ರಾಯಪುರ: ಛತ್ತೀಸ್‌ಗಢದ ಸುಕ್‌ಮಾ ಜಿಲ್ಲೆಯಲ್ಲಿ ನಿನ್ನೆ ತಡರಾತ್ರಿ ಶಸ್ತ್ರ ಸಜ್ಜಿತ ನಕ್ಸಲರು ಮೂರು ಬಸ್ಸು ಮತ್ತು ಮೂರು ಟ್ರಕ್ಕುಗಳಿಗೆ ಬೆಂಕಿ ಹಚ್ಚಿದ್ದಾರೆ.
ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಕೆಳಗೆ ಇಳಿಯುವಂತೆ ನಕ್ಸಲರು ಹೇಳಿದರು. ಆಗ ಬಸ್ಸಿನೊಳಗೆ ಒಬ್ಬ ಮಾಜಿ ಪೊಲೀಸ್ ಕಾನ್‌ಸ್ಟೆಬಲ್ ಇರುವುದನ್ನು ಕಂಡ ಅವರು ಆತನನ್ನು ಗುಂಡೆಸೆದು ಕೊಂದರು.
ಈ ಖಾಸಗಿ ಬಸ್ಸುಗಳು ಸುಕ್‌ಮಾ ಮಾರ್ಗವಾಗಿ ತೆಲಂಗಾಣಕ್ಕೆ ಹೋಗುತ್ತಿದ್ದವು. ಪೆಡ್ಡ ಕುಡ್ತಿ ಮತ್ತು ಪೆಂಟ ಗ್ರಾಮದಲ್ಲಿ ನಿನ್ನೆ ರಾತ್ರಿ 10ರಿಂದ 11 ಗಂಟೆಯ ನಡುವಿನ ಅವಧಿಯಲ್ಲಿ ನಕ್ಸಲರು ಈ ಬಸ್ಸುಗಳಿಗೆ ಬೆಂಕಿ ಹಚ್ಚಿದರು ಎಂದು ದಕ್ಷಿಣ ಬಸ್ತಾರ್ ವಲಯದ ಡಿಐಜಿ ಸುಂದರರಾಜ್ ಪಿ ಮಾಧ್ಯಮಗಳಿಗೆ ತಿಳಿಸಿದರು.
ಒಂದು ತಾಣದಲ್ಲಿ ನಾಲ್ಕು ವಾಹನಗಳಿಗೆ ಮತ್ತು ಅಲ್ಲಿಂದ ಕೇವಲ 300 ಮೀಟರ್ ದೂರದ ಇನ್ನೊಂದು ಸ್ಥಳದಲ್ಲಿ ಇನ್ನೆರಡು ವಾಹನಗಳಿಗೆ ನಕ್ಸಲರು ಬೆಂಕಿ ಹಚ್ಚಿದರು.
ನಕ್ಸಲರ ಗುಂಡಿಗೆ ಬಲಿಯಾಗಿರುವ ಮಾಜಿ ಪೊಲೀಸ್ ಕಾನ್‌ಸ್ಟೆಬಲ್‌ನನ್ನು ಮುನ್ನಾ ಸೋದಿ ಎಂದು ಗುರುತಿಸಲಾಗಿದೆ. ಈತನನ್ನು ಈಚೆಗೆ ಸೇವೆಯಿಂದ ಕಿತ್ತು ಹಾಕಲಾಗಿತ್ತು ಎಂದು ಡಿಐಜಿ ತಿಳಿಸಿದ್ದಾರೆ.
ನಕ್ಸಲ್ ದಾಳಿ ಕುರಿತ ಮಾಹಿತಿ ದೊರಕಿದಾಕ್ಷಣ ಪೊಲೀಸ್ ಸ್ಥಳಕ್ಕೆ ಧಾವಿಸಿ ಬಂದು ಪ್ರಯಾಣಿಕರಿಗೆ ಬೇರೆ ಬಸ್ಸುಗಳ ವ್ಯವಸ್ಥೆ ಮಾಡಿದರು.
ಬಿಜಾಪುರ ಜಿಲ್ಲೆಯ ಪೂಜಾರಿ ಕಂಕೇರ್ ಪ್ರದೇಶದಲ್ಲಿ ಕಳೆದ ಮಾರ್ಚ್ 2ರಂದು 10 ನಕ್ಸಲರನ್ನು ತೆಲಂಗಾಣ ಪೊಲೀಸರು ಹತ್ಯೆಗೈದುದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಶಂಕಿಸಲಾಗಿದೆ.