Advertisement

Karnataka: ಲಿಂಗಾಯತರ ನಿರ್ಲಕ್ಷ್ಯ- ಸಚಿವರಲ್ಲೇ ಅಭಿಪ್ರಾಯ ಭೇದ

10:57 PM Oct 05, 2023 | Team Udayavani |

 

Advertisement

ಬೆಂಗಳೂರು: ಸರಕಾರದಲ್ಲಿ ಲಿಂಗಾಯತರ ಕಡೆಗಣನೆ ವಿಚಾರ ಈಗ ನಿತ್ಯ ಚರ್ಚೆಯ ವಸ್ತುವಾಗಿದ್ದು, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಹುಟ್ಟುಹಾಕಿದ ಚರ್ಚೆಗೆ ಸಚಿವರಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತವಾಗಿವೆ.

ವರ್ಗಾವಣೆ, ಭಡ್ತಿ ಸಹಿತ ಹಲವು ಸಂದರ್ಭಗಳಲ್ಲಿ ಲಿಂಗಾಯತ ಅಧಿಕಾರಿಗಳನ್ನು ಗುರಿ ಮಾಡಲಾಗುತ್ತಿದ್ದು, ಈ ಬಗ್ಗೆ ಲಿಂಗಾಯತ ಸಚಿವರ ಬಳಿ ಸಂಕಷ್ಟ ಹೇಳಿಕೊಂಡರೂ ಸ್ಪಂದಿ
ಸದ ಕಾರಣ ಕೆಲವು ಅಧಿಕಾರಿಗಳು ಶಾಮನೂರು ಶಿವಶಂಕರಪ್ಪ ಅವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡಿದ್ದರು. ತಮ್ಮ ವರ್ಗಾವಣೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಅಧಿ
ಕಾರಿಗಳನ್ನು ಸರಕಾರ ಗುರಿ ಮಾಡುತ್ತಿ ರುವುದಾಗಿ ಅಹವಾಲು ಸಲ್ಲಿಸಿದ್ದರು.

ಇದರ ಬೆನ್ನಲ್ಲೇ ಶಾಮನೂರು ಶಿವಶಂಕರಪ್ಪ ಅವರು, ಸರಕಾರದಲ್ಲಿ ಲಿಂಗಾಯತ ಅಧಿಕಾರಿಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಸಮುದಾಯ ದಲ್ಲಿ ಒಗ್ಗಟ್ಟು ಇಲ್ಲದಿರುವುದೇ ಇಷ್ಟಕ್ಕೆಲ್ಲ ಕಾರಣ. ನಾವು ಮನಸ್ಸು ಮಾಡಿದರೆ ವೀರಶೈವರ ಸರಕಾರ ಸ್ಥಾಪಿಸುವುದು ಕಷ್ಟವೇನಿಲ್ಲ ಎಂದಿದ್ದರು.

ಇದಕ್ಕೆ ಪ್ರತಿಯಾಗಿ ಅಂತಹ ಯಾವುದೇ ತಾರತಮ್ಯ ಆಗಿಲ್ಲ, ನನ್ನ ಸಂಪುಟದಲ್ಲಿ 7 ಮಂದಿ ಲಿಂಗಾಯತ ಸಚಿವರಿದ್ದಾರೆಂದು ಸಿಎಂ ಸಮರ್ಥಿಸಿಕೊಂಡಿದ್ದರಲ್ಲದೆ, ಶಾಸಕ ಬಸವರಾಜ ರಾಯರೆಡ್ಡಿ ಕೂಡ ಲಿಂಗಾಯತ ಅಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿ ಸಿಎಂ ಬೆನ್ನಿಗೆ ನಿಂತಿದ್ದರು. ಇದರಿಂದ ಕೆರಳಿದ್ದ ಶಿವಶಂಕರಪ್ಪ, ಯಾರ್ಯಾರಿಗೆ ಎಲ್ಲೆಲ್ಲಿ ಯಾವಾಗ ಅನ್ಯಾಯ ಆಗಿದೆ ಎಂಬುದನ್ನು ಅಂಕಿ-ಅಂಶ ಸಹಿತ ನಾನೂ ಹೊರಗಿಡಬಲ್ಲೆ ಎಂದು ಸವಾಲು ಹಾಕಿದ್ದರು.

Advertisement

ಕೆಲವು ಸಚಿವರು ಶಿವಶಂಕರಪ್ಪ ಹೇಳಿಕೆ ಯನ್ನು ಸಮರ್ಥಿಸಿದ್ದರೆ, ಇನ್ನು ಕೆಲವರು ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಹಲವರು ಇದು ತಮಗೆ ಸಂಬಂಧಿಸಿದ್ದಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.

ಸಚಿವರಿಗೆ ಸಿಎಂ ಔತಣಕೂಟ
ಸಚಿವರು-ಶಾಸಕರ ನಡುವೆ ಸಮನ್ವಯತೆ ಇಲ್ಲ ಎಂದು ಈ ಹಿಂದೆ ಬಿ.ಆರ್‌. ಪಾಟೀಲ್‌, ಬಸವರಾಜ ರಾಯರೆಡ್ಡಿ ಸಹಿತ ಹಿರಿಯ ಶಾಸಕರು ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಸಮನ್ವಯ ಸಭೆ ಏರ್ಪಡಿಸಿದ್ದ ಸಿಎಂ, ಶಾಸಕರ ನಿಧಿಯನ್ನೂ ಬಿಡುಗಡೆ ಮಾಡಿದ್ದರು. ಈಗ ಲಿಂಗಾಯತರ ಕಡೆಗಣನೆ, ಜಾತಿಗಣತಿ ವರದಿ ಬಗ್ಗೆ ಚರ್ಚೆಗಳು ಆರಂಭವಾಗಿರುವ ಬೆನ್ನಲ್ಲೇ ಸಚಿವರನ್ನು ವಿಶ್ವಾಸಕ್ಕೆ ಪಡೆಯಲು ಮುಂದಾಗಿ ರುವ ಸಿಎಂ, ತಮ್ಮ ಸರಕಾರಿ ನಿವಾಸ “ಕಾವೇರಿ’ಯಲ್ಲಿ ಔತಣಕೂಟ ಏರ್ಪಡಿಸಿದ್ದಾರೆ.

ಶಾಮನೂರ ಧ್ವನಿಗೆ ವೀರಶೈವ ಲಿಂಗಾಯತ ಮಹಾಸಭಾ ಬಲ?
ದಾವಣಗೆರೆ: ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರಕಾರದಲ್ಲಿ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಕಾಂಗ್ರೆಸ್‌ನ ಹಿರಿಯ ಶಾಸಕ ಡಾ| ಶಾಮನೂರು ಶಿವಶಂಕರಪ್ಪ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ ಬೆನ್ನಲ್ಲೇ, ಅ.6ರಂದು ನಗರದಲ್ಲಿ ಆಯೋಜಿಸಿರುವ ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸಭೆ ಕುತೂಹಲ ಕೆರಳಿಸಿದೆ.
ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಡಿಸೆಂಬರ್‌ ತಿಂಗಳಲ್ಲಿ ದಾವಣಗೆರೆಯಲ್ಲಿ ನಡೆಯುವ 24ನೇ ಮಹಾ ಅಧಿವೇಶನದ ಹಿನ್ನೆಲೆಯಲ್ಲಿ ಅ.6ರಂದು ನಗರದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದ್ದು, ಪಕ್ಷಾತೀತವಾಗಿ ಹಲವು ಲಿಂಗಾಯತ ನಾಯಕರು ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಮಹಾಸಭಾದ ಅಧ್ಯಕ್ಷರೂ ಆಗಿರುವ ಶಾಮನೂರು ಶಿವಶಂಕರಪ್ಪ ಅವರ “ಲಿಂಗಾಯತ ಅಧಿಕಾರಿಗಳ ಕಡೆಗಣನೆ’ ಹೇಳಿಕೆ ಪ್ರಸ್ತಾವದ ಬಗ್ಗೆ ಚರ್ಚೆಯಾಗುವ ನಿರೀಕ್ಷೆಯಿದೆ.

ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಏರ್ಪಡಿಸುವ ಮಹಾ ಅಧಿವೇಶನ ವಿಚಾರ ಹೊರತುಪಡಿಸಿ ಬೇರೆ ಯಾವುದೇ ರಾಜಕೀಯ ವಿಚಾರ ಸಭೆಯಲ್ಲಿ ಚರ್ಚಿಸಬಾರದು ಎಂದು ಮಹಾಸಭಾದ ಕೆಲವು ನಾಯಕರು ನಿರ್ಧರಿಸಿದ್ದಾರಾದರೂ, ಕೆಲವು ಮುಖಂಡರು ಮಹಾಸಭಾದ ಅಧ್ಯಕ್ಷರ ಬೆಂಬಲಕ್ಕೆ ತಾವಿದ್ದೇವೆ ಎಂಬುದನ್ನು ಬಿಂಬಿಸಲು ಇದೇ ಸೂಕ್ತ ವೇದಿಕೆ ಎಂದು ಭಾವಿಸಿದ್ದಾರೆ ಎನ್ನಲಾಗಿದೆ.

ಸಭೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರೇ ಈ ವಿಚಾರ ಪ್ರಸ್ತಾವಿಸಿದರೆ, ಚರ್ಚಿಸಿ ಈ ಸಭೆಯಿಂದಲೇ ಒಕ್ಕೊರಲಿನ ಧ್ವನಿ ಹೊರಹೊಮ್ಮಿಸಬೇಕು. ಲಿಂಗಾಯತರ ಒಗ್ಗಟ್ಟಿನ ಸಂದೇಶ ಸಾರಬೇಕೆಂಬ ಇರಾದೆ ಕೂಡ ಕೆಲವು ಮುಖಂಡರಲ್ಲಿದೆ.

ಬಿಜೆಪಿ ಮುಖಂಡರ ಆಸಕ್ತಿ
ಈ ಹಿಂದೆ ಬಿಜೆಪಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಬಗ್ಗೆ ಚರ್ಚೆ ನಡೆದ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿರುವ ಶಾಮನೂರು ಶಿವಶಂಕರಪ್ಪ, ತಾವು ಕಾಂಗ್ರೆಸ್‌ನಲ್ಲಿದ್ದರೂ “ಯಡಿಯೂರಪ್ಪ ಅವರನ್ನು ಕಡೆಗಣಿಸಿದರೆ ಪಕ್ಷಕ್ಕೆ ಉಳಿಗಾಲವಿಲ್ಲ’ ಎಂಬ ಹೇಳಿಕೆ ನೀಡಿ ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತಿದ್ದರು. ಈಗ ಶಾಮನೂರು ಅವರು ಸ್ವಪಕ್ಷದ ಸರಕಾರದ ವಿರುದ್ಧವೇ ಆರೋಪ ಮಾಡಿದ್ದು, ಅವರ ಮಾತು ಸತ್ಯ ಎನ್ನುವ ಮೂಲಕ ಬಿಜೆಪಿಯ ಲಿಂಗಾಯತ ನಾಯಕರು ಬೆಂಬಲಕ್ಕೆ ನಿಂತಿದ್ದಾರೆ. ಮಹಾಸಭಾದ ಸಭೆಯಲ್ಲಿ ಶಾಮನೂರು ಹೇಳಿಕೆಯನ್ನು ಚರ್ಚೆಗೆ ಎಳೆಯಲು ಬಿಜೆಪಿಯ ಲಿಂಗಾಯತ ನಾಯಕರೇ ಉತ್ಸುಕರಾಗಿದ್ದಾರೆಂಬ ಮಾತುಗಳೂ ಕೇಳಿ ಬರುತ್ತಿವೆ.

ಇಂದು ಪೂರ್ವಭಾವಿ ಸಭೆ
ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಡಿಸೆಂಬರ್‌ ತಿಂಗಳಲ್ಲಿ 24ನೇ ಮಹಾ ಅಧಿವೇಶನ ದಾವಣಗೆರೆಯಲ್ಲಿ ನಡೆಯಲಿದ್ದು, ಇದರ ಪೂರ್ವಭಾವಿ ಸಭೆಯನ್ನು ಅ.6ರಂದು ನಗರದ ಎಂಬಿಎ ಕಾಲೇಜು ಆವರಣದಲ್ಲಿ ಮಧ್ಯಾಹ್ನ 12.30ಕ್ಕೆ ಕರೆಯಲಾಗಿದೆ. ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ, ರಾಷ್ಟ್ರೀಯ ಉಪಾಧ್ಯಕ್ಷ ಎನ್‌.ತಿಪ್ಪಣ್ಣ, ಅಥಣಿ ವೀರಣ್ಣ, ಎಸ್‌.ಎಸ್‌.ಗಣೇಶ್‌, ಅಣಬೇರು ರಾಜಣ್ಣ, ವಿನಯ ಕುಲಕರ್ಣಿ, ಪ್ರಭಾಕರ್‌ ಕೋರೆ, ರಾಷ್ಟ್ರೀಯ ಕಾರ್ಯದರ್ಶಿ ರೇಣುಕಾ ಪ್ರಸನ್ನ ಹಾಗೂ ಇತರ ಪ್ರಮುಖರು ಭಾಗವಹಿಸಲಿರುವರು.

ತಂದೆಯವರು ಹೇಳಿ
ದ್ದಾರೆ, ಅವರನ್ನೇ ಕೇಳಿ. ಸಿಎಂ ಮತ್ತು ಅವರು ಮಾತನಾಡುತ್ತಾರೆ. ಅವರವರ ವೈಯಕ್ತಿಕ ವಿಚಾರ ನನಗೆ ಗೊತ್ತಿಲ್ಲ. ಇವೆಲ್ಲ ಮುಗಿದು ಹೋದ ಕತೆ ಅದು. ಯಾರಿಗೂ ಅನ್ಯಾಯ ಆಗಿಲ್ಲ, ಆಗಿದ್ದರೆ ಸರಿಪಡಿಸುತ್ತೇನೆಂದು ಸಿಎಂ ಹೇಳಿದ್ದಾರೆ. ನನಗೆ ತಂದೆಯವರು ಸಿಕ್ಕಿಲ್ಲ. ಇಬ್ಬರೂ ಹಿರಿಯರಿದ್ದಾರೆ. ಇಬ್ಬರೂ ಮಾತನಾಡಿಕೊಳ್ಳುತ್ತಾರೆ.
ಎಸ್‌.ಎಸ್‌. ಮಲ್ಲಿಕಾರ್ಜುನ್‌, ತೋಟಗಾರಿಕೆ ಸಚಿವ (ಶಾಮನೂರು ಅವರ ಪುತ್ರ)

ಶಾಮನೂರು ಹೇಳಿದ್ದಾರೆ ಎಂದರೆ ಅದು ಸತ್ಯವೇ ಇರಬಹುದು. ಮುಖ್ಯಮಂತ್ರಿಗಳು ಹೊರಗಿನವರಲ್ಲ. ಎಲ್ಲರೂ ಕುಟುಂಬ ಇದ್ದಂತೆ. ನನ್ನ ಬಳಿಯೂ ಒಂದಿಬ್ಬರು ಅಧಿಕಾರಿಗಳು ಬಂದಿದ್ದರು. ಸಿಎಂ ಜತೆ ಮಾತನಾಡಿ ಸರಿಪಡಿಸಿದ್ದೆ. ವೀರೇಂದ್ರ ಪಾಟೀಲರ ಬಳಿಕ 37 ಶಾಸಕರು ಕಾಂಗ್ರೆಸ್‌ನಿಂದ ಗೆದ್ದಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಮತಗಳು ಬಂದಿವೆ.
ವಿನಯ್‌ ಕುಲಕರ್ಣಿ, ಮಾಜಿ ಸಚಿವ

ಶಾಮನೂರು ಶಿವಶಂಕರಪ್ಪ ಹಿರಿಯಣರಿದ್ದಾರೆ. ಯಾಕೆ ಹೀಗೆಲ್ಲ ಹೇಳಿದ್ದಾರೋ ಗೊತ್ತಿಲ್ಲ. ಆದರೆ ಅವರು ಹೇಳಿದಂತೆ ಸರಕಾರದಲ್ಲಿ ಏನೂ ಆಗಿಲ್ಲ. ಅವರಿಗೆ ಮಾಹಿತಿ ಕೊರತೆ ಇರಬಹುದು. ನಮ್ಮ ಸರಕಾರ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದೆ. ಈಗಾಗಲೇ ಬಸವರಾಜ ರಾಯರೆಡ್ಡಿ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಕೊಟ್ಟಿದ್ದಾರೆ.
ದಿನೇಶ್‌ ಗುಂಡೂರಾವ್‌, ಆರೋಗ್ಯ ಸಚಿವ

ಸರಕಾರ ಎಲ್ಲ ಭಾಷೆ, ಜನಾಂಗದ ಜನತೆಯನ್ನೂ ತನ್ನ ಜತೆಯಲ್ಲಿ ತೆಗೆದುಕೊಂಡು ಹೋಗುತ್ತಿದೆ. ಸರ್ವರಿಗೂ ಸಮಪಾಲು, ಸಮಬಾಳು ಎಂಬ ಬಸವ ತತ್ವದಿಂದ ಪ್ರೇರಣೆ ಪಡೆದು ನಡೆಯುತ್ತಿದೆ. ನ್ಯೂನತೆ ಇದ್ದರೆ ಸರಿಪಡಿಸುವುದಾಗಿ ಸಿಎಂ ಹೇಳಿದ್ದಾರೆ. ಶಾಮನೂರು ಶಿವಶಂಕರಪ್ಪ ಯಾವ ದೃಷ್ಟಿಯಿಂದ ಹೇಳಿದ್ದಾರೆ ಎಂಬುದನ್ನು ನೋಡಬೇಕು.
-ಈಶ್ವರ್‌ ಖಂಡ್ರೆ, ಅರಣ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next