ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಹಮ್ಮಿಕೊಂಡಿರುವ ನವಕರ್ನಾಟಕ ನಿರ್ಮಾಣ ಪರಿವರ್ತನ ಯಾತ್ರೆ ಜತೆ ಜತೆಗೆ ರಾಜ್ಯದಲ್ಲಿ ನವಶಕ್ತಿ ಸಮಾವೇಶ ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ ಮೂರು ಬೃಹತ್ ಸಮಾವೇಶ ಕೈಗೊಳ್ಳಲು ಬಿಜೆಪಿ ಕೋರ್ ಕಮಿಟಿ ಸಭೆ ತೀರ್ಮಾನಿಸಿದೆ.
ಇದಲ್ಲದೆ, ಪಕ್ಷ ಗೆಲ್ಲಲು ಕಷ್ಟವಿರುವ ಪ್ರದೇಶ ಗಳಲ್ಲಿ ಅನ್ಯ ಪಕ್ಷಗಳಿಂದ ಬರುವ ಮುಖಂಡರನ್ನು ಪಕ್ಷಕ್ಕೆ ಸೇರಿಸಿಕೊಂಡು ಗೆಲ್ಲುವ ಸಾಮರ್ಥ್ಯ ಗಳಿಸಲು ಕೂಡ ಸಭೆಯಲ್ಲಿ ನಿರ್ಧರಿಸಲಾಗಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್, ರಾಜ್ಯ ಚುನಾವಣಾ ಸಹ ಉಸ್ತುವಾರಿ ಪಿಯೂಷ್ ಗೋಯಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಶನಿವಾರ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಯಡಿಯೂರಪ್ಪ ನೇತೃತ್ವದಲ್ಲಿ ಈಗಾಗಲೇ ರಾಜ್ಯಾದ್ಯಂತ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪರಿವರ್ತನ ಯಾತ್ರೆ ನಡೆಯುತ್ತಿದ್ದು, ಈಗಾಗಲೇ ಆರು ಜಿಲ್ಲೆಗಳ 50 ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ನಡೆ ಯುತ್ತಿದೆ. ಇದಕ್ಕೆ ವ್ಯಕ್ತವಾಗುತ್ತಿರುವ ಜನ ಬೆಂಬಲ ಗಮನದಲ್ಲಿಟ್ಟು ಪಕ್ಷದ ವಿವಿಧ ಮೋರ್ಚಾಗಳಿಂದ ರಾಜ್ಯದ ವಿವಿಧ ಕಡೆ ನವಶಕ್ತಿ ಸಮಾವೇಶಗಳನ್ನು ನಡೆಸಬೇಕು. ರಾಜ್ಯದ ಪ್ರಮುಖರು ಚರ್ಚಿಸಿ ಸ್ಥಳ ಹಾಗೂ ದಿನಾಂಕ ನಿಗದಿಪಡಿಸಬೇಕೆಂದು ಸಭೆಯಲ್ಲಿ ನಿರ್ಧರಿಸಲಾಯಿತು.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಅನ್ಯ ಪಕ್ಷಗಳಿಂದ ಅನೇಕರು ಬಿಜೆಪಿ ಸೇರಲು ಮುಂದೆ ಬರುತ್ತಿದ್ದು, ಈ ಪೈಕಿ ಕೆಲವರು ಚುನಾವಣೆ ಟಿಕೆಟ್ ಬಯಸಿ ಸೇರುತ್ತಿದ್ದಾರೆ. ಇಂಥವರ ಬಗ್ಗೆ ಸ್ವಪಕ್ಷೀಯರಿಂದ ಆಕ್ಷೇಪ ವ್ಯಕ್ತ ವಾಗುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಅನ್ಯ ಪಕ್ಷಗಳವರ ಸೇರ್ಪಡೆ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಎಲ್ಲೆಲ್ಲಿ ಪಕ್ಷ ಗೆಲ್ಲುವ ಮಟ್ಟಕ್ಕೆ ಇಲ್ಲವೋ ಅಂತಹ ಕಡೆ ಅನ್ಯ ಪಕ್ಷದವರನ್ನು ಸೇರಿಸಿಕೊಂಡು ಅಲ್ಲಿ ಗೆಲ್ಲುವ ಸಾಮರ್ಥ್ಯಗಳಿಸಬೇಕೆಂದು ಸಭೆಯಲ್ಲಿದ್ದ ಮುರಳೀಧರ ರಾವ್ ಮತ್ತು ಪಿಯೂಷ್ ಗೋಯಲ್ ಅವರು ರಾಜ್ಯ ನಾಯಕರಿಗೆ ಸೂಚಿಸಿ ದ್ದಾರೆಂದು ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ 3 ಸಮಾವೇಶ
ಒಟ್ಟು 28 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿ ರುವ ಬೆಂಗಳೂರು ನಗರ ಜಿಲ್ಲೆಯಲ್ಲಿ (ಬಿಬಿಎಂಪಿ ಸೇರಿ) ಡಿ. 10, ಡಿ. 17 ಮತ್ತು 2018ರ ಜ. 7 ರಂದು ಮೂರು ಬೃಹತ್ ಸಮಾವೇಶಗಳನ್ನು ನಡೆಸಬೇಕು. ಇದಕ್ಕೆ ಕೇಂದ್ರ ಸಚಿವರಾದ ಅರುಣ್ ಜೇಟಿÉ, ಸುಷ್ಮಾ ಸ್ವರಾಜ್ ಮತ್ತಿತರರ ಹಿರಿಯ ನಾಯಕರನ್ನು ಕರೆಸುವ ಬಗ್ಗೆಯೂ ತೀರ್ಮಾನಿಸಲಾಯಿತು.