ದಾವಣಗೆರೆ: ಕೋವಿಡ್ ಹಿನ್ನೆಲೆಯಲ್ಲಿ ಕೈಗಾರಿಕೆಗಳು ಸಾಕಷ್ಟು ಹಿಂಜರಿತ ಕಂಡಿವೆ. ಇದರ ಬೆನ್ನಲ್ಲೇ ಕೈಗಾರಿಕೋದ್ಯಮಿಗಳನ್ನು ಪ್ರೋತ್ಸಾಹಿಸಲು ನೂತನ ಕೈಗಾರಿಕಾ ನೀತಿ ಜಾರಿಗೊಂಡಿದ್ದು ಇದು ಮಾದರಿ ನೀತಿಯಾಗಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ.ಬಿ. ಅರಸಪ್ಪ ಹೇಳಿದರು.
ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ ದಾವಣಗೆರೆ ಇವುಗಳ ಸಹಯೋಗದಲ್ಲಿ ಶನಿವಾರ ನಗರದಲ್ಲಿ ಏರ್ಪಡಿಸಲಾಗಿದ್ದ ನೂತನ ಕೈಗಾರಿಕಾ ನೀತಿ ಮತ್ತು ಹೂಡಿಕೆ ಅವಕಾಶಗಳು ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೊಸ ಕೈಗಾರಿಕಾ ನೀತಿ ಕ್ರಮಗಳಿಂದಾಗಿ ರಾಜ್ಯವು ಉನ್ನತ ಮಟ್ಟದ ಕೈಗಾರಿಕಾ ಕಾರ್ಯಕ್ಷಮತೆ ಹೊಂದಲು ಸಹಕಾರಿಯಾಗಿದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಕೈಗಾರಿಕೆಗಳು ಸಂಕಷ್ಟದಲ್ಲಿದ್ದು, ಇದರಿಂದ ಸುಧಾರಿಸಿಕೊಳ್ಳಲು ವರ್ಷದವರೆಗೆ ವಿದ್ಯುತ್ ದರ ಹೆಚ್ಚಿಸದಂತೆ ಮನವಿ ಮಾಡಲಾಗಿತ್ತು. ಆದರೂ ದರ ಹೆಚ್ಚಿಸಿರುವುದು ಗಾಯದ ಮೇಲೆ ಬರ ಹಾಕಿದಂತಾಗಿದೆ. ಇದನ್ನು ತಗ್ಗಿಸುವಂತೆ ಕೋರಿದ್ದೇವೆ ಎಂದರು.
ಇದನ್ನೂ ಓದಿ:ಬೀದರ್: ಹಿರಿಯ ಪತ್ರಕರ್ತ ವಿಶ್ವನಾಥ ಪಾಟೀಲ್ ನಿಧನ
ಕೈಗಾರಿಕೆಗಳ ಕಚ್ಚಾವಸ್ತುಗಳ ಬೆಲೆಯೂ ಹೆಚ್ಚಿದೆ. ಇದನ್ನು ನಿಯಂತ್ರಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಮೊದಲು ಕೆಎಸ್‌ಎಸ್ ಐಡಿಸಿ ವತಿಯಿಂದ ಸ್ಟೀಲ್ ಹಂಚಿಕೆ ಮಾಡಲಾಗುತ್ತಿತ್ತು. ಈಗ ಅದೇ ರೀತಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಡಿಪೋ ಸ್ಥಾಪಿಸಿ ಸ್ಟೀಲ್ ಹಂಚಿಕೆ ಮಾಡುವಂತೆ ಮನವಿ ಮಾಡಲಾಗಿದ್ದು, ಕೆಎಸ್‌ಎಸ್ ಐಡಿಸಿ ಎಂಡಿಯವರು ಒಪ್ಪಿದ್ದಾರೆ ಎಂದರು. ಕೈಗಾರಿಕೆ ಮತ್ತು ವಾಣಿಜ್ಯ
ಇಲಾಖೆಯ ಅಪರ ನಿರ್ದೇಶಕಎಚ್.ಎಂ ಶ್ರೀನಿವಾಸ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಜಯಪ್ರಕಾಶ್ ನಾರಾಯಣ, ಗ್ರಾಮೀಣ ವಿಭಾಗದ ಜಂಟಿ ಕಾರ್ಯದರ್ಶಿ ಸಿ.ಸಿ. ಹೊಂಡದಕಟ್ಟಿ, ಕಾಸಿಯಾ ಸದಸ್ಯರಾದ ಶೇಷಾಚಲ, ಮಂಜುನಾಥ ಇದ್ದರು.