ಧಾರವಾಡ: ಹಿಂದೂ ಸಾಮ್ರಾಜ್ಯ ಕಟ್ಟಿ ಬೆಳೆಸಿದ ಛತ್ರಪತಿ ಶಿವಾಜಿ ಮಹಾರಾಜರು ಇಂದಿನ ಯುವ ಪೀಳಿಗೆಗೆ ಆದರ್ಶರಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು. ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಮರಾಠಾ ವಿದ್ಯಾಪ್ರಸಾರಕ ಮಂಡಳಿ ಭಾರತ ಪ್ರೌಢಶಾಲಾ ಆವರಣದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 390ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಧೈರ್ಯಶಾಲಿಯಾಗಿದ್ದ ಶಿವಾಜಿ ಯುದ್ಧದ ಎಲ್ಲ ಮಾರ್ಗಗಳನ್ನು ಅವರ ತಾಯಿ ಜೀಜಾಬಾಯಿ ಅವರಿಂದ ಪಡೆದು ಅಂಬಾಭವಾನಿ ಆಶೀರ್ವಾದದಿಂದ ಮುಂದೆ ಬಂದವರು. ಶ್ರೀ ಶಿವಾಜಿ ಮಹಾರಾಜರು ದೇಶಾಭಿಮಾನವನ್ನು ಇಂದಿನ ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ ಇದ್ದರು. ಶಿವಾಜಿ ಬಿಸ್ಲೆ ಉಪನ್ಯಾಸ ನೀಡಿದರು. ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ, ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಪಾರಿತೋಷಕ ಪಡೆದ ಮಕ್ಕಳನ್ನು ಸನ್ಮಾನಿಸಲಾಯಿತು.
ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಂದ್ರ ಕಲಬುರ್ಗಿ, ಶಾಸಕ ಶ್ರೀನಿವಾಸ ಮಾನೆ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ರಮೇಶ ಕೋನರಡ್ಡಿ, ಮಹಾನಗರ ಪಾಲಿಕೆ ಸದಸ್ಯ ಶಂಕರ ಸೇಳಕೆ, ಸುಭಾಷ್ ಶಿಂಧೆ, ಮರಾಠಾ ಮಂಡಳ ಅಧ್ಯಕ್ಷ ಮಂಜುನಾಥ ಕದಂ, ಕಿರಣ ಶಿಂಧೆ, ತಹಶೀಲ್ದಾರ ಆರ್.ವಿ.ಕಟ್ಟಿ, ಭೀಮಪ್ಪ ಕಸಾಯಿ, ದೇವೆಂದ್ರಪ್ಪ ಕಾಳೆ, ಸಂಭಾಜಿ ಗೋಡ್ಸೆ ಇದ್ದರು.
ಭಾರತ ಹೈಸ್ಕೂಲ್ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಪ್ರಾಣೇಶ ಅವರಿಂದ ಹಾಸ್ಯಸಂಜೆ, ಇಮಾಮಸಾಬ್ ಹುಲ್ಲೆಪ್ಪನವರ ಅವರಿಂದ ಡೊಳ್ಳಿನ ತತ್ವಪದ, ಡಾ|ಬಸವರಾಜ ರಾಜಗುರು ಸಂಗೀತ ಶಾಲೆ ಮಕ್ಕಳಿಂದ ಗಾಯನ ಕಾರ್ಯಕ್ರಮ ಜರುಗಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಕೆ ರಂಗಣ್ಣವರ ಸ್ವಾಗತಿಸಿ, ವಂದಿಸಿದರು.