ಜ್ಯೂರಿಕ್: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಜಾವೆಲಿನ್ ಪಟು ನೀರಜ್ ಚೋಪ್ರಾ ಡೈಮಂಡ್ ಲೀಗ್ ನಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟರು. ಚೋಪ್ರಾ ತನ್ನ 85.71 ಮೀಟರ್ ಗಳ ಅತ್ಯುತ್ತಮ ಪ್ರಯತ್ನದೊಂದಿಗೆ ಜೆಕ್ ಗಣರಾಜ್ಯದ ಜಾಕುಬ್ ವಾಡ್ಲೆಜ್ಚ್ ನಂತರ ಎರಡನೇ ಸ್ಥಾನ ಪಡೆದರು.
ಮೊದಲ ಪ್ರಯತ್ನದಲ್ಲಿ 80.79 ಮೀಟರ್ ಎಸೆದ ನೀರಜ್ ಮತ್ತೆರಡು ಪ್ರಯತ್ನದಲ್ಲಿ ಫೌಲ್ ಆದರು. ಈ ವೇಳೆ ಜರ್ಮನಿಯ ಜ್ಯುಲಿಯನ್ ವೆಬರ್ ಮೊದಲ ಸ್ಥಾನದಲ್ಲಿದ್ದರೆ, ನೀರಜ್ ಐದನೇ ಸ್ಥಾನದಲ್ಲಿದ್ದರು.
ಚೋಪ್ರಾ ಅವರು ತಮ್ಮ ನಾಲ್ಕನೇ ಪ್ರಯತ್ನದಲ್ಲಿ 85.22 ಮೀ ಎಸೆಯುವ ಮೂಲಕ ಅಂಕಪಟ್ಟಿಯಲ್ಲಿ ಮೇಲುಗೈ ಸಾಧಿಸಿದರು. ಆಗ ಜಾಕುಬ್ ವಡ್ಲೆಜ್ಚ್ ಅವರು ಮೊದಲ ಸ್ಥಾನದಲ್ಲಿದ್ದರೆ, ನೀರಜ್ ಎರಡನೇ ಸ್ಥಾನಕ್ಕೆ ಜಂಪ್ ಮಾಡಿದರು. ಚೋಪ್ರಾ ತನ್ನ ಐದನೇ ಪ್ರಯತ್ನದಲ್ಲಿ ಮತ್ತೊಂದು ಫೌಲ್ ಮಾಡಿದರು. ಅವರ ಅಂತಿಮ ಪ್ರಯತ್ನದಲ್ಲಿ, ಚೋಪ್ರಾ 85.71 ಮೀ ದೂರವನ್ನು ಎಸೆದರು. ಅಂತಿಮವಾಗಿ 85.86 ಮೀಟರ್ ಎಸೆದ ವಾಡ್ಲೆಜ್ಚ್ ಮೊದಲ ಸ್ಥಾನ ಪಡೆದರೆ, ಚೋಪ್ರಾ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟರು.
ಕೆಲ ದಿನಗಳ ಹಿಂದೆ ಹಂಗೇರಿಯ ಬುಡಾಪೆಸ್ಟ್ ನಲ್ಲಿ ನಡೆದಿದ್ದ ವಿಶ್ವ ಅತ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ನೀರಜ್ ಚೋಪ್ರಾ ಬಂಗಾರದ ಪದಕ ಗೆದ್ದಿದ್ದರು. ಈ ಮೂಲಕ ವಿಶ್ವ ಅತ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಖ್ಯಾತಿ ಪಡೆದಿದ್ದರು. ಅಲ್ಲಿ ಅವರು 88.17 ಮೀಟರ್ ಜಾವೆಲಿನ್ ಎಸೆದಿದ್ದರು.