Advertisement
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಗುರುವಾರ ಸಂಜೆ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲುರಂಗ ಮಂದಿರದಲ್ಲಿ ಏರ್ಪಡಿಸಲಾದ “ಆಳ್ವಾಸ್ ದೀಪಾವಳಿ-2024’ರಲ್ಲಿ ಸರ್ವಪರ್ಣಿಕ ಮರದ ಬಲಿಯೇಂದ್ರ ಕಂಬದ ದೀಪ ಪ್ರಜ್ವಲಿಸುವ ಮೂಲಕ ಡಾ| ಎಂ. ಮೋಹನ ಆಳ್ವ ಅವರು ನಾಡಿನ ಸಮೃದ್ಧಿಗಾಗಿ ಪ್ರಾರ್ಥಿಸಿ, ಅಜ್ಞಾನ ಹಾಗೂ ಅಂಧಕಾರ ತೊಡೆದು ದೀಪ ಹಚ್ಚೋಣ. ಜಾತಿ ಧರ್ಮ, ಕುಲ ಮತ ಎನ್ನದೇ ಸಂಬಂಧ ಬೆಳಗೋಣ. ಎಲ್ಲರೂ ಒಂದಾಗಿ ಬೆಳೆಯೋಣ ಎಂದರು.
15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ಸಹಿತ ಪೋಷಕರು, ಸ್ಥಳೀಯರು ಸೇರಿ 20 ಸಾವಿರಕ್ಕೂ ಅಧಿಕ ಮಂದಿಯ ಉಪಸ್ಥಿತಿಯಲ್ಲಿ ದೀಪಾವಳಿಯ ಎಲ್ಲ ವಿಧಿವಿಧಾನಗಳನ್ನು ಪ್ರಸ್ತುತಪಡಿಸಲಾಯಿತು. ಗೋ ಪೂಜೆ, ತುಳಸಿ ಪೂಜೆ, ಕದಿರು ಕಟ್ಟಿ ಮನೆ ತುಂಬಿಸುವ ಕ್ರಮ, ಕಳಸೆ, ನೇಗಿಲು, ನೊಗ, ಮುಡಿ ಕಟ್ಟುವ ಕೊದಂಟಿ ಸೇರಿದಂತೆ ಸಮಗ್ರ ಕೃಷಿ ಪರಿಕರಗಳು, ಹಣ್ಣು ಹಂಪಲು, ಕರಾವಳಿಯ ಗದ್ದೆಯ ನಾಟಿಯ ತರಕಾರಿ ಬೆಳೆಗಳು, ದವಸ ಧಾನ್ಯಗಳ ಪೂಜೆ ನಡೆದವು.
Related Articles
ನೀಲಕಂಠನ ಆರಾಧನೆಯ “ಭೋ ಶಂಭೋ, ಶಿವ ಶಂಭೋ, ಶಾಸ್ತ್ರೀಯ ನೃತ್ಯ, ಕೃಷ್ಣ -ರಾಧೆಯರ ಮೋಹಕತೆಯ ನೃತ್ಯ, ಗುಜರಾತಿನ ಗಾರ್ಭ, ಮತ್ತು ದಾಂಡಿಯಾ, ರಾಧಾ-ಶ್ಯಾಮ ನರ್ತನ, ಬಡಗುತಿಟ್ಟು ಯಕ್ಷಗಾನ ರಾಸಲೀಲೆ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಅಗ್ನಿಯ ಆಟ, ಕೇರಳದ ಚೆಂಡೆ ಹಾಗೂ ತಾಳದ ನಾದ, ಮಲ್ಲಕಂಬ ಮತ್ತು ರೋಪ್ ಕಸರತ್ತು, ಆಳ್ವಾಸ್ ತಾಂತ್ರಿಕ ವಿದ್ಯಾರ್ಥಿಗಳ ಡೊಳ್ಳು ಕುಣಿತ, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ಕಥಕ್ ನೃತ್ಯ “ವರ್ಷಧಾರೆ, ಗೊಂಬೆ ವಿನೋದಾವಳಿ ನೃತ್ಯ ಮತ್ತು ಆಕರ್ಷಕ ಸುಡುಮದ್ದು ಪ್ರದರ್ಶನ ಎಲ್ಲವೂ ದೀಪಾವಳಿಯ ಸಾಂಸ್ಕೃತಿಕ ಕಲಾಪಗಳ ವಿಶೇಷತೆಯಾಗಿ ಮೂಡಿಬಂದವು.
ಶಾಸಕ ಉಮಾನಾಥ ಕೋಟ್ಯಾನ್, ಉದ್ಯಮಿ ಕೆ. ಶ್ರೀಪತಿ ಭಟ್, ಮಾಜಿ ಸಚಿವ ಅಭಯಚಂದ್ರ, ಚೌಟರ ಅರಮನೆ ಕುಲದೀಪ ಎಂ. ಐಕಳ ಹರೀಶ್ ಶೆಟ್ಟಿ, ಸಂಗೀತ ನಿರ್ದೇಶಕ ವಿ. ಮನೋಹರ್, ಜಯಶ್ರೀ ಅಮರನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ವೇಣುಗೋಪಾಲ ಶೆಟ್ಟಿ, ನಿತೇಶ್ ಮಾರ್ನಾಡು, ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು.
Advertisement