ಹುಬ್ಬಳ್ಳಿ: ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹಳ್ಳ ಕೊಳ್ಳಗಳು ಮೈದುಂಬಿ ಹರಿಯುತ್ತಿದ್ದು, ವಾಣಿಜ್ಯ ನಗರಿಯ ಕೆಲ ಪ್ರದೇಶಗಳಿಗೆ ಕುಡಿಯುವ ನೀರಿಗೆ ಆಸರೆಯಾಗಿರುವ ನೀರಸಾಗರ ಜಲಾಶಯ ಪುನಃ ಭರ್ತಿಯಾಗುವ ನಿರೀಕ್ಷೆ ಮೂಡಿಸಿದ್ದು, ಕೋಡಿ ಹರಿಯಲು ಇನ್ನೂ ನಾಲ್ಕೇ ಅಡಿ ಬಾಕಿಯಿದೆ.
ಕಳೆದ ವರ್ಷಗಳ ನಂತರ ಸತತ ಎರಡನೇ ವರ್ಷವೂ ಭರ್ತಿಯಾಗುವ ನಿರೀಕ್ಷೆ ಮೂಡಿಸಿದ್ದು, ಮುಂದಿನ ಎರಡ್ಮೂರು ವರ್ಷ ನೀರಿನ ಬರ ದೂರ ಮಾಡಿದೆ. ಜಲಾಶಯದ ಹಿನ್ನೀರು ವ್ಯಾಪ್ತಿಯ ಮುಗದ, ಮಂಡ್ಯಾಳ, ನುಗ್ಗಿಕೇರಿ, ಮನಗುಂಡಿ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಎರಡು ದಿನಗಳಲ್ಲಿ ಆರು ಅಡಿ ನೀರು ಬಂದಿದ್ದು, ಭರ್ತಿಯಾಗಲು ಇನ್ನೂ 4 ಅಡಿ ಮಾತ್ರ ಬಾಕಿಯಿದೆ.
ಸುಮಾರು 1 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ನೀರಸಾಗರ 1087 ಎಕರೆ ಜಲಾನಯನ ಪ್ರದೇಶ ಹೊಂದಿದೆ. ಜಲಾಶಯ ಭರ್ತಿಯಾಗಿ 2019 ಆಗಸ್ಟ್ 6 ರಂದು ರಂದು ಕೋಡಿ ಹರಿದು ಹುಬ್ಬಳ್ಳಿ ಭಾಗದ ಜನರ ನೀರಿನ ದಾಹ ತೀರಿಸುವ ಭರವಸೆ ಮೂಡಿಸಿತ್ತು. ಆದರೀಗ ಕೇವಲ ಎರಡು ದಿನ ಸುರಿದ ಮಳೆಗೆ 5 ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಉತ್ತಮ ಮಳೆಗೆ ಭರ್ತಿಯಾದ ಜಲಾಶಯದಿಂದ ದಿನಕ್ಕೆ ಸರಾಸರಿ 35-40 ಎಂಎಲ್‌ಡಿ ನೀರು ಬಳಸಿಕೊಂಡ ಪರಿಣಾಮ ಒಂದು ವರ್ಷದಲ್ಲಿ ಸುಮಾರು 10 ಅಡಿ ನೀರು ಖಾಲಿಯಾಗಿತ್ತು. 28 ಅಡಿ ತಲುಪಿದ್ದ ನೀರು ಎರಡು ದಿನದ ಮಳೆಗೆ 34 ಅಡಿ ತಲುಪಿದ್ದು, ಗರಿಷ್ಠ ಮಟ್ಟ 38 ಅಡಿ ಭರ್ತಿಯಾಗಲು ನಾಲ್ಕೇ ಅಡಿ ಬಾಕಿ ಉಳಿದಿದೆ.
ಕೃಷಿಕರಲ್ಲಿ ಸಂತಸ: ಹಳೇ ಹುಬ್ಬಳ್ಳಿ, ಗೋಕುಲ ಹಾಗೂ ತಾರಿಹಾಳ ಭಾಗದ ಜನರಿಗೆ ನೀರು ಪೂರೈಸುವುದು ಒಂದು ಭಾಗವಾದರೆ, ನೀರಸಾಗರ ಭರ್ತಿಯಾದರೆ ಕಲಘಟಗಿ ತಾಲೂಕಿನ ಹತ್ತಾರು ಹಳ್ಳಿಗಳ ಕೃಷಿ ಚಟುವಟಿಕೆಗಳು ಮೆರಗು ಪಡೆಯುತ್ತವೆ. ಜಾನುವಾರುಗಳಿಗೆ ನೀರಿನ ಮೂಲವಾಗಲಿದೆ. ಸುತ್ತಲಿನ ಕೊಳವೆ ಬಾವಿಗಳ ಜಲಮೂಲ ವೃದ್ಧಿಯಾಗುತ್ತದೆ. ಕೃಷಿಕರು ಎರಡು ವರ್ಷದ ಕೃಷಿ ಚಟುವಟಿಕೆಗಳನ್ನು ಯಾವುದೇ ಆತಂಕವಿಲ್ಲದೆ ನಿರ್ವಹಿಸುತ್ತಾರೆ.
ಹಿಂದೆ ಏನಾಗಿತ್ತು: ಕಳೆದ ಹತ್ತು ವರ್ಷಗಳಲ್ಲಿ ನೀರಸಾಗರ ಸತತ ಎರಡು ವರ್ಷಗಳು ಭರ್ತಿಯಾಗುತ್ತಿರುವುದು ಮೊದಲ ಬಾರಿ. 2002 ರಿಂದ 2004 ರವರೆಗೆ ಸತತ ಬರಗಾಲದ ಪರಿಣಾಮ ಡೆಡ್ ಸ್ಟೋರೆಜ್‌ಗಿಂತಲೂ ಕಡಿಮೆಯಾಗಿತ್ತು. ಹೀಗಾಗಿ ಅಂದಿನ ಸರಕಾರ ಸುಮಾರು 4 ಕೋಟಿ ರೂ ವೆಚ್ಚದಲ್ಲಿ ಸಮಾರು 7 ಲಕ್ಷ ಘನ ಮೀಟರ್ ಹೂಳು ತೆಗೆಯುವ ಕಾರ್ಯ ನಡೆದಿತ್ತು. 2005 ರಿಂದ 2011ರವರೆಗೆ ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾಗಿತ್ತು. ನಂತರ 2012 ಹಾಗೂ 2013ರಲ್ಲಿ ಜಲಾಶಯ ಡೆಡ್ ಸ್ಟೋರೇಜ್ ತಲುಪಿತ್ತು. ಆದರೆ 2014ರಲ್ಲಿ ಒಳ್ಳೆಯ ಮಳೆಯಾಗಿ ಕೋಡಿ ಹರಿದು ನೀರಿನ ಕೊರತೆ ನೀಗಿಸಿತ್ತು. ಆಗ ಸಂಗ್ರಹವಾಗಿದ್ದ ನೀರನ್ನೇ 2016 ರವರೆಗೆ ಬಳಸಲಾಯಿತು. ನಂತರದ ಮೂರು ವರ್ಷ ಮಳೆ ಕೊರತೆಯಾಗಿದ್ದರಿಂದ 2016 ಆಗಸ್ಟ್ ವರೆಗೂ ನೀರಸಾಗರ ನೀರು ಇಲ್ಲದಂತಾಗಿತ್ತು.
ಹೂಳೆತ್ತುವ ಕಾರ್ಯವೂ ಸ್ಥಗಿತ : 2003-04 ನಂತರ ಹೂಳೆತ್ತಿ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸುವ ಕೆಲಸವಾಗಿರಲಿಲ್ಲ. ಹೀಗಾಗಿ 2019 ಜೂನ್ ತಿಂಗಳಲ್ಲಿ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪ್ರಯತ್ನದ ಫಲವಾಗಿ ಟಾಟಾ ಇಟಾಚಿ ಕಂಪನಿತನ್ನ ಸಿಎಸ್‌ಆರ್ ನಿಧಿಯಲ್ಲಿ 100 ಎಕರೆಯ ಸುಮಾರು 12 ಲಕ್ಷ ಘನ ಮೀಟರ್ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಆದರೆ ನಾಲ್ಕೈದು ದಿನಗಳ ನಂತರ ಮಳೆ ಆರಂಭವಾದ ಹಿನ್ನೆಲೆಯಲ್ಲಿ ಕಾಮಗಾರಿಗೆ ಹಿನ್ನಡೆಯಾಗಿತ್ತು.
ಕಳೆದ ಎರಡ್ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಭರ್ತಿಯಾಗಲು ನಾಲ್ಕೇಅಡಿ ಬಾಕಿಯಿದೆ. ಇನ್ನೊಂದೆರಡು ದಿನ ಉತ್ತಮ ಮಳೆಯಾದರೆ ಈ ವಾರದಲ್ಲೇ ಭರ್ತಿಯಾಗುತ್ತದೆ. ಇನ್ನೂ ಮಳೆಗಳು ಇರುವುದರಿಂದ ಜಲಾಶಯ ತುಂಬುವ ನಿರೀಕ್ಷೆಯಿದೆ.
-ಪಿ.ಸುರೇಶ, ಕಾರ್ಯನಿರ್ವಾಹಕ ಅಭಿಯಂತರ, ಜಲಮಂಡಳಿ
ಹೇಮರಡ್ಡಿ ಸೈದಾಪುರ