news.

Next