ಮಣಿಪಾಲ: ಭಾರತ ಮತ್ತು ಚೀನ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ ನೇಪಾಲವೂ ತನ್ನಿಂದ ಆಗುವಷ್ಟು ಉಪಟಲವನ್ನು ಇದೇ ಸಂದರ್ಭವೇ ಮಾಡಿಬಿಡೋಣ ಎಂಬ ನಿಲುವು ತಾಳಿದಂತಿದೆ.
ಕಳೆದ ಕೆಲವು ತಿಂಗಳುಗಳಿಂದ ಭಾರತ ಮತ್ತು ನೇಪಾಲ ಕಾಲಾಪಣಿ ಮತ್ತು ಲಿಂಪಿಯಾಧುರಾ ಪ್ರದೇಶಗಳಲ್ಲಿ ವಿವಾದವನ್ನು ಎದುರಿಸಿದ್ದವು. ಇಲ್ಲಿ ಬರುವ ಲಿಪುಲೆಖ್ ಎಂಬ ಪ್ರದೇಶ ಭಾರತ, ನೇಪಾಲ ಮತ್ತು ಚೀನ ಗಡಿಗಳನ್ನು ಹಂಚಿಕೊಳ್ಳುವ ಪ್ರದೇಶವಾಗಿದೆ.
ಇದೀಗ ಚೀನ ಭಾರತದೊಂದಿಗೆ ಕಾಲು ಕೆದಕಿ ಜಗಳಕ್ಕೆ ಬಂದಿರುವ ಸಂದರ್ಭದಲ್ಲಿ ನೇಪಾಲ ಇಡೀ ಸೇನಾ ಬೆಟಾಲಿಯನ್ ಅನ್ನು ಈ ಪ್ರದೇಶದಲ್ಲಿ ನಿಯೋಜಿಸಿದೆ. ಮಾತ್ರವಲ್ಲದೇ ಈ ಬೆಟಾಲಿಯನ್‌ಗೆ ಭಾರತೀಯ ಸೇನೆಯ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ತಿಳಿಸಲಾಗಿದೆ ಎಂಬ ಮಾಹಿತಿ ಇದೆ.
ಕಳೆದ ವಾರ ಕೆಪಿ ಶರ್ಮಾ ಒಲಿ ನೇತೃತ್ವದ ಸರಕಾರ 44ನೇ ಬೆಟಾಲಿಯನ್ ಪೋಸ್ಟ್‌ಗೆ ಲಿಪುಲೇಖ್‌ನಲ್ಲಿ ಸೈನ್ಯ ನಿಯೋಜಿಸಲು ಆದೇಶ ಹೊರಡಿಸಿದೆ. ಭಾರತ ಮತ್ತು ಚೀನ ನಡುವೆ ನಡೆಯುತ್ತಿರುವ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಲಿಪುಲೆಖ್ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಅದು ಹೇಳಿದೆ. ಈ ಹಿನ್ನೆಲೆಯಲ್ಲಿ ನೇಪಾಲ ಸಶಸ್ತ್ರ ಪೊಲೀಸ್ ಪಡೆಯ (ಎನ್‌ಪಿಎಫ್) 44ನೇ ಬೆಟಾಲಿಯನ್ ಅನ್ನು ಇಲ್ಲಿ ನಿಯೋಜಿಸಲಾಗಿದೆ.
ಇದೇ ಭೂ ಭಾಗದಲ್ಲಿ ಚೀನವು ಸೇನೆಯನ್ನು ನಿಯೋಜಿಸಿದೆ. ಪಾಲಾ ಪ್ರದೇಶವು ಇಲ್ಲಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿದೆ. ಭಾರತವು 17 ಸಾವಿರ ಅಡಿ ಎತ್ತರದಲ್ಲಿ ಲಿಪುಲೆಖ್‌ನಲ್ಲಿ ಅತ್ಯುತ್ತಮ ರಸ್ತೆಯನ್ನು ನಿರ್ಮಿಸಿದೆ. ಕಳೆದ ವರ್ಷ ಲಿಪುಲೇಖ್ ಪಾಸ್‌ನಲ್ಲಿ ಭಾರತ 80 ಕಿ.ಮೀ. ರಸ್ತೆ ನಿರ್ಮಿಸಿತ್ತು. ತನ್ನ ಕೈಲಾಸ ಮಾನಸ ಸರೋವರ ಯಾತ್ರಿಕರಿಗೆ ನೆರವಾಗುವ ನಿಟ್ಟಿನಲ್ಲಿ ಭಾರತ ಇದನ್ನು ಮಾಡಿತ್ತು. ಆದರೆ ತನ್ನ ಭೂಪ್ರದೇಶದಲ್ಲಿ ಭಾರತ ರಸ್ತೆ ನಿರ್ಮಿಸಿದೆ ಎಂದು ಇದಕ್ಕೂ ನೇಪಾಲ ಆಕ್ಷೇಪಿಸಿತ್ತು. ಬಳಿಕ ಪರಿಷ್ಕೃತ ನಕಾಶೆ ಬಿಡುಗಡೆ ಮಾಡಿ ನೇಪಾಲ ಈ ವಿವಾದಿತ ಪ್ರದೇಶಗಳನ್ನು ಅದರಲ್ಲಿ ಸೇರಿಸಿತು.
ರಸ್ತೆ ನಿರ್ಮಾಣದ ಸಮಯದಲ್ಲಿ ನೇಪಾಲ ಯಾವುದೇ ಆಕ್ಷೇಪಣೆಗಳನ್ನು ಎತ್ತಿರಲಿಲ್ಲ. ಆದರೆ ಬಳಿಕ ಚೀನ ಕುತಂತ್ರದಿಂದ ಇದೇ ವಿಷಯದಲ್ಲಿ ಭಾರತ ಮತ್ತು ನೇಪಾಲ ನಡುವೆ ಹಲವು ಉದ್ವಿಗ್ನತೆ ಪ್ರಾರಂಭವಾಯಿತು. ಬಳಿಕ ನೇಪಾಲ ಭಾರತದ ಕೆಲವು ಭೂ ಗಡಿ ಭಾಗಗಳನ್ನು ತನ್ನದು ಎಂದು ಹೇಳಿ ಬಿಡುಗಡೆ ಮಾಡಿದ ನೂತನ ಮ್ಯಾಪ್‌ನಲ್ಲಿ ತೋರಿಸಿತ್ತು.
ಹಾಗೆ ನೋಡಿದರೆ ಹಿಂದಿನಿಂದಲೂ ನೇಪಾಲದ ಜತೆಗಿನ ಗಡಿ ವಿವಾದ ಇತ್ತು. ಆದರೆ ತೀರಾ ಮುನ್ನೆಲೆಗೆ ಬಂದು ಇತ್ತೀಚಿನ ದಿನಗಳಲ್ಲಿ. 5-6 ತಿಂಗಳ ಹಿಂದೆ ಭಾರತ ತನ್ನ ಭೂಪಟವನ್ನು ಮರು ಚಿತ್ರಿಸಿದಾಗ ಉತ್ತರಾಖಂಡ-ನೇಪಾಲ ಗಡಿ ಪ್ರದೇಶದಲ್ಲಿ ಬರುವ ಕಾಲಾಪಾನಿ ಎಂಬ ಪ್ರದೇಶವನ್ನು ಭಾರತ ತನ್ನ ವ್ಯಾಪ್ತಿಯಲ್ಲಿ ಸೇರಿಸಿತ್ತು. ಇದರ ಬೆನ್ನಲ್ಲೇ ನೇಪಾಲವು ಲಿಪುಲೇಖ್ ಪಾಸ್ ಮತ್ತು ಲಿಂಪಿಯಾಧೂರಾ ಪ್ರದೇಶಗಳನ್ನು ತನ್ನ ಗಡಿಯೊಳಗೆ ಸೇರಿಸಿ ಪರಿಷ್ಕೃತ ನಕಾಶೆ ಬಿಡುಗಡೆ ಮಾಡಿತ್ತು. ಇದರ ಬಳಿಕ ವಿವಾದ ಮತ್ತೆ ಜೀವ ಪಡೆದುಕೊಳ್ಳಲು ಆರಂಭಿಸಿದೆ.
ತನ್ನ ಭೂಪಟಕ್ಕೆ ಅನುಗುಣವಾಗಿ ನೇಪಾಲ ಲಿಪುಲೇಖ್ ಪಾಸ್, ಕಾಲಾಪಾನಿ ಮತ್ತು ಲಿಂಪಿಯಾಧೂರಾ ಪ್ರದೇಶಗಳನ್ನು ತನ್ನ ಭೂಪಟದಲ್ಲಿ ಸೇರಿಸಿ, ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಮುಂದೆ ಮಂಡಿಸಿತ್ತು. ಭಾರತದ ಪ್ರತಿಭಟನೆಯ ಹೊರತಾಗಿಯೂ ಬಿಡುಗಡೆಯಾದ ಈ ನಕ್ಷೆಯನ್ನು ತನ್ನ ರಾಷ್ಟ್ರೀಯ ಲಾಂಛನದಲ್ಲಿ ಸೇರಿಸುವ ಮೂಲಕ ನೇಪಾಲದ ಸಂಸತ್ತು ಸರ್ವಾನುಮತದಿಂದ ನ್ಯಾಯಸಮ್ಮತಗೊಳಿಸಿತು.
372 ಚದರ ಕಿ.ಮೀ. ವ್ಯಾಪ್ತಿಯಲ್ಲಿರುವ ಕಾಲಾಪಾನಿ 1962ರಿಂದಲೂ ಇಂಡೊ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ನಿಯಂತ್ರಣದಲ್ಲಿದೆ. ಒಟ್ಟಾರೆಯಾಗಿ ಭಾರತವು ನೇಪಾಲದೊಂದಿಗೆ ಸುಮಾರು 1,758 ಕಿ.ಮೀ. ಗಡಿ ಹೊಂದಿದೆ. ಕಾಲಾಪಾನಿ ಉತ್ತರಾಖಂಡದ ಪಿತೋರಗಡ ಜಿಲ್ಲೆಯ ಪ್ರದೇಶ ಎಂದು ಭಾರತ ಪ್ರತಿಪಾದನೆಯಾದರೆ, ಅದು ತನ್ನ ಧಾರಾಚುಲಾ ಜಿಲ್ಲೆಗೆ ಸೇರಿದ ಭಾಗ ಎಂಬುದು ನೇಪಾಲದ ವಾದ.
ಕಾಲಾಪಾನಿ ಕಣಿವೆಯು ಈಗಿನ ಟಿಬೆಟ್ ಭಾಗದಲ್ಲಿದೆ. ಪದೆಸಿದ್ಧ ಯಾತ್ರಾಸ್ಥಳವಾದ ಕೈಲಾಸ ಮಾನಸ ಸರೋವರಕ್ಕೆ ತೆರಳುವ ಭಾರತೀಯ ಮಾರ್ಗದಲ್ಲಿ ಬರುತ್ತದೆ. 19ನೇ ಶತಮಾನದ ಮೊದಲಾರ್ಧದಲ್ಲಿ ನೇಪಾಲ ಮತ್ತು ಬ್ರಿಟಿಷ್ ಅಧೀನದಲ್ಲಿದ್ದ ಭಾರತ ಸುಗೌಲಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಇದರನ್ವಯ ಕಾಳಿ ನದಿಯ ಪಶ್ಚಿಮದ ಭಾಗ ಭಾರತಕ್ಕೆ ಸೇರಿದ್ದು. ಆದರೆ ಕಾಲಾಪಾನಿ ಮೂಲಕ ಹಾದುಹೋಗುವ ಕಾಳಿ ನದಿಯ ಮೂಲ ಯಾವುದು ಎಂಬುದಕ್ಕೆ ಒಪ್ಪಂದದಲ್ಲಿ ಖಚಿತ ಉಲ್ಲೇಖ ಇಲ್ಲ. ಸದ್ಯ ಇದೇ ಈ ವಿವಾದದ ಮೂಲ.
ವಿವಾದಿತ ಪ್ರದೇಶ ಲಿಪುಲೇಖ್ ಪಾಸ್. ಇದು ಭೌಗೋಳಿಕವಾಗಿ ಕಾಲಾಪಾನಿಗಿಂತ ಮೇಲ್ಭಾಗದಲ್ಲಿ ಇದೆ. ಇದು ಉತ್ತರಾಖಂಡ-ನೇಪಾಲ ಗಡಿಯಲ್ಲಿರುವ ಪರ್ವ ಮಾರ್ಗವಾಗಿದೆ. ವಿಶೇಷವಾಗಿ ವ್ಯಾಪಾರ ಮತ್ತು ತೀರ್ಥಯಾತ್ರೆಗಾಗಿ ಪ್ರಾಚೀನ ಕಾಲದಿಂದಲೂ ಇದನ್ನು ಭಾರತೀಯರು ಬಳಸುತ್ತಿದ್ದರು. 1962ರಲ್ಲಿ ನಡೆದ ಭಾರತ-ಚೀನ ಯುದ್ಧದ ಬಳಿಕ ಈ ಮಾರ್ಗವನ್ನು ಮುಚ್ಚಲಾಗಿತ್ತು.
ಲಿಂಪಿಯಾಧೂರಾ ಎಂಬ ಮತ್ತೂಂದು ಪ್ರದೇಶ ಇದು ಲಿಪುಲೇಖ್ ಪಾಸ್‌ನ ವಾಯವ್ಯ ದಿಕ್ಕಿನದೆ. ಈ ಪ್ರದೇಶ ಕಾಳಿ ನದಿಯ ಮೂಲ ಎಂಬುದು ನೇಪಾಲದ ವಾದ. ತನ್ನ ವಾದವನ್ನು ಪುಷ್ಠೀಕರಿಸಲು ಕಾಲಾಪಾನಿ ಮತ್ತು ಲಿಪುಲೇಖ್ ಕೂಡ ಕಾಳಿ ನದಿಯ ಪೂರ್ವಕ್ಕೆ ಇರುವುದರಿಂದ ಈ ಪ್ರದೇಶಗಳು ತನಗೆ ಸೇರಿದ್ದು ಎಂದು ನೇಪಾಲ ಹೇಳುತ್ತಿದೆ.
ಚೀನ ಮತ್ತು ನೇಪಾಲ ವರ್ಸಸ್ ಭಾರತ
ಉತ್ತರಾಖಂಡ-ನೇಪಾಲ ಗಡಿಯಲ್ಲಿರುವ ಕಾಲಾಪಾನಿಯು ಚೀನದ ಸೇನಾ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಬಳಸಲಾಗುತ್ತದೆ. ಆದರೆ ಚೀನದ ವಿರುದ್ಧ ಕಾರ್ಯಾಚರಣೆ ನಡೆಸಲು ಭಾರತಕ್ಕೆ ಈ ಪ್ರದೇಶ ಅವಶ್ಯವಾಗಿದೆ. ಆದರೆ ಅದನ್ನು ಬಿಟ್ಟುಕೊಡಲು ನೇಪಾಲಕ್ಕೆ ಇಷ್ಟ ಇಲ್ಲ. ಪ್ರದೇಶದ ಮೇಲೆ ಹಕ್ಕಿ ಸಾಧಿಸಲು ನೇಪಾಲದ ಮೇಲೆ ಚೀನ ಒತ್ತಡ ಹೇರುತ್ತಿದೆ ಎಂಬ ಮಾತುಗಳೂ ಇವೆ. ಇತ್ತೀಚೆಗೆ ಚೀನ ನೇಪಾಲದಲ್ಲಿ ಭಾರಿ ಪ್ರಮಾಣದ ಹೂಡಿಕೆ ಮಾಡುತ್ತಿದೆ. ಇದರ ಬೆನ್ನಲ್ಲೇ ಭಾರತದ ಜತೆಗಿನ ಗಡಿ ವಿವಾದವೂ ಮುನ್ನೆಲೆಗೆ ಬಂದಿದೆ. ಅತ್ತ ಚೀನವೂ ಭಾರದ ಗಡಿಯನ್ನು ಕೆದಕುತ್ತಿದೆ.