ಭಾಲ್ಕಿ: ಗಡಿ ಭಾಗದಲ್ಲಿ ಸಾಕಷ್ಟು ಪ್ರತಿಭೆಗಳಿದ್ದು, ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ನಡೆಯಬೇಕಿದೆ ಎಂದು ಸಾಪ್ಟ್ವೇರ್ ಅಭಿಯಂತರ ಅನೀಲ ದುಬಳಿಗುಂಡಿಕರ ಹೇಳಿದರು.
ಬೀರಿ(ಬಿ) ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ನಮ್ಮ ಬೀದರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸನ್ಮಾನ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುವ ನಿಟ್ಟಿನಲ್ಲಿ ನಮ್ಮ ಬೀದರ ಕ್ಷೇಮಾಭಿವೃದ್ಧಿ ಸಂಘದಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು. ಪ್ರತಿಭಾವಂತ ವಿದ್ಯಾರ್ಥಿಗಳು ಇದರ ಲಾಭ ಪಡೆಯಬೇಕು. ಅಲ್ಲದೇ ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯಿಟ್ಟುಕೊಂಡು ಅಧ್ಯಯನ ಮಾಡಿದರೆ ಜೀವನದಲ್ಲಿ ಯಶಸ್ಸು ಕಂಡುಕೊಳ್ಳಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಮ್ಮ ಬೀದರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಶರಣಬಸವ ಸೇಡಮಕರ್ ಮಾತನಾಡಿ, ತಾಲೂಕು ಶೈಕ್ಷಣಿಕವಾಗಿ ಪ್ರಗತಿ ಸಾಧಿ ಸುತ್ತಿರುವುದು ಉತ್ತಮ ಬೆಳವಣಿಗೆ. ಆದರೆ, ನಿಷ್ಕಾಳಜಿತನ ಮಾಡದೇ ಹೆಚ್ಚು ಪ್ರಯತ್ನ ಮಾಡಿದರೆ ಮತ್ತಷ್ಟು ಪ್ರತಿಭೆಗಳು ಹೊರಬರಲು ಸಾಧ್ಯವಾಗುತ್ತದೆ. ಗಡಿ ಭಾಗದ ಪ್ರಗತಿಗಾಗಿ ಜಿಲ್ಲೆಯ ಎಲ್ಲ ಇಂಜನೀಯರ್‌ಗಳು ಸೇರಿ “ನಮ್ಮ ಬೀದರ್ ಕ್ಷೇಮಾಭಿವೃದ್ಧಿ ಸಂಘ’ ಸ್ಥಾಪಿಸಿದ್ದು, ಶೈಕ್ಷಣಿಕ, ಕೃಷಿ, ಸಾಮಾಜಿಕ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಈ ಸಂಘ ಗುರುತಿಸಿ ಪ್ರೋತ್ಸಾಹಿಸಲಿದೆ. ಜತೆಗೆ ಮುಂದಿನ ದಿನಗಳಲ್ಲಿ ಕೃಷಿ ಮೇಳ ಸೇರಿದಂತೆ ನಾನಾ ಕಾರ್ಯಾಗಾರ ಹಮ್ಮಿಕೊಂಡು ಜಿಲ್ಲೆಯ ಪ್ರಗತಿಗೆ ಸಂಘ ಕೈಜೊಡಿಸಲಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯಗುರು ಯುವರಾಜ ದೇವಪ್ಪನೋರ್ ಮಾತನಾಡಿ, ಶೈಕ್ಷಣಿಕ ಪ್ರಗತಿಗಾಗಿ ಸರಕಾರ ಹಾಗೂ ಸಂಘ ಸಂಸ್ಥೆಗಳು ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದು ಸಲಹೆ ನೀಡಿದರು.
ಇದೇ ವೇಳೆ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ರ್‍ಯಾಂಕ್ ಗಳಿಸಿದ ಭಾಗ್ಯಶ್ರೀ ಮಹಾಂತೇಶ ಕಾರಬಾರಿ, ನಿಕೀತಾ ಮಚೇಂದ್ರ ಮತ್ತು ಜಗದೇವಿ ತುಕಾರಾಮ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಅಲ್ಲದೇ ಶಾಲೆಯ ಸುಮಾರು 80 ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಶಬ್ದಕೋಶದ ಜತೆಗೆ ಸಸಿಗಳನ್ನು ವಿತರಿಸಲಾಯಿತು. ಕರವೇ ಅಧ್ಯಕ್ಷ ಸಂಗಮೇಶ ಗುಮ್ಮೆ, ಸಂಗಮೇಶ ತೋರಣೆ ಸೇರಿದಂತೆ ಶಿಕ್ಷಕರು ಹಾಜರಿದ್ದರು. ಶಬೀರ ನಿರೂಪಿಸಿದರು. ವಿಜಯಕುಮಾರ ಕುಲಕರ್ಣಿ ವಂದಿಸಿದರು.