ಬೆಳಗಾವಿ: ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಪೊಲೀಸರು ಮಫ್ತಿ ಬಟ್ಟೆಯಲ್ಲಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು, ಕೂಡಲೇ ಸರ್ಕಾರ ಕ್ಷಮೆ ಕೇಳಬೇಕು. ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ನಮ್ಮ ಶಾಂತಿಯುತ ರ್ಯಾಲಿ ವೇಳೆ ಪೊಲೀಸರು ನಡೆಸಿದ ದಬ್ಬಾಳಿಕೆ, ದೌರ್ಜನ್ಯ ಈ ಹಿಂದಿನ ಯಾವುದೇ ಸರ್ಕಾರ ಮಾಡಿರಲಿಲ್ಲ. ಲಿಂಗಾಯತ ವಿರೋಧಿ ರಾಜ್ಯ ಸರ್ಕಾರ ಅಮಾನುಷವಾಗಿ ಹಲ್ಲೆ ಮಾಡಿದೆ. ಹೀಗಾಗಿ ಸರ್ಕಾರ ಸಮಾಜದ ಕ್ಷಮೆ ಕೇಳಬೇಕು. ಎಡಿಜಿಪಿ ಸೇರಿದಂತೆ ಅನೇಕ ಅಧಿಕಾರಿಗಳು ದ್ವೇಷದಿಂದ, ಪೂರ್ವಾಗ್ರಹಪೀಡಿತರಾಗಿ ಹೊಡೆದಿದ್ದಾರೆ ಎಂದು ಆರೋಪಿಸಿದರು.
ಘಟನೆಯನ್ನು ಖಂಡಿಸಿ ಸಮಾಜ ಬಾಂಧವರು ಡಿ. 12ರಂದು ರಾಜ್ಯದ ಹಳ್ಳಿ, ತಾಲೂಕು, ಜಿಲ್ಲಾ ಕೇಂದ್ರದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಿದ್ದಾರೆ. ಪೊಲೀಸರ ದೌರ್ಜನ್ಯದ ವಿರುದ್ಧ ಡಿ. 16ರಿಂದ ಸುವರ್ಣ ವಿಧಾನಸೌಧ ಎದುರಿನ ಕೊಂಡಸಕೊಪ್ಪ ಗ್ರಾಮದ ಬಳಿ ಹೋರಾಟ ಮುಂದುವರಿಸಲಾಗುವುದು. ಸಂಬಂಧಿಸಿದ ಎಡಿಜಿಪಿ ಸೇರಿದಂತೆ ಅಧಿಕಾರಿಗಳ ಅಮಾನತು ಮಾಡುವಂತೆ ಆಗ್ರಹಿಸಲಾಗುವುದು. ಜತೆಗೆ ಸದನದಲ್ಲಿ ಲಿಂಗಾಯತ ಸಚಿವರು, ಶಾಸಕರು ಪಕ್ಷಾತೀತವಾಗಿ ಒಗ್ಗಟ್ಟಾಗಿ ಖಂಡನಾ ನಿರ್ಣಯ ಮಂಡಿಸಬೇಕು ಎಂದು ಆಗ್ರಹಿಸಿದರು.
ಸಿಎಂ ಮಾತುಕತೆಗೆ ಕರೆದಿಲ್ಲ, ಸುಳ್ಳು ಹೇಳದಿರಿ: ಸ್ವಾಮೀಜಿ
ಪಂಚಮಸಾಲಿ ಸಂಘರ್ಷ ಸಮಾವೇಶದ ಸ್ಥಳಕ್ಕೆ ಮೂವರು ಸಚಿವರು, ಕೇವಲ ಅಭಿಪ್ರಾಯ ಕೇಳಲು ಬಂದಿರುವುದಾಗಿ ಹೇಳಿದರು. ಮುಖ್ಯಮಂತ್ರಿಗಳ ಬಳಿ 10 ಜನರನ್ನು ಕರೆದುಕೊಂಡು ಹೋಗಿದ್ದರೆ ಹೋರಾಟಗಾರರು ಸಮಾಧಾನವಾಗುತ್ತಿದ್ದರು. ಹೀಗಾಗಿ ಮುಖ್ಯಮಂತ್ರಿ ಇದ್ದಲ್ಲಿಗೆ ಹೋಗಲು ನಿರ್ಧರಿಸಲಾಯಿತು. ಮುಖ್ಯಮಂತ್ರಿಗಳು ನಮ್ಮನ್ನು ಮಾತುಕತೆಗೆ ಕರೆದಿಲ್ಲ, ಮುಖ್ಯಮಂತ್ರಿ ಸುಳ್ಳು ಹೇಳಬಾರದು. ಕನಿಷ್ಠ ಒಂದು ಕರೆ ಮಾಡಿ ಹೇಳಿದ್ದರೆ, ಯಾರಿಗಾದರೂ ಹೇಳಿ ಕಳಿಸಿದ್ದರೆ ನಾವು ಹೋಗುತ್ತಿದ್ದೇವು. ಸುಳ್ಳು ಹೇಳುವ ಪ್ರಯತ್ನ ಮಾಡಬಾರದು. ಕಾಂಗ್ರೆಸ್ ಮೇಲಿನ ಜನರ ಅಸಮಾಧಾನವನ್ನು ವಿಷಯಾಂತರ ಮಾಡಲು ಮುಖ್ಯಮಂತ್ರಿಗಳು ಸುಳ್ಳು ಹೇಳುತ್ತಿದ್ದಾರೆ ಎಂದು ಶ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.