ಬೆಂಗಳೂರು: ‘ಬಿಜೆಪಿಗೆ ಬೆಂಬಲ ನೀಡಲಾಗುವುದು ಎಂದು ಎಲ್ಲೂ ನಾನು ಹೇಳಿಲ್ಲ. ಆದರೆ ಬೆಂಬಲ ಕೇಳಿದ ಯಡಿಯೂರಪ್ಪ ಅವರ ಬಗ್ಗೆ ರಾಜಕೀಯವನ್ನು ಹೊರತುಪಡಿಸಿ ಒಂದೆರಡು ಒಳ್ಳೆಯ ಮಾತುಗಳನ್ನು ಹೇಳಿದ್ದೇನೆ. ಅವರ ರಾಜಕೀಯ ಅನುಭವ, ಹಿರಿತನಕ್ಕೆ ಗೌರವ ಕೊಟ್ಟು ಮಾತನಾಡಿದ್ದೇನೆ. ಇದರಲ್ಲಿ ತಪ್ಪೇನಿದೆ?’ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ.
‘ಜೆಡಿಎಸ್ ಎಲ್ಲೆಲ್ಲಿ ಸ್ಪರ್ಧೆ ಮಾಡಿಲ್ಲವೋ ಅಲ್ಲೆಲ್ಲಾ ಬಿಜೆಪಿಗೆ ಬೆಂಬಲ ನೀಡುವಂತೆ ಯಡಿಯೂರಪ್ಪ ಅವರು ಮನವಿ ಮಾಡಿರುವುದು ಸರಿಯಷ್ಟೇ. ಈ ಬಗ್ಗೆ ನಾನು ನಿನ್ನೆ ಚಿಕ್ಕಬಳ್ಳಾಪುರದಲ್ಲಿ ಹೇಳಿಕೆ ನೀಡಿ ನಮ್ಮ ಪಕ್ಷದ ಅಭಿಪ್ರಾಯ ಹೇಳಿದ್ದೇನೆ. ಆದರೆ, ಆ ನನ್ನ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ’ ಎಂದು ಟ್ವೀಟ್ ನಲ್ಲಿ ಬರೆದಿದ್ದಾರೆ.
‘ಯಡಿಯೂರಪ್ಪ ಅವರ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿದಾಕ್ಷಣ ಜೆಡಿಎಸ್ ಪಕ್ಷವೂ ಬಿಜೆಪಿಗೆ ಬೆಂಬಲ ನೀಡುತ್ತದೆ ಎಂದರ್ಥವಲ್ಲ. ಚಿಕ್ಕಬಳ್ಳಾಪುರದಲ್ಲಿ ನಾನು ಕೊಟ್ಟ ಹೇಳಿಕೆಯನ್ನು ಮತ್ತೊಮ್ಮೆ ಗಮನಿಸಬೇಕು ಎಂಬುದು ನನ್ನ ಮನವಿ.’
ಇದನ್ನೂ ಓದಿ : ಬಹುಪಾಲು,ಅಭ್ಯರ್ಥಿ ಇಲ್ಲದ ಕಡೆ ಜೆಡಿಎಸ್ ಸಹಕಾರ ಕೊಡಬಹುದು: ಬಿಎಸ್ ವೈ
‘ಕಾಂಗ್ರೆಸ್ ಪಕ್ಷದ ನಾಯಕರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಸೋಲುವ ಭಯ ಶುರುವಾಗಿದೆ. ಆ ಕಾರಣಕ್ಕೆ ಅವರು ಜನರನ್ನು, ಮತದಾರರನ್ನು ದಿಕ್ಕು ತಪ್ಪಿಸುವ ಹಾಗೂ ಜೆಡಿಎಸ್ ವಿರುದ್ಧ ಸುಳ್ಳುಗಳನ್ನು ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಪ್ರತೀ ಚುನಾವಣೆ ಬಂದಾಗ ಜೆಡಿಎಸ್ ಜ್ವರ ಶುರುವಾಗುತ್ತದೆ.’
‘ಕಾಂಗ್ರೆಸ್ಸಿನ ಮಂಡ್ಯ, ಕೊಡಗು ಅಭ್ಯರ್ಥಿಗಳ ಬಗ್ಗೆ ಜನರಿಗೆ ಗೊತ್ತಾಗಿದೆ. ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿಗೆ ಟಿಕೆಟ್ ಯಾರು ಕೊಡಿಸಿದರು ಎನ್ನುವುದನ್ನು ಸ್ವತಃ ಸಹಕಾರ ಸಚಿವರೇ ಹೇಳಿದ್ದಾರೆ. ಹಾಗಾದರೆ, ಕಾಂಗ್ರೆಸ್ ಪಕ್ಷವು ಬಿಜೆಪಿಯ ಯಾವ ಟೀಮು? ಸಿ ಟೀಮಾ? ಡಿ ಟೀಮಾ? ನಮ್ಮನ್ನು ಬಿಜೆಪಿ ಬಿ ಟೀಮ್ ಎನ್ನುವವರೇ ಉತ್ತರಿಸಬೇಕು.’ ಎಂದು ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.