Advertisement

PM Modi ವಿರುದ್ಧ ಇಂದು ಆಪ್‌ನಿಂದ ಹೊಸ ಅಭಿಯಾನ

12:52 AM Apr 14, 2024 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ದೇಶದ ಪ್ರಜಾಪ್ರಭುತ್ವವನ್ನು ಮತ್ತು ಸಂವಿಧಾನದ ಮೇಲೆ ನಿರಂತರ ದಾಳಿ ನಡೆಸುತ್ತಿದೆ ಎಂದು ಆರೋಪಿಸಿರುವ ಆಮ್‌ ಆದ್ಮಿ ಪಕ್ಷವು ಎ.14ರ ಅಂಬೇಡ್ಕರ್‌ ಜಯಂತಿಯನ್ನು “ಸಂವಿಧಾನ ಉಳಿಸಿ, ಸರ್ವಾಧಿಕಾರ ತೊಲಗಿಸಿ’ (ಸಂವಿಧಾನ್‌ ಬಚಾವೋ, ತಾನಾಶಾಹಿ ಹಟಾವೋ ದಿವಸ್‌) ದಿನವನ್ನಾಗಿ ಆಚರಿಸುವುದಾಗಿ ಘೋಷಿಸಿದೆ.

Advertisement

ಶನಿವಾರ ಈ ಕುರಿತು ಮಾಹಿತಿ ನೀಡಿದ ಆಪ್‌ ನಾಯಕ ಹಾಗೂ ದಿಲ್ಲಿ ಸಚಿವ ಗೋಪಾಲ್‌ ರೈ, ರವಿವಾರ ದೇಶಾದ್ಯಂತ ಈ ಅಭಿಯಾನ ನಡೆಯಲಿದ್ದು, ಪಕ್ಷದ ಕಾರ್ಯಕರ್ತರು ಸಂವಿಧಾನದ ಪೀಠಿಕೆ ಓದಲಿದ್ದಾರೆ ಮತ್ತು ಸಂವಿಧಾನ ರಕ್ಷಣೆಯ ಶಪಥ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಎಲ್ಲ ರಾಜ್ಯಗಳ ರಾಜಧಾನಿಗಳಲ್ಲಿರುವ ಆಪ್‌ ಕಚೇರಿಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸಿಎಂ ಕೇಜ್ರಿವಾಲ್‌ ಅವರ ಸಲಹೆ ಮೇರೆಗೆ ಇದನ್ನು ಮಾಡುತ್ತಿದ್ದೇವೆ. ದೇಶದ ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ದಾಳಿ ನಡೆಸುತ್ತಿರುವ ಬಿಜೆಪಿಯನ್ನು ಎದುರಿಸಬೇಕೆಂದರೆ ನಾವೆಲ್ಲರೂ ಒಗ್ಗಟ್ಟಾಗಬೇಕಾದ ಅಗತ್ಯವಿದೆ. ಅದಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದೂ ಅವರು ತಿಳಿಸಿದ್ದಾರೆ.

ಕೇಜ್ರಿ ಕುಟುಂಬ ಸದಸ್ಯರ ಭೇಟಿಗೆ ನಕಾರ: ಆರೋಪ
ಅರವಿಂದ್‌ ಕೇಜ್ರಿವಾಲರನ್ನು ವ್ಯಕ್ತಿಗತವಾಗಿ ಭೇಟಿ ಮಾಡಲು ಅವರ ಕುಟುಂಬದ ಸದಸ್ಯರಿಗೆ ತಿಹಾರ್‌ ಜೈಲು ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದು ಆಪ್‌ ನಾಯಕ ಸಂಜಯ್‌ ಸಿಂಗ್‌ ಆರೋಪಿಸಿದ್ದಾರೆ. ಕಬ್ಬಿಣದ ಜಾಳಿಗೆ ಮೂಲಕ ಭೇಟಿಗೆ ಅವಕಾಶ ಕಲ್ಪಿಸುತ್ತಿರುವುದು ಅಮಾನವೀಯ. ಅವರ ನೈತಿಕ ಸ್ಥೈರ್ಯ ಕುಗ್ಗಿಸಲೆಂದೇ ಈ ರೀತಿ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಕೇಜ್ರಿ ಬಂಧನ ಕೇಸ್‌: ನಾಳೆ ಸುಪ್ರೀಂ ವಿಚಾರಣೆ
ಕೇಜ್ರಿವಾಲ್‌ ತಮ್ಮ ಇ.ಡಿ. ಬಂಧನವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಿಚಾರಣೆ ನಡೆಸಲಿದೆ. ಈ ಮೊದಲು ದಿಲ್ಲಿ ಹೈಕೋರ್ಟ್‌, ಕೇಜ್ರಿವಾಲ್‌ ಬಂಧನವನ್ನು ಎತ್ತಿ ಹಿಡಿದಿತ್ತು. ಅದನ್ನು ಪ್ರಶ್ನಿಸಿ ಅವರು ಸುಪ್ರೀಂ ಮೆಟ್ಟಿಲೇರಿದ್ದರು.

Advertisement

25 ಕೋಟಿ ರೂ. ಲಂಚಕ್ಕೆ ಕವಿತಾ ಬೆದರಿಕೆ: ಸಿಬಿಐ
ಆಮ್‌ ಆದ್ಮಿ ಪಾರ್ಟಿ(ಆಪ್‌)ಗೆ 25 ಕೋಟಿ ರೂ. ಲಂಚ ನೀಡಲು ಅರಬಿಂದೋ ಕಂಪೆನಿಯ ಪ್ರವರ್ತಕ ಶರತ್‌ ಚಂದ್ರ ರೆಡ್ಡಿಗೆ ಬಿಆರ್‌ಎಸ್‌ ನಾಯಕಿ ಕೆ.ಕವಿತಾ ಬೆದರಿಕೆ ಹಾಕಿದ್ದರು ಎಂದು ಸಿಬಿಐ, ವಿಶೇಷ ಕೋರ್ಟ್‌ಗೆ ಶನಿವಾರ ತಿಳಿಸಿದೆ. ದಿಲ್ಲಿ ಅಬಕಾರಿ ನೀತಿ ಹಗರಣ ಸಂಬಂಧ ಕವಿತಾ ಅವರೀಗ ತಿಹಾರ್‌ ಜೈಲಿನಲ್ಲಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಕವಿತಾ ಅವರನ್ನು ಕೋರ್ಟ್‌ ಎಪ್ರಿಲ್‌ 15ರ ವರೆಗೂ ಸಿಬಿಐ ವಶಕ್ಕೆ ಒಪ್ಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next