Advertisement

ಹೊಸ ವರ್ಷದ ಸಂಭ್ರಮ: ಪ್ರವಾಸಿ ತಾಣಗಳಲ್ಲಿ ಜನವೋ ಜನ

10:12 PM Jan 01, 2023 | Team Udayavani |

ಬೆಂಗಳೂರು: ಹೊಸ ವರ್ಷಾಚರಣೆ ಸಂಭ್ರಮದ ಹಿನ್ನೆಲೆಯಲ್ಲಿ ಭಾನುವಾರ ರಾಜ್ಯದ ಹಲವು ಪ್ರವಾಸಿ ತಾಣ ಹಾಗೂ ದೇವಾಲಯಗಳು ಪ್ರವಾಸಿಗರು ಹಾಗೂ ಭಕ್ತರಿಂದ ತುಂಬಿ ತುಳುಕುತ್ತಿತ್ತು.

Advertisement

ಕಳೆದೆರೆ ಡು ವರ್ಷ ಕೊರೊನಾ ಸೋಂಕು ಇನ್ನಿಲ್ಲದಂತೆ ಕಾಡಿದ ಪರಿಣಾಮ 2021, 2022ರ ವರ್ಷಾಚರಣೆ ಕಳೆಗಟ್ಟಿರಲಿಲ್ಲ. ಅನೇಕ ನಿರ್ಬಂಧಗಳಿಂದಾಗಿ ಜನರೂ ಉತ್ಸಾಹದಿಂದ ಭಾಗವಹಿಸಿರಲಿಲ್ಲ. ಆದರೆ, ಈ ಬಾರಿ ಕೋವಿಡ್‌ ಭಯದಿಂದ ಹೊರಬಂದಿರುವ ಜನರು, ಪ್ರವಾಸಿಗರು ಉತ್ಸಾಹದಿಂದ ವರ್ಷಾಚರಣೆಯಲ್ಲಿ ಮಿಂದೆದ್ದರು.

ವರ್ಷದ ಮೊದಲ ದಿನವನ್ನು ದೇವರ ದರ್ಶನದ ಮೂಲಕ ಆರಂಭಿಸುವ ಸಲುವಾಗಿ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಮೈಸೂರಿನ ಚಾಮುಂಡಿಬೆಟ್ಟ, ಮಂತ್ರಾಲಯ ಸೇರಿ ಪ್ರಮುಖ ದೇಗುಲಗಳಲ್ಲಿ ಭಕ್ತರ ದಂಡೇ ನೆರೆದಿತ್ತು. ಭಾನುವಾರ ಮುಂಜಾನೆಯೇ ನಗರದ ವಿವಿಧ ದೇವಸ್ಥಾನಗಳಿಗೆ ತೆರಳಿದ ಸಾರ್ವಜನಿಕರು, ಹೊಸ ವರ್ಷವನ್ನು ದೇವರ ದರ್ಶನದ ಮೂಲಕ ಆರಂಭಿಸಿದರು. ಪ್ರವಾಸಿತಾಣಗಳಲ್ಲಿ ಹೋಟೆಲ್‌, ರೆಸಾರ್ಟ್‌, ಕ್ಲಬ್‌, ಪಬ್‌ಗಳು ಅಲಂಕಾರಗೊಂಡು ಪ್ರವಾಸಿಗರನ್ನು ಸ್ವಾಗತಿಸಿದವು.

ಕರ್ನಾಟಕದ ಊಟಿಯೆಂದೇ ಖ್ಯಾತಿ ಹೊಂದಿರುವ ಚಿಕ್ಕಬಳ್ಳಾಪುರದ ನಂದಿಗಿರಿಧಾಮದಲ್ಲಿ ಜನಸಾಗರವೇ ಹರಿದುಬಂದಿತ್ತು. ಜಿಲ್ಲೆಯೂ ಸೇರಿದಂತೆ ರಾಜ್ಯ-ಹೊರ ರಾಜ್ಯ ಮತ್ತು ದೇಶದ ವಿವಿಧ ಭಾಗಗಳಿಂದ ಸಹಸ್ರಾರು ಜನ ಆಗಮಿಸಿದ್ದರು.

ಹೊಸ ವರ್ಷದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಸರ್ಕಾರ ನಿಷೇಧಾಜ್ಞೆ ಹೇರಿದ್ದರಿಂದಾಗಿ ಭಕ್ತರು ದೇಗುಲಗಳಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಗಂಜಾಂನ ನಿಮಿಷಾಂಬ ದೇಗುಲ, ಶ್ರೀರಂಗನಾಥಸ್ವಾಮಿ ದೇಗುಲ, ಕಾವೇರಿ ಸಂಗಮ, ಟಿಪ್ಪು ಬೇಸಿಗೆ ಅರಮನೆ, ಟಿಪ್ಪು ಸಮಾಧಿ, ಗುಂಬಸ್‌, ಶ್ರೀರಂಗನ ತಿಟ್ಟು ಪಕ್ಷಿಧಾಮಕ್ಕೆ ಭೇಟಿ ನೀಡಿ ಹೊಸ ವರ್ಷಾಚರಣೆ ಆಚರಿಸಿದರು.

Advertisement

ವರ್ಷಾಚರಣೆಗೆ ಸಹಸ್ರಾರು ಭಕ್ತರು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಆಗಮಿಸಿದ್ದರು. ವಾರಂತ್ಯ ಇರುವ ಕಾರಣ ಬೆಂಗಳೂರು ಸೇರಿದಂತೆ ನಾನಾ ಭಾಗದಿಂದ ಭಕ್ತರು ರಾಯರ ಮಠಕ್ಕೆ ಶನಿವಾರವೇ ಆಗಮಿಸಿ ಮಠದಲ್ಲಿ ತಂಗಿದ್ದರು. ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನಗೈದು ರಾಯರ ಮೂಲ ಬೃಂದಾವನ ದರ್ಶನ ಪಡೆದರು. ಭಕ್ತರು ಸಂಖ್ಯೆ ಹೆಚ್ಚಾಗಿದ್ದು, ದರ್ಶನಕ್ಕೆ ಸಾಲುಗಟ್ಟಿದ್ದ ದೃಶ್ಯಗಳು ಕಂಡು ಬಂದವು. ನಟ, ಸಂಸದ ಜಗ್ಗೇಶ್‌ ಕೂಡ ಭಾನುವಾರ ರಾಯರ ಮಠಕ್ಕೆ ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next