Advertisement

ಪಂತ್ ವಿಶ್ವಕಪ್ ಆಡಲು ಆಶೀಷ್ ನೆಹ್ರಾ ನೀಡುವ ಐದು ಕಾರಣಗಳು!

10:35 AM Feb 15, 2019 | Team Udayavani |

ಹೊಸದೆಹಲಿ: ಕ್ರಿಕೆಟ್ ವಿಶ್ವಕಪ್ ಗೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲಾ ದೇಶಗಳು ತಮ್ಮ ತಂಡವನ್ನು ಅಂತಿಮಗೊಳಿಸುವ ತಯಾರಿಯಲ್ಲಿವೆ. ಭಾರತ ತಂಡ ಕೂಡಾ ತನ್ನ ತಂಡವನ್ನು ಬಹುತೇಕ ಅಂತಿಮಗೊಳಿಸಿದ್ದು, ಕೆಲವು ಸ್ಥಾನಗಳ ಆಯ್ಕೆ ಮಾತ್ರ ಬಾಕಿ ಇದೆ. ಪ್ರಮುಖ ಕೀಪರ್ ಆಗಿ ಮಹೇಂದ್ರ ಸಿಂಗ್ ಧೋನಿ ತಂಡದಲ್ಲಿದ್ದು ಇನ್ನೊಬ್ಬರಿಗಾಗಿ ದಿನೇಶ್ ಕಾರ್ತಿಕ್ ಮತ್ತು ರಿಷಭ್ ಪಂತ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಮಾಜಿ ವೇಗಿ ಆಶೀಷ್ ನೆಹ್ರಾ ಈಗ ರಿಷಭ್ ಪಂತ್ ಗೆ ಮಣೆ ಹಾಕಿದ್ದು, ಪಂತ್ ಆಯ್ಕೆಗೆ ಐದು ಕಾರಣಗಳನ್ನು ನೀಡಿದ್ದಾರೆ.

Advertisement

2011ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿರುವ ಆಶೀಷ್ ನೆಹ್ರಾ, ರಿಷಭ್ ಪಂತ್ ರ ಆಟವನ್ನು ಡೆಲ್ಲಿ ತಂಡದಲ್ಲಿ ಕೂಡಾ ಗಮನಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ರಿಷಭ್ ಬ್ಯಾಟ್ ಬೀಸುವ ರೀತಿಯಿಂದ ಎಲ್ಲರೂ ಪ್ರಭಾವಿತರಾಗಿದ್ದು ವಿಶ್ವಕಪ್ ತಂಡದಲ್ಲಿ ಆಡಬೇಕೆಂದು ಆಶಿಸುತ್ತಿದ್ದಾರೆ. 


ಪಂತ್ ಆಯ್ಕೆಗೆ ನೆಹ್ರಾ ನೀಡುವ ಐದು ಕಾರಣಗಳು
1.ಭಾರತದ ಬ್ಯಾಟಿಂಗ್ ಕ್ರಮಾಂಕ ಗಮನಿಸುವುದಾದರೆ ಆರಂಭಿಕ ಶಿಖರ್ ಧವನ್ ಹೊರತುಪಡಿಸಿ ನಂತರದ ಏಳು ಬ್ಯಾಟ್ಸಮನ್ ಗಳು ಬಲಗೈ ಆಟಗಾರರು. ಹಾಗಾಗಿ ಎಡಗೈ ಆಟಗಾರನಾಗಿರುವ ಪಂತ್ ಸೇರ್ಪಡೆಯಿಂದ ಬಲಗೈ – ಎಡಗೈ ಸಂಯೋಜನೆ ಉತ್ತಮ ಕೆಲಸ ಮಾಡಬಹುದು. 

2. ಪಂತ್ ಯಾವ ಕ್ರಮಾಂಕದಲ್ಲೂ ಆಡಬಲ್ಲ ಆಟಗಾರ. ಆರಂಭಿಕ ಆಟಗಾರನಾಗಿ ಆಡುವ ಕ್ಷಮತೆಯನ್ನೂ ಹೊಂದಿದ್ದಾರೆ. ಹಾಗಾಗಿ ನಾಯಕ ಕೊಹ್ಲಿಗೆ ಆಡುವ ಬಳಗ ಆಯ್ಕೆ ಮಾಡುವಾಗ ಆಟಗಾರರ ಆಯ್ಕೆ ಸುಲಭವಾಗಬಹುದು.

3. ಪಂತ್ ಹೊಡೆಯುವ ಸಿಕ್ಸರ್ ಗಳು ಅವರ ಆಯ್ಕೆಗೆ ನೆಹ್ರಾ ನೀಡುವ ಮೂರನೇ ಕಾರಣ. ಸದ್ಯ ತಂಡದಲ್ಲಿ ರೋಹಿತ್ ಶರ್ಮಾ ಬಿಟ್ಟರೆ ಪಂತ್ ಮಾತ್ರ ಅನಾಯಾಸವಾಗಿ ದೊಡ್ಡ ಸಿಕ್ಸ್ ಗಳನ್ನು ಸಿಡಿಸುವ ಕ್ಷಮತೆ ಹೊಂದಿದ್ದಾರೆ. ಹಾಗಾಗಿ ಪಂತ್ ಆಯ್ಕೆ ಸೂಕ್ತ.

4. ಭಾರತ ತಂಡದಲ್ಲಿ ಸದ್ಯ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡಬಲ್ಲ ಮೂವರು ಆಟಗಾರರು ಇದ್ದಾರೆ. ಅವರೆಂದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ. ಈ ಪಟ್ಟಿಗೆ ರಿಷಭ್ ಪಂತ್ ರನ್ನು ಸೇರಿಸಬಹುದು. ಯಾಕೆಂದರೆ ಪಂತ್ ತಂಡಕ್ಕೆ ಏಕಾಂಗಿಯಾಗಿ ಪಂದ್ಯ ಗೆಲ್ಲಿಸುಕೊಡುವ ಕ್ಷಮತೆ ಹೊಂದಿದ್ದಾರೆ ಎನ್ನುತ್ತಾರೆ ಮಾಜಿ ವೇಗಿ ನೆಹ್ರಾ.

Advertisement


5. ಅಂಬಾಟಿ ರಾಯುಡು, ಕೆದಾರ್ ಜಾಧವ್ ಮತ್ತು ದಿನೇಶ್ ಕಾರ್ತಿಕ್ ಉತ್ತಮ ಆಟಗಾರರು. ಆದರೆ ಇವರೆಲ್ಲರ ಆಟದ ವೈಖರಿ ಒಂದೇ ರೀತಿಯದ್ದು. ಪಂತ್ ತಂಡದಲ್ಲಿ ಸ್ಥಿರ ಪ್ರದರ್ಶನ ನೀಡುವ  ಸಾಮರ್ಥ್ಯ ಹೊಂದಿದ್ದಾರೆ ಹಾಗಾಗಿ ವಿಶ್ವಕಪ್ ತಂಡದಲ್ಲಿ ರಿಷಭ್ ಪಂತ್ ಆಡಬೇಕು ಎಂದು ನೆಹ್ರಾ ಅಭಿಪ್ರಾಯಪಡುತ್ತಾರೆ. 

Advertisement

Udayavani is now on Telegram. Click here to join our channel and stay updated with the latest news.

Next