ಸ್ಟಾಕ್ ಹೋಂ: ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ತಮ್ಮ ಪದಕ ಬೇಟೆ ಮುಂದುವರಿಸಿದ್ದಾರೆ. ಸ್ವೀಡನ್ ರಾಜಧಾನಿ ಸ್ಟಾಕ್ ಹೋಂ ನಲ್ಲಿ ನಡೆಯುತ್ತಿರುವ ಡೈಮಂಡ್ ಲೀಗ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ, ಅಲ್ಲದೆ ತನ್ನದೇ ರಾಷ್ಟ್ರೀಯ ದಾಖಲೆಯನ್ನು ಉತ್ತಮ ಪಡಿಸಿಕೊಂಡಿದ್ದಾರೆ.
ನೀರಜ್ ಚೋಪ್ರಾ ಅವರು 89.94 ಮೀ ದೂರ ಜಾವೆಲಿನ್ ಎಸೆದು ಬೆಳ್ಳಿ ಪದಕ ಗೆದ್ದರು. ಆದರೆ ಈವೆಂಟ್ ನಲ್ಲಿ ಚಿನ್ನದ ಮಾನದಂಡವಾದ 90 ಮೀ. ಮಾರ್ಕ್ ಅನ್ನು ಕೇವಲ o.o6ಮೀ ನಿಂದ ಕಳೆದುಕೊಂಡರು.
ಫಿನ್ ಲ್ಯಾಂಡ್ ನ ಪಾವೋ ನುರ್ಮಿ ನ್ಯಾಶನಲ್ ಗೇಮ್ಸ್ ನಲ್ಲಿ 89.3 ಮೀಟರ್ ಎಸೆದಿದ್ದು ನೀರಜ್ ಚೋಪ್ರಾ ಅವರ ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಮುರಿದು ಹೊಸ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ:ಇಂಗ್ಲೆಂಡ್ ವಿರುದ್ಧ ಟಿ20 ಏಕದಿನ ಸರಣಿಗೆ ತಂಡ ಪ್ರಕಟ; ಮರಳಿದ ಶಿಖರ್ ಧವನ್
ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಚೋಪ್ರಾ ಅವರ ದಾಖಲೆ ಮುರಿದ ಥ್ರೋನ ವೀಡಿಯೊವನ್ನು ಹಂಚಿಕೊಂಡಿದ್ದಾರೆ. “ಒಲಿಂಪಿಕ್ ಚಾಂಪಿಯನ್ ನೀರಜ್_ಚೋಪ್ರಾ 2022 ಸ್ಟಾಕ್‌ಹೋಮ್ ಡೈಮಂಡ್ ಲೀಗ್ ನಲ್ಲಿ 89.94 ಮೀ ಎಸೆಯುವ ಮೂಲಕ ಹೊಸ ರಾಷ್ಟ್ರೀಯ ದಾಖಲೆ ಮತ್ತು ವೈಯಕ್ತಿಕ ಶ್ರೇಷ್ಠತೆಯನ್ನು ಸ್ಥಾಪಿಸಿದ್ದಾರೆ. ಕೂಟದಲ್ಲಿ ಎರಡನೇ ಸ್ಥಾನವನ್ನು ಗಳಿಸಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ನೀರಜ್ ಚೋಪ್ರಾ ಅವರು ಜುಲೈ 15 ರಿಂದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಯುಜೀನ್ ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್ ನ್ನು ಎದುರು ನೋಡುತ್ತಿದ್ದಾರೆ.