Advertisement

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅಗತ್ಯ ನೆರವು

12:02 PM Apr 12, 2022 | Team Udayavani |

ಧಾರವಾಡ: ಅವಳಿನಗರದಲ್ಲಿ ಸುಚಿತ್ರಾ ಹಾಗೂ ಚಿತ್ರಾ ಫಿಲ್ಮ್‌ ಸೊಸೈಟಿಗಳು ಜಂಟಿಯಾಗಿ ಆಯೋಜಿಸಲು ಬಯಸಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಎಲ್ಲ ಅಗತ್ಯ ನೆರವು ಒದಗಿಸಲಾಗುವುದು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

Advertisement

ನಗರದ ಸೃಜನಾ ರಂಗಮಂದಿರಲ್ಲಿ ಸೋಮವಾರ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕುರಿತ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಸುಚಿತ್ರಾ ಹಾಗೂ ಚಿತ್ರಾ ಎರಡೂ ಫಿಲ್ಮ್‌ ಸೊಸೈಟಿಗಳಿಗೆ 50 ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ ಹುಬ್ಬಳ್ಳಿ- ಧಾರವಾಡದಲ್ಲಿ ಅರ್ಥ ಪೂರ್ಣವಾದ ಚಿತ್ರೋತ್ಸವ ಆಯೋಜನೆಗೆ ಸ್ಥಳೀಯ ಸಂಘ- ಸಂಸ್ಥೆ, ಉದ್ಯಮಗಳು ಹಾಗೂ ಆಡಳಿತದಿಂದ ಅಗತ್ಯ ನೆರವು, ಸಹಕಾರ ಕಲ್ಪಿಸಲಾಗುವುದು. ಇದಕ್ಕಾಗಿ ಪ್ರತ್ಯೇಕ ಸಮಿತಿ ರಚಿಸುವುದು ಸೂಕ್ತ ಎಂದರು.

ಚಲನಚಿತ್ರ ನಟ, ನಿರ್ದೇಶಕ ಪ್ರಕಾಶ ಬೆಳವಾಡಿ ಮಾತನಾಡಿ, ಸಿನಿಮಾ ಸಂಸ್ಕೃತಿ ಬೆಳೆಸುವ ಮೂಲಕ ವಿಪುಲ ಅವಕಾಶ ಹಾಗೂ ಸಾಧ್ಯತೆಗಳನ್ನು ಸೃಷ್ಟಿಸಬಹುದು. ಸ್ಥಳೀಯ ಉದ್ಯಮ, ವ್ಯಾಪಾರಿಗಳು, ಕೈಗಾರಿಕೆಗಳ ಮೂಲಕ ಸಂಪನ್ಮೂಲಗಳ ಕ್ರೋಢೀಕರಣ ಮಾಡಿ ಸರ್ಕಾರದ ಒಂದು ಸಣ್ಣ ಪಾಲಿನ ಅನುದಾನ ಪಡೆದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸುವ ಉದ್ದೇಶವಿದೆ ಎಂದು ಹೇಳಿದರು.

ಸುಚಿತ್ರಾ ಫಿಲ್ಮ್‌ ಸೊಸೈಟಿಯ ನರಹರಿರಾವ್‌ ಮಾತನಾಡಿ, ಇಟಲಿಯಲ್ಲಿ ಮುಸಲೋನಿಯ ಕಾಲದಲ್ಲಿ ಚಲನಚಿತ್ರೋತ್ಸವ ಪರಂಪರೆ ಪ್ರಾರಂಭವಾಯಿತು. ಇದೀಗ ಕಾನ್‌, ಬರ್ಲಿನ್‌, ಆಸ್ಕರ್‌ ಪ್ರಶಸ್ತಿ ವಿಜೇತ ಚಿತ್ರಗಳು ನಾಡಿನ ಜನರಿಗೆ ವೀಕ್ಷಿಸಲು ಲಭ್ಯವಾಗಬೇಕು ಎಂದು ಹೇಳಿದರು.

Advertisement

ಡಿಸಿ ನಿತೇಶ್‌ ಕೆ. ಪಾಟೀಲ ಮಾತನಾಡಿ, ವಿಮಾನ, ರೈಲ್ವೆ, ಬಸ್‌ ಮತ್ತಿತರ ಉತ್ತಮ ಸಂಪರ್ಕ ವ್ಯವಸ್ಥೆ ಹೊಂದಿರುವ ಹುಬ್ಬಳ್ಳಿ-ಧಾರವಾಡದಲ್ಲಿ ದೊಡ್ಡ ಸಂಖ್ಯೆಯ ವಿದ್ಯಾರ್ಥಿ ಸಮೂಹವಿದೆ. ಒಂದೇ ಕಡೆ ಅನೇಕ ಚಲನಚಿತ್ರಗಳನ್ನು ವೀಕ್ಷಿಸಲು ಸಾಧ್ಯವಾಗುವ ಉತ್ಸವ,ಗೋಷ್ಠಿಗಳನ್ನು ಹಮ್ಮಿಕೊಳ್ಳಬಹುದು. ಸರ್ಕಾರದಿಂದಲೂ ನೆರವು ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಮಹಾನಗರ ಪಾಲಿಕೆ ಆಯುಕ್ತ ಡಾ| ಬಿ. ಗೋಪಾಲಕೃಷ್ಣ ಮಾತನಾಡಿ, ಕೋವಿಡ್‌ ನಂತರದ ದಿನಗಳಲ್ಲಿ ಜನರಿಗೆ ಸದಭಿರುಚಿಯ ಸಾಂಸ್ಕೃತಿಕ ಚಟುವಟಿಕೆಗಳನ್ನು ನೀಡುವ ಅಗತ್ಯವಿದೆ ಎಂದರು.

ರಂಗಾಯಣ ನಿರ್ದೇಶಕ ರಮೇಶ್‌ ಪರವಿನಾಯ್ಕರ್‌ ಮಾತನಾಡಿ, ಆಜಾದಿ ಕಾ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಭಾರತೀಯ ಕಲೆ, ಪರಂಪರೆ ಬಿಂಬಿಸುವ, ಪರಿಸರ ಜಾಗƒತಿಯ ಚಿತ್ರಗಳು ಉತ್ಸವದಲ್ಲಿ ಪ್ರದರ್ಶನಗೊಳ್ಳಲಿ, ರಂಗಾಯಣ ಸಹಕಾರ ಒದಗಿಸಲಿದೆ ಎಂದರು.

ರಂಗಕರ್ಮಿ ಪ್ರಕಾಶ ಗರುಡ, ಚಿತ್ರ ಫಿಲ್ಮ್‌ ಸೊಸೈಟಿಯ ಎ.ಎಂ. ಖಾನ್‌, ಶ್ರೀನಿವಾಸ ಶಾಸ್ತ್ರಿ, ಆನಂದ ವರ್ಧನ್‌, ವಿಶಾಖ ಅಭಿಷೇಕ ಅಯ್ಯಂಗಾರ, ಸಮೀರ್‌ ಜೋಷಿ, ಅರುಣ ಕರಡಿ ಸೇರಿದಂತೆ ಅನೇಕರು ಸಲಹೆ-ಸೂಚನೆಗಳನ್ನು ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ನಿರೂಪಿಸಿದರು. ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ ವಂದಿಸಿದರು.

 

ಸದಭಿರುಚಿಯ ಎಲ್ಲಾ ಚಿತ್ರಗಳು ಓಟಿಟಿ ವೇದಿಕೆಯಲ್ಲಿ ಸಿಗುವುದಿಲ್ಲ. ಸಾಮೂಹಿಕವಾಗಿ ಒಟ್ಟಾಗಿ ಸಿನಿಮಾ ವೀಕ್ಷಿಸುವ ಅನುಭವಕ್ಕೂ, ಪ್ರತ್ಯೇಕವಾಗಿ ಒಬ್ಬರೇ ನೋಡುವುದಕ್ಕೂ ವ್ಯತ್ಯಾಸವಿದೆ. ಚಲನಚಿತ್ರೋತ್ಸವದ ಮೂಲಕ ಫಿಲ್ಮ್‌ ಕೋರ್ಸ್‌ಗಳನ್ನು ಜನಪ್ರಿಯಗೊಳಿಸಿ, ಉದ್ಯೋಗ ಸೃಜನೆಗೆ ಅವಕಾಶವಿದೆ. –ಪ್ರಕಾಶ ಬೆಳವಾಡಿ, ಚಲನಚಿತ್ರ ನಟ-ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next