Advertisement

ಹೊಸ ವರ್ಷಾಚರಣೆ ಭದ್ರತೆ ಹೊಣೆ ನಮ್ದು

04:20 PM Dec 16, 2017 | Team Udayavani |

ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ಜರುಗದಂತೆ ಸೂಕ್ಷ್ಮ ಪ್ರದೇಶಗಳೂ ಸೇರಿ ನಗರಾದ್ಯಂತ ಬಿಗಿ ಪೊಲೀಸ್‌ ಭದ್ರತೆ ಕೈಗೊಳ್ಳುವುದಾಗಿ ಪೊಲೀಸ್‌ ಇಲಾಖೆ ಹೈಕೋರ್ಟ್‌ಗೆ ತಿಳಿಸಿದೆ.

Advertisement

ಈ ಸಂಬಂಧ ನಗರ ಪೊಲೀಸ್‌ ಆಯುಕ್ತ ಟಿ. ಸುನೀಲ್‌ಕುಮಾರ್‌ ನ್ಯಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್‌ನ್ನು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ.ಎಸ್‌ ಪೊನ್ನಣ್ಣ  ಶುಕ್ರವಾರ ಹಂಗಾಮಿ ಮುಖ್ಯನ್ಯಾಯಮೂರ್ತಿ ಎಚ್‌.ಜಿ.ರಮೇಶ್‌ ಹಾಗೂ ನ್ಯಾಯಮೂರ್ತಿ ಪಿ.ಎಸ್‌ ದಿನೇಶ್‌ಕುಮಾರ್‌ ಅವರಿದ್ದ ವಿಭಾಗೀಯ ಪೀಠಕ್ಕೆ ಸಲ್ಲಿಸಿದರು.

ಡಿಸೆಂಬರ್‌ 31 ಹಾಗೂ ಜನವರಿ 1ರಂದು ಯಾವುದೇ ಸಮಾಜಘಾತುಕ ಘಟನೆಗಳು ಜರುಗದಂತೆ ತಡೆಯುವ ಸಲುವಾಗಿ ನಗರಾದ್ಯಂತ ಒಬ್ಬರು ಎಡಿಜಿಪಿ, 4 ಮಂದಿ ಐಜಿಪಿ ದರ್ಜೆ ಅಧಿಕಾರಿಗಳು, ಆಯಾ ವಲಯದ ಡಿಸಿಪಿಗಳು ಸೇರಿದಂತೆ ಉನ್ನತ ಅಧಿಕಾರಿಗಳ ನೇತೃತ್ವದಲ್ಲಿ ಮಹಿಳಾ ಸಿಬ್ಬಂದಿಯೂ ಸೇರಿ 10 ಸಾವಿರಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಎಲ್ಲ ಸಿಬ್ಬಂದಿ ಡಿ.31ರಂದು ಸಂಜೆ 4 ಗಂಟೆಯಿಂದ ಕರ್ತವ್ಯದಲ್ಲಿ ತೊಡಗಿಕೊಳ್ಳಲ್ಲಿದ್ದು ಮುಂಜಾನೆಯವರೆಗೂ ವಿವಿಧ  ಭಾಗಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಜೊತೆಗೆ ಸೂಕ್ಷ್ಮ ಹಾಗೂ ಪ್ರಮುಖ ಕೇಂದ್ರಗಳಲ್ಲಿ ಹೊಯ್ಸಳ, ಗರುಡ ಪಡೆ, ಪಿಂಕ್‌ ಹೊಯ್ಸಳ, ಗಸ್ತು ತಿರುಗಲಿವೆ.

ಈಗಾಗಲೇ ಹಲವು ಸೂಕ್ಷ್ಮ ಪ್ರದೇಶಗಳನ್ನು ಗುರ್ತಿಸಲಾಗಿದ್ದು, ಮಫ್ತಿ ಪೊಲೀಸರ ನಿಗಾವಣೆಯಿರಲಿದೆ. ನಗರಾದ್ಯಂತ ನಿಗಾವಹಿಸಿ ಕಟ್ಟೆಚ್ಚರ ವಹಿಸಲಾಗಿದ್ದು, ನಿಯಮಗಳನ್ನು ಉಲ್ಲಂ ಸಿದವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

Advertisement

ಹೆಚ್ಚುವರಿಯಾಗಿ 200 ಸಿಸಿಕ್ಯಾಮೆರಾಗಳ ಅಳವಡಿಕೆ!: ಸಾರ್ವಜನಿಕ ಪ್ರದೇಶಗಳೂ ಸೇರಿ ನಗರದ ವಿವಧೆಡೆ 715 ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿದೆ. ಹೊಸ ವರ್ಷಾಚರಣೆ ಸಲುವಾಗಿ ಹೆಚ್ಚುವರಿಯಾಗಿ 200  ಸಿಸಿಟಿವಿ ಕ್ಯಾಮೆರಾಗಳನ್ನು ಬೃಹತ್‌ ಕಟ್ಟಡಗಳು, ಪ್ರಮುಖ ರಸ್ತೆಗಳು, ಸೂಕ್ಷ್ಮ ಪ್ರದೇಶಗಳಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ.

ಈ ಕ್ಯಾಮೆರಾಗಳ ಪ್ರತಿ ದೃಶ್ಯಾವಳಿಗಳ ನಿಗಾವಣೆಯನ್ನು ಕಂಟ್ರೋಲ್‌ ರೂಂನಲ್ಲಿ ಪರೀಕ್ಷಿಸಲಾಗುತ್ತಿರುತ್ತದೆ. ಯಾವುದೇ ಪ್ರದೇಶದಲ್ಲಿ ಅಹಿತಕರ ಘಟನೆ ಜರುಗುವ ಸಂಭವ ಮುನ್ನವೇ ಎಚ್ಚೆತ್ತುಕೊಳ್ಳಲು ಸಹಕಾರಿಯಾಗಲಿದೆ. ವಿದ್ಯುತ್‌ ಸಂಪರ್ಕ ಕಡಿತಗೊಳಿಸದಂತೆಯೂ ಬೆಸ್ಕಾಂ  ಜೊತೆ ಚರ್ಚಿಸಲಾಗಿದೆ ಎಂದು ಉಲ್ಲೇಖೀಸಿದ್ದಾರೆ. 

11 ಗಂಟೆ ಬಳಿಕ ಎಂಜಿ ರಸ್ತೆಗೆ ಪ್ರವೇಶ ನಿರ್ಬಂಧ: ಡಿಸೆಂಬರ್‌  31ರಂದು ರಾತ್ರಿ 11 ಗಂಟೆ ನಂತರ ಎಂಜಿ ರಸ್ತೆ ಹಾಗೂ ಬ್ರಿಗೇಡ್‌ ರಸ್ತೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ನಿರೀಕ್ಷೆಗೂ ಮೀರಿ ಜನ ಭಾರೀ ಜನಸಮೂಹ ಸೇರುವುದನ್ನು ತಡೆಗಟ್ಟುವ ಸಲುವಾಗಿ ಈ ಕ್ರಮ ವಹಿಸಲಾಗಿದೆ. ಅಲ್ಲದೆ ನಗರದ ಫ್ಲೈಓವರ್‌ ರಸ್ತೆಗಳಲ್ಲಿ ಹೊಸವರ್ಷಾಚರಣೆ ನಿರ್ಬಂಧಿಸಲಾಗಿದೆ.  

ಟ್ರಾಫಿಕ್‌ ನಿಯಮಗಳ ಉಲ್ಲಂಘನೆ ಹಾಗೂ ಸಾಮಾಜಿಕ ಸ್ವಾಸ್ಥಕ್ಕೆ ಧಕ್ಕೆಯುಂಟು ಮಾಡಲು ಯತ್ನಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳ ಮೂಲಕ ಜಾಗೃತಿ ಪ್ರಚಾರ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ತಿಳಿಸಲಾಗಿದೆ.

-10 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ
-ಡಿ.31ರ ಸಂಜೆ 4ರಿಂದಲೇ ಕರ್ತವ್ಯ ಆರಂಭ
-ಹೊಯ್ಸಳ, ಗರುಡ ಪಡೆ, ಪಿಂಕ್‌ ಹೊಯ್ಸಳ ಗಸ್ತು
-200 ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ
-ನಿಯಮಗಳನ್ನು ಉಲ್ಲಂ ಸಿದವರ ವಿರುದ್ಧ ಕ್ರಮ

ನಿಯೋಜಿತ ಪೊಲೀಸ್‌ ಸಿಬ್ಬಂದಿ
ಎಡಿಜಿಪಿ    1 
ಐಜಿಪಿ    4
ಡಿಐಜಿ    2 
ಡಿಸಿಪಿ    19 
ಎಸಿಪಿ    49 
ಇನ್ಸಪೆಕ್ಟರ್‌    205 
ಪಿಎಸ್‌ಐ    422
ಎಎಸ್‌ಐ    732 
ಪೊಲೀಸ್‌ ಪೇದೆ    7670 
ಗೃಹರಕ್ಷಕ ದಳ    1000 
ಅಗ್ನಿಶಾಮಕ ದಳ    3

Advertisement

Udayavani is now on Telegram. Click here to join our channel and stay updated with the latest news.

Next