Advertisement

ಸಮಸ್ಯೆ ಅರಿಯಲು ಬೇಕಿದೆ ಬಹು ಶಿಸ್ತೀಯ ಅಧ್ಯಯನ

12:48 PM Feb 26, 2017 | |

ದಾವಣಗೆರೆ: ಬಹು ಶಿಸ್ತೀಯ ಅಧ್ಯಯನ ಮಾಡದ ಹೊರತು ನಮ್ಮ ದೇಶದ ಸಮಸ್ಯೆಗಳು ನಮಗೆ ಅರ್ಥವಾಗುವುದಿಲ್ಲ ಎಂದು ಆಳ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಡಾ| ವಿನಯಾ ಒಕ್ಕುಂದ ಅಭಿಪ್ರಾಯಪಟ್ಟರು. 

Advertisement

ಶನಿವಾರ ಎ.ಆರ್‌.ಎಂ. ಕಾಲೇಜಿನಲ್ಲಿ ಕನ್ನಡ ಜಾನಪದ ಪರಿಷತ್‌, ಧಾರವಾಡದ ಸಮಷ್ಠಿ ಫೌಂಡೇಷನ್‌ನಿಂದ ಹಮ್ಮಿಕೊಂಡಿದ್ದ ಸಮಕಾಲೀನ ಸಮಸ್ಯೆಗಳು ಮತ್ತು ಪರಿಹಾರಗಳು: ಬಹುಶಿಸ್ತೀಯ ಅಧ್ಯಯನಗಳ ಅನುಸಂಧಾನ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ನಮ್ಮ ಸಮಸ್ಯೆಗಳು ಈಗ ದೂರವಿಲ್ಲ. ನಮ್ಮ ಉಸಿರಿನಷ್ಟೇ ಹತ್ತಿರ ಇವೆ. ಅವು ಮೇಲ್ನೋಟಕ್ಕೆ ಸಮಸ್ಯೆಗಳಂತೆ ಕಾಣುವುದಿಲ್ಲ. ಸಮಸ್ಯೆಗಳಾವು ಎಂಬುದ ತಿಳಿಯಲು ಬಹುಶಿಸ್ತೀಯ ಅಧ್ಯಯನ ಅವಶ್ಯಕ ಎಂದು ಪ್ರತಿಪಾದಿಸಿದರು. ಸದ್ಯದ ಸ್ಥಿತಿಯಲ್ಲಿ ನಮ್ಮ ದೇಶದ ನಾಲ್ಕು ಅಂಗಗಳು ಕಾಲು ಮುರಿದುಕೊಂಡು ಬಿದ್ದಿವೆ.

ಯಾವ ಅಂಗ ಸಹ ಸಮುದಾಯದ ಪರ ಕೆಲಸ ಮಾಡುವುದಿಲ್ಲ. ಶಾಸಕಾಂಗ ಎಂತಹ ಕಾನೂನು ಮಾಡಬಹುದು ಎಂಬುದನ್ನು ನಾವೀಗ ನೋಡುತ್ತಿದ್ದೇವೆ. ಕಾರ್ಯಾಂಗ ಸಂಪೂರ್ಣ ನೆಲಕಚ್ಚಿದೆ. ನ್ಯಾಯಾಂಗ ಸರ್ಕಾರದ ಆಣತಿಯಂತೆ ನಡೆದುಕೊಳ್ಳುತ್ತಿದೆ. ಇದಕ್ಕೆ ತಮಿಳುನಾಡಿನ ಶಶಿಕಲಾ ಪ್ರಕರಣ ಉತ್ತಮ ಉದಾರಹಣೆ.

ಇನ್ನು ಪತ್ರಿಕಾ ರಂಗ ಬಂಡವಾಳಶಾಹಿಗಳ ಕೈಯಲ್ಲಿದೆ ಎಂದು ಅವರು ಹೇಳಿದರು.  ಈ ಸೂಕ್ಷ್ಮ ವಿಷಯಗಳನ್ನು ಅರ್ಥಮಾಡಿಕೊಂಡು ನಾವು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ನಮ್ಮತನ ಪುನರ್‌ ಪ್ರತಿಷ್ಠಾಪಿಸಲು ಹೋರಾಡಬೇಕಿದೆ. ಹಾಗೆ ವಿಷಯಗಳ ಅರ್ಥ ಮಾಡಿಕೊಂಡು ಹೋರಾಟ ಮಾಡಬೇಕಾದರೆ ಬಹುಶಿಸ್ತೀಯ ಅಧ್ಯಯನ ಅನಿವಾರ್ಯ.

Advertisement

ಬಹುಶಿಸ್ತೀಯ ಅಧ್ಯಯನದಲ್ಲಿ ಆಳವಿರಬೇಕು. ನಮ್ಮ ಇಂದಿನ ಪಠ್ಯಕ್ರಮ ಅದನ್ನು ಹೇಳಲಾರವು. ಪಠ್ಯದಿಂದಾಚೆ ಇರುವ ವಿಷಯಗಳನ್ನು ಶಿಕ್ಷಕ ವೃಂದ ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಬೇಕು ಎಂದು ಅವರು ತಿಳಿಸಿದರು. ಸಮಾಜದಲ್ಲಿ ಆಗುತ್ತಿರುವ ಪ್ರತಿ ಬದಲಾವಣೆಯನ್ನು ಹತ್ತಿರದಿಂದ ನೋಡಬೇಕಾದ ಸ್ಥಿತಿ ಪ್ರಸ್ತುತ ಇದೆ. ಆದರೆ, ನಮ್ಮ ಶಿಕ್ಷಣ ಪದ್ಧತಿ ಇಂತಹ ಅವಕಾಶ ಮಾಡಿಕೊಡುವುದಿಲ್ಲ. ಬದಲಿಗೆ ಪಟ್ಟಭದ್ರರ ಚಿಂತನೆಗಳನ್ನು ಹೇಳಿಕೊಡುತ್ತಿದೆ.

ಸಾಮಾಜಿಕ  ಬದಲಾವಣೆ, ವಿವಿಧ ಆಯಾಮದ ವಿಚಾರಧಾರೆ ನಮ್ಮ ಅಧ್ಯಯನದ ಭಾಗವಾಗದ ಹೊರತು ಶಿಕ್ಷಣದ ಸುಧಾರಣೆ ಅಸಾಧ್ಯ ಎಂದು ಅವರು ತಿಳಿಸಿದರು. ದಾವಿವಿ ಪ್ರಾಧ್ಯಾಪಕ ಡಾ| ಜಿ.ಟಿ. ಗೋವಿಂದಪ್ಪ, ದೇವರಾಜ ಅರಸು ವಿದ್ಯಾಸಂಸ್ಥೆಯ ಸಂಸ್ಥಾಪಕ ಎನ್‌. ನಿಂಗಣ್ಣ, ವಿಚಾರ ಸಂಕಿರಣ ಸಮಿತಿಯ ಸಂಯೋಜಕ ಅಧ್ಯಕ್ಷ ಡಾ| ಪ್ರಕಾಶ್‌ ಹಲಗೇರಿ ವೇದಿಕೆಯಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next