ದಾವಣಗೆರೆ: ಕವಿಯಾದವನಿಗೆ ಕಾವ್ಯದ ಮೇಲೆ ಪ್ರೀತಿ, ಆಳವಾದ ಅಧ್ಯಯನ, ಜೀವನದ ಸೌಂದರ್ಯದ ಬಗ್ಗೆ ಅರಿವು, ಸಮಾಜದ ಕಾಳಜಿ ಇರಬೇಕು ಎಂದು ಸಾಹಿತಿ ಪ್ರೊ| ಚಂದ್ರಶೇಖರ್ ತಾಳ್ಯ ಅಭಿಪ್ರಾಯಪಟ್ಟಿದ್ದಾರೆ.
ವಿದ್ಯಾನಗರದ ಉದ್ಯಾನವನದಲ್ಲಿ ಗ್ರಂಥ ಸರಸ್ವತಿ ಪ್ರಕಾಶನ, ಕನ್ನಡ ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಕವಿಗೋಷ್ಠಿ, ಕಾವ್ಯಗಾನ ನೃತ್ಯ ಸಮಾಗಮ ಸಮಾರಂಭದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಕವಿಗೆ ಸಂವೇದನಾಶೀಲತೆ ಇರಬೇಕು ಎಂದರು. ಕವಿ ಕಾವ್ಯ ಓದಿದಾಗ, ಕೇಳಿದಾಗ ಕೇಳುಗ, ಓದುಗರಲ್ಲಿ ಸಂಚಲನ ಉಂಟಾಗಬೇಕು. ಅನುಭವದ ಆಳದಿಂದ ಬರೆಯುವ ಕವಿ ಉತ್ತಮ ಕಾವ್ಯ ರಚಿಸಬಲ್ಲ. ಕವಿಗೋಷ್ಠಿಗಳು ಕವಿಗಳನ್ನು ಹೊಸ ಚಿಂತನೆಗೆ ತೊಡಗಿಸುತ್ತವೆ ಎಂದು ಅವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಎಸ್.ಬಿ. ರಂಗನಾಥ್, ಸುಸಂಸ್ಕೃತರು, ಪ್ರಜ್ಞಾವಂತರು ಕಲೆಯ ಅಭಿರುಚಿ ಬೆಳೆಸಿಕೊಂಡರೆ ಮೂರ್ಖರು, ಜೂಜುಗಾರರು ವಿಚಿತ್ರ ವ್ಯಸನ, ಕಲಹಗಳಲ್ಲಿ ಕಾಲಹರಣ ಮಾಡುತ್ತಾರೆ ಎಂದರು.
ಕಾರ್ಯಕ್ರಮ ಸಂಯೋಜಕ, ಗ್ರಂಥ ಸರಸ್ವತಿ ಪ್ರಕಾಶನದ ಶಿವಕುಮಾರ್ ಸ್ವಾಮಿ ಆರ್. ಕುರ್ಕಿ ಮಾತನಾಡಿ, ಈ ಸುಂದರ ಉದ್ಯಾನ ವನವನ್ನು ಕಾವ್ಯೋದ್ಯಾನವನ ಮಾಡಲು ಪ್ರತಿ ಭಾನುವಾರ ಸಂಜೆ 6.30ಕ್ಕೆ ಒಬ್ಬ ಕವಿ ಕುರಿತು ಉಪನ್ಯಾಸ, ಕಾವ್ಯ ವಾಚನ, ಗಾನಯ ನೃತ್ಯ ಸಮಾಗಮ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಉಪನ್ಯಾಸಕ ನಾಗರಾಳ ಇತರರು ವೇದಿಕೆಯಲ್ಲಿದ್ದರು. ಪುಟ್ಟರಾಜ ಗಾನ ಗುರುಕುಲದ ಕಲಾವಿದರು ಸುಗಮ ಸಂಗೀತ, ಶಿವಾಂಜಲಿ ನೃತ್ಯ ವೃಂದ ಎಸ್. ಐಶ್ವರ್ಯ ಕುರ್ಕಿ ಭರತ ನಾಟ್ಯ ನಡೆಸಿಕೊಟ್ಟರು.