ಇಸ್ಲಾಮಾಬಾದ್ : ಹಲವು ದಶಕಗಳ ಬದ್ಧ ವೈರಿಗಳಾಗಿರುವ ಅಮೆರಿಕ ಮತ್ತು ಉತ್ತರ ಕೊರಿಯ ಶಾಂತಿ ಮಾತುಕತೆಯ ಮೂಲಕ ತಮ್ಮೊಳಗಿನ ಎಲ್ಲ ಭಿನ್ನಮತಗಳನ್ನು ನಿವಾರಿಸಕೊಂಡ ರೀತಿಯಲ್ಲೇ ಭಾರತ ಮತ್ತು ಪಾಕಿಸ್ಥಾನ ಶಾಂತಿ ಮಾತುಕತೆ ನಡೆಸಲು ಮುಂದಾಗಬೇಕು ಎಂದು ಪಾಕ್ ಪದಚ್ಯುತ ಪ್ರದಾನಿ ನವಾಜ್ ಷರೀಫ್ ಅವರ ಸಹೋದರ, ಪಾಕಿಸ್ಥಾನದ ಪ್ರಮುಖ ರಾಜಕೀಯ ನಾಯಕ ಶಹಬಾಜ್ ಷರೀಫ್ ಹೇಳಿದ್ದಾರೆ.
ಪರಸ್ಪರ ಅಣು ಯುದ್ಧದ ಅಂಚಿನಿಂದ ಈಚೆಗೆ ಬಂದು ಶಾಂತಿ ಮಾತುಕತೆ ನಡೆಸಲು ಉತ್ತರ ಕೊರಿಯ ಮತ್ತು ಅಮೆರಿಕಕ್ಕೆ ಸಾಧ್ಯವೆಂದಾದರೆ ಭಾರತ ಮತ್ತು ಪಾಕಿಸ್ಥಾನಕ್ಕೆ ಅದು ಏಕೆ ಸಾಧ್ಯವಾಗದು ಎಂದು ಶಹಬಾಜ್ ಷರೀಫ್ ಅವರು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.
ಪಾಕ್ ಮಾಧ್ಯಮಗಳು ಈ ಟ್ವೀಟನ್ನು ಶಹಬಾಜ್ ಅವರೇ ಮಾಡಿರುವುದಾಗಿ ಹೇಳಿವೆಯಾದರೂ ಇವುಗಳನ್ನು ಶರೀಫ್ ಅವರ ಸಿಬಂದಿಗಳು ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಏಕೆಂದರೆ ಸ್ವತಃ ಶಹಬಾಜ್ ಮಾಡುವ ಟ್ವೀಟ್‌ಗಳಲ್ಲಿ ‘SS’ ಎಂಬುದಾಗಿ ಅವರ ಸಹಿ ಇರುತ್ತವೆ. ಆದರೆ ಈ ಟ್ವೀಟ್‌ಗಳಲ್ಲಿ ಅಂತಹ ಸಹಿ ಇಲ್ಲದಿರುವುದರಿಂದ ಈ ಟ್ವೀಟ್‌ಗಳನ್ನು ಸ್ವತಃ ಶಹಬಾಜ್ ಅವರೇ ಮಾಡಿರಲಿಕ್ಕಿಲ್ಲ ಎಂದು ಹೇಳಲಾಗಿದೆ.
ಅದೇನಿದ್ದರೂ ಶಹಬಾಜ್ ಅವರ ಟ್ವೀಟ್‌ಗಳು ಭಾರತ ಮತ್ತು ಪಾಕಿಸ್ಥಾನ ನಡುವೆ ಶಾಂತಿ ಮಾತುಕತೆ ಏರ್ಪಡಬೇಕೆಂದು ಹೇಳುತ್ತವೆ; ಜತೆಗೆ ಕಾಶ್ಮೀರವನ್ನು ಅಕ್ರಮವಾಗಿ ತನ್ನ ವಶದಲ್ಲಿ ಇರಿಸಿಕೊಂಡಿರುವ ಭಾರತ, ಕಾಶ್ಮೀರಿಗಳ ಮೇಲೆ ದಬ್ಟಾಳಿಕೆ ನಡೆಸುತ್ತಿದೆ ಎಂದು ಆರೋಪಿಸುತ್ತದೆ.
ಆದರೆ ಸ್ವತಃ ಪಾಕಿಸ್ಥಾನದ ಅಕ್ರಮ ವಶದಲ್ಲಿರುವ ಪಿಓಕೆಯಲ್ಲಿ ಅದರ ಸೇನೆ ಅಲ್ಲಿನ ಜನರ ಮೇಲೆ ನಡೆಸುತ್ತಿರುವ ದಬ್ಟಾಳಿಕೆಯ ಬಗ್ಗೆ ಚಕಾರ ಎತ್ತುವುದಿಲ್ಲ; ಮಾತ್ರವಲ್ಲದೆ ಎಲ್‌ಓಸಿಯಲ್ಲಿ ಪಾಕ್ ಉಗ್ರರು ಮತ್ತು ಸೇನೆ ಜಮ್ಮು ಕಾಶ್ಮೀರದ ಅಮಾಯಕ ಜನರನ್ನು ಗುರಿ ಇರಿಸಿ ನಡೆಸುತ್ತಿರುವ ದಾಳಿಗಳ ಬಗ್ಗೆಯೂ ಸೊಲ್ಲೆತ್ತುವುದಿಲ್ಲ ಎನ್ನುವುದು ಸ್ಪಷ್ಟವಿದೆ.