ಆಲಂಕಾರು: ಸೇತುವೆ ಕಾಮಗಾರಿ ಮುಗಿದು ತಿಂಗಳು ಎರಡು ಸಂದರೂ ಉದ್ಘಾಟನೆಯಾಗದೆ ಇದ್ದ ಶಾಂತಿಮೊಗೇರು ಸೇತುವೆಯನ್ನು ಗ್ರಾಮಸ್ಥರೇ ಉದ್ಘಾಟಿಸಿದ ಘಟನೆ ರವಿವಾರ ಬೆಳಗ್ಗೆ ನಡೆಯಿತು. ಕುದ್ಮಾರು ಗ್ರಾಮದ ಶಾಂತಿಮೊಗೇರಿನಲ್ಲಿ ಕುಮಾರಧಾರಾ ನದಿಗೆ ನಿರ್ಮಿಸಲಾದ ಸೇತುವೆಯ ಉದ್ಘಾಟನೆಗೆ ದಿನ ನಿಗದಿಯಾಗಿ 2-3 ದಿವಸಗಳಿರುವಾಗ ಮೂಂದೂಡಲಾಗಿತ್ತು.
ರಾಜಕೀಯ ಕೆಸರಾಟದಲ್ಲಿ ಸೇತುವೆ ಉದ್ಘಾಟನೆ ಈ ಭಾಗದ ಜನತೆಗೆ ಮರೀಚಿಕೆಯಾಯಿತು. ಈ ಹಿಂದೆ ಎರಡು ಬಾರಿ ದಿನಾಂಕ ನಿಗದಿಯಾಗಿ ಮುಂದೂಡಿದ ಬಳಿಕ ಜು. 22ರಂದು ಅಧಿಕೃತವಾಗಿ ಉದ್ಘಾಟನೆಯಾಗಲಿದೆ ಎಂದು ಘೋಷಿಸಲಾಗಿತ್ತು. ಆದರೆ ಆ ದಿನಾಂಕವು ಮುಂದೂಡಿದ ಬಳಿಕ ಇದೀಗ ಆಲಂಕಾರು ಹಾಗೂ ಕುದ್ಮಾರು ಗ್ರಾಮದ ಸಾರ್ವಜನಿಕರೇ ರವಿವಾರ ಬೆಳಗ್ಗೆ ಸೇತುವೆಗೆ ತೆಂಗಿನ ಕಾಯಿ ಒಡೆಯುವುದರ ಮೂಲಕ ಉದ್ಘಾಟಿಸಿ, ಸಿಹಿ ತಿಂಡಿ ವಿತರಿಸಿ ಸಂಭ್ರಮಿಸಿದರು.
ಆಲಂಕಾರು ಗ್ರಾಮದ ಕಯ್ಯಪ್ಪೆ ಜನಾರ್ದನ ಗೌಡ ಮಾತನಾಡಿ, ನಿರೀಕ್ಷಿತ ಪುತ್ತೂರು ತಾಲೂಕಿನ ಕುದ್ಮಾರು ಗ್ರಾಮದ ಶಾಂತಿಮೊಗೇರಿನ ಕುಮಾರಧಾರಾ ನದಿಗೆ ಸೇತುವೆ ನಿರ್ಮಾಣ ವಿಚಾರದಲ್ಲಿ ಜನತೆಗಿದ್ದ ಕಾತರ, ಆತಂಕಕ್ಕೆ ಸುಳ್ಯ ಕೇತ್ರದ ಶಾಸಕ ಎಸ್. ಅಂಗಾರ ತೆರೆ ಎಳೆದಿದ್ದಾರೆ. ರಾಜ್ಯ ದಲ್ಲಿ ಬಿಜೆಪಿ ಸರಕಾರವಿದ್ದಾಗ ಅಂದಿನ ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಅವರನ್ನು ಶಾಂತಿಮೊಗರುವಿಗೆ ಕರೆತಂದು ವಸ್ತುಸ್ಥಿತಿ ಏನೆಂಬುವುದು ಮನವರಿಕೆ ಮಾಡಿದ್ದರು. ಬಳಿಕ ಸೇತುವೆಗೆ ಬೇಕಾದ ಪೂರಕ ಕೆಲಸಕಾರ್ಯಗಳನ್ನು ನಡೆಸಿ ಅನುದಾನವನ್ನು ಬಿಡುಗಡೆಗೊಳಿಸುವಲ್ಲಿ ಸಫಲರಾದರು. ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಟೆಂಡರ್ ಪ್ರಕ್ರಿಯೆ ನಡೆದು ಅನುದಾನ ಬಿಡುಗಡೆಗೊಳಿಸಿ ಸೇತುವೆ ಕಾರ್ಯವನ್ನು ಸುಸೂತ್ರವಾಗಿ ನಡೆಯುವಂತೆ ಮುತುವರ್ಜಿ ವಹಿಸಿದ್ದರು ಎಂದು ನುಡಿದರು. ಸೇತುವೆ ಕಾರ್ಯಕ್ಕೆ ಸಹಕರಿಸಿದ ಎಲ್ಲ ರಾಜಕೀಯ ಮುಖಂಡರನ್ನು ಅಭಿನಂದಿಸಿದರು.
ಇದೇ ಸಂದರ್ಭ ಸೇತುವೆಗಾಗಿ ಆಸ್ತಿ ಕಳೆದುಕೊಂಡ ಸಂತ್ರಸ್ತರು ಮಾಧ್ಯಮದವರೊಂದಿಗೆ ತಮ್ಮ ಅಳಲನ್ನು ತೋಡಿಕೊಂಡರು. ಸೇತುವೆ ಕಾರ್ಯ ಆರಂಭವಾಗುವ ಮುನ್ನ ಸೇತುವೆ ಹಾಗೂ ರಸ್ತೆಗೆ ಬೇಕಾದ ಸ್ಥಳವನ್ನು ನಾವು ನಮ್ಮ ವರ್ಗ ಭೂಮಿಯಿಂದ ಬಿಟ್ಟು ಕೊಟ್ಟಿದ್ದೇವೆ. ಇದಕ್ಕೆ ಬೇಕಾದ ಪರಿಹಾರವನ್ನು ಇಲಾಖೆ ಕೇವಲ ಆರು ತಿಂಗಳುಗಳಲ್ಲಿ ನಿಮಗೆ ಪಾವತಿಸುತ್ತೇವೆ ಎಂದು ಭರವಸೆ ಸರಕಾರ ನೀಡಿತ್ತು. ಆದರೆ ಇದೀಗ ಸೇತುವೆ ಕಾಮಗಾರಿ ಆರಂಭವಾಗಿ 2 ವರ್ಷಗಳು ಸಂದರೂ ಇನ್ನೂ ಪರಿಹಾರ ಮಾತ್ರ ನಮಗೆ ಮರೀಚಿಕೆಯಾಗಿದೆ. ಈ ಬಗ್ಗೆ ಇಲಾಖೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಒಟ್ಟು ಸುಮಾರು 47 ಲಕ್ಷ ರೂ. ಮೌಲ್ಯದ 1.50 ಎಕ್ರೆ ಜಾಗವನ್ನು ನಾವು ಈಗಾಗಲೇ ಕಳೆದುಕೊಂಡಿದ್ದೇವೆ ಎಂದು ಆಲಂಕಾರು ಗ್ರಾಮದ ನಿವಾಸಿ ಜಾನಕಿ, ಕುದ್ಮಾರು ಗ್ರಾಮದ ಮೋಹಿನಿ ಶೇನವ, ಬಾಲಚಂದ್ರ ನುಡಿದು ಕಣ್ಣೀರು ಸುರಿಸಿದರು.
ಬಳಿಕ ಬುಧವಾರ ರಾತ್ರಿಯಿಂದಲೇ ಸಂಚಾರಕ್ಕೆ ಮುಕ್ತವಾಗಿದ್ದ ಸೇತುವೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಿಹಿ ತಿಂಡಿ ವಿತರಿಸಿ ಸಂಭ್ರಮಾಚರಣೆ ಮಾಡಲಾಯಿತು. ವಿದ್ಯಾರಣ್ಯ ಉಪಾಧ್ಯಾಯ, ದಯಾನಂದ ಆಲಡ್ಕ, ಸುಧಾಕರ ಪೂಜಾರಿ ಕಲ್ಲೇರಿ, ದಯಾ ನಂದ ಗೌಡ ಬಡ್ಡಮೆ, ಮಲ್ಲೇಶ್, ಜಯಂತ ಪುಜಾರಿ ನೆಕ್ಕಿಲಾಡಿ, ಸದಾನಂದ ಆಚಾರಿ, ಜಯಕರ ಕಲ್ಲೇರಿ, ದೀಪಕ್ ಜೈನ್ ಕುದ್ಮಾರು ಗುತ್ತು, ದೇವ ರಾಜ್ ನೂಜಿ, ಪದ್ಮನಾಭ ಕೆರೆನಾರು, ವಿಶ್ವ ನಾಥ ಪಾಲೆತ್ತೂರು, ನರಸಿಂಹ ಪ್ರಸಾದ್ ಪಾಂಗಣ್ಣಾಯ ಶಿವಾನಂದ ಕೆಡೆಂಜಿಕಟ್ಟ, ಹರೀಶ್ ಕೆರೆನಾರು, ವಿಜಯ ಕೆ.ಆರ್. ಮೊದಲಾದವರು ಉಪಸ್ಥಿತರಿದ್ದರು.
ಪರಿಹಾರ ನೀಡದೆ ಅಧಿಕೃತ ಉದ್ಘಾಟನೆ ಅವಕಾಶವಿಲ್ಲ
ಊರನ್ನು ಸಂಪರ್ಕಿಸುವ ರಸ್ತೆಗಳ ಕಾಮಗಾರಿಗಳು ಸುಸೂತ್ರವಾಗಿ ನಡೆಯಬೇಕೆಂಬ ಹಿತದೃಷ್ಟಿಯಿಂದ ಈ ಭಾಗದ ಜನತೆ ತಮ್ಮ ಕೃಷಿ ಭೂಮಿಯನ್ನು ಬಿಟ್ಟುಕೊಟ್ಟು ಸಹಕರಿಸಿದೆ. ಆದರೆ ಅವರಿಗೆ ಸಮರ್ಪಕ ಪರಿಹಾರ ನೀಡದೆ ಇಲಾಖೆ ಸತಾಯಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸೇತುವೆಯನ್ನು ರಾಜಕೀಯ ಪ್ರೇರಿತವಾಗಿ ಅಥವಾ ಅಧಿಕೃತವಾಗಿ ಉದ್ಘಾಟನೆ ಮಾಡಲು ಅವಕಾಶ ನೀಡಬಾರದು. ನಿಗದಿಯಾದ ಉದ್ಘಾಟನೆ ದಿನದಂದು ಕುದ್ಮಾರು ಹಾಗೂ ಆಲಂಕಾರು ಗ್ರಾಮದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಮಾರಂಭವನ್ನು ಬಹಿಷ್ಕರಿಸಬೇಕು. ಜತೆಗೆ ಸಂತ್ರಸ್ತರಿಗೆ ಪರಿಹಾರ ಕೊಡುವವರೆಗೆ ಸಂಘಟಿತ ಹೋರಾಟಕ್ಕೆ ನಾವು ಬದ್ಧರಾಗಿರಬೇಕು ಎಂದು ಜನಾರ್ದನ ಗೌಡ ಕಯ್ಯಪೆ ಕರೆ ನೀಡಿದರು.