Advertisement

 ಬವಣೆ ನೀಗಿಸಿತು ನವಣೆ 

12:31 PM Nov 27, 2017 | |

 ಜಮೀನಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಮೆಕ್ಕ ಜೋಳದ ಬಿತ್ತನೆ ಮಾಡಬೇಕು ಎಂಬು ಮನಸ್ಸು ಓಬಣ್ಣ ರೆಡ್ಡಿಗೆ ಇತ್ತು. ಆದರೆ ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ಜಮೀನನ್ನು ಪಾಳು ಬಿಡುವುದು ಬೇಡ ಎಂದು ಯೋಚಿಸಿ, ಅರೆ ಮನಸ್ಸಿನಿಂದಲೇ ನವಣೆ ಬಿತ್ತನೆ ಮಾಡಿದರು. 

Advertisement

ಈ ಬಾರಿಯ ಮುಂಗಾರು ಹಲವು ರೈತರನ್ನು ದಂಗಾಗಿಸಿತ್ತು. ಆರಂಭದಲ್ಲಿ ಹನಿಸಿದ ಒಂದೆರಡು ಮಳೆ ಹುಟ್ಟಿಸಿದ ನಿರೀಕ್ಷೆಯಿಂದ ಮುಂದಿನ ದಿನಗಳು ಆಶಾದಾಯಕವಾಗಿರಬಹುದು ಎಂಬ ಭಾವನೆಯಿಂದ ಹಲವರು ಬೀಜ ಬಿತ್ತಿದ್ದರು. ಆದರೆ ಮಳೆ ಕೈ ಕೊಟ್ಟಿತ್ತು. ಬಿತ್ತಿದ್ದ ಬೀಜ ಒಣಗಿ ಹೋಗಿತ್ತು. ಅಲ್ಲಲ್ಲಿ ಮೊಳೆತ ಗಿಡಗಳು ಬಿರು ಬಿಸಿಲಿನ ತಾಪಕ್ಕೆ ಮುದುಡಿದ್ದವು. ಕಾಯ್ದು ನೋಡಿ ಮಳೆ ಬಂದರಷ್ಟೇ ಬೀಜ ಬಿತ್ತಿದರಾಯ್ತು ಎಂದು ಭೂಮಿಯನ್ನು ಖಾಲಿ ಬಿಟ್ಟವರೂ ಅನೇಕರಿದ್ದರು. ಬಂದಷ್ಟು ಬರಲಿ ಎಂದು ತಡವಾಗಿ ಬಿತ್ತನೆ ಮಾಡಿ, ನಿರೀಕ್ಷಿಸಿದಷ್ಟು ಇಳುವರಿ ಸಿಗದೇ ಕೈ ಸುಟ್ಟುಕೊಂಡವರೂ ಹಲವರಿದ್ದಾರೆ. ಆದರೆ ಇಲ್ಲೋರ್ವ ರೈತರು ಸಿರಿಧಾನ್ಯ ನವಣೆ ಬೆಳೆದು ಬಿದ್ದ ಕನಿಷ್ಠ ಮಳೆಯಲ್ಲಿಯೇ ಉತ್ತಮ ಇಳುವರಿ ಪಡೆದು ಬೀಗಿದ್ದಾರೆ.

ಭವಣೆ ನೀಗಿಸಿದ ಪರಿ
    ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ರಂಗಾಪುರ ಗ್ರಾಮದ ಬಾಬು ಓಬಣ್ಣ ರೆಡ್ಡಿ ಮಳೆ ಕೊರತೆಯಾದರೂ ಇತರ ರೈತರಂತೆ ಕಂಗಾಲಾಗಿರಲಿಲ್ಲ. ತಾಳ್ಮೆಯಿಂದಲೇ ವಾತಾವರಣದಲ್ಲಿ ಕಾಣಿಸುವ  ವೈಪರೀತ್ಯವನ್ನು  ಗಮನಿಸುತ್ತಿದ್ದರು. ಮಳೆ ಪ್ರಮಾಣವನ್ನು ಆಧರಿಸಿ ಆಧಾರಿತವಾಗಿ ಸೂಕ್ತವಾಗಬಲ್ಲ ಬೀಜ ಬಿತ್ತಿದರಾಯ್ತು ಎಂದುಕೊಂಡಿದ್ದರು. ಇವರದು ಮೂವತ್ತು ಎಕರೆ ಜಮೀನು. ಅದು ಮೆಕ್ಕೆಜೋಳ, ಶೇಂಗಾ ಬೆಳೆಯುತ್ತಿದ್ದ ಭೂಮಿ. ಈ ಬಾರಿಯೂ ಮೆಕ್ಕೆಜೋಳ ಬಿತ್ತಲೆಂದೇ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದರು. ಮೇ ತಿಂಗಳ ವೇಳೆಗೆ ಪ್ಲೋ ಹೊಡೆಸಿ ಜೂನ್‌ ವೇಳೆಗೆ ಒಂದೆರಡು ಮಳೆಯಾದಾಗ ಕಲ್ಟಿವೇಟರ್‌ ಹೊಡೆದು ಬೀಜ ಬಿತ್ತಲೆಂದು ಭೂಮಿ ಹಸನುಗೊಳಿಸಿದ್ದರು. ಭೂಮಿ ಸಿದ್ಧತೆಗಳು ಪೂರ್ತಿಗೊಂಡಿದ್ದಾಗ ಮಳೆರಾಯನ ಸುಳಿವೇ ಇರಲಿಲ್ಲ. ಬಿರು ಬಿಸಿಲು ಭೂಮಿಯಲ್ಲಿನ ತೇವವನ್ನು ಆರಿಸುವ ರೀತಿಯಲ್ಲಿ ಧಗಧಗಿಸುತ್ತಿತ್ತು. ಪರಿಸ್ಥಿತಿ ಹೀಗೇ ಮುಂದುವರಿದರೆ, ಈ ವರ್ಷದ ಕೃಷಿ ಕೈ ತಪ್ಪಿದಂತೆಯೇ ಎಂದುಕೊಂಡು ಸುಮ್ಮನಾಗಿದ್ದರು. “ಚಳಿಯ ತೇವದಲ್ಲಿಯೇ ಸಿರಿಧಾನ್ಯ ಬೆಳೆದು ನಿಲ್ಲುತ್ತದೆ. ಉತ್ತಮ ಇಳುವರಿಯನ್ನೇ ನೀಡುತ್ತದೆ’ ಎಂದು ಧರ್ಮಸ್ಥಳ ಸಂಸ್ಥೆ ನೀಡಿದ ಅಭಯಕ್ಕೆ ಆಗಿದ್ದಾಗಲಿ ಪ್ರಯತ್ನಿಸಿಯೇ ಬಿಡೋಣ ಎಂದು ಕಾರ್ಯ ಪ್ರವೃತ್ತರಾದರು.

ಬಿತ್ತನೆ ಹೇಗೆ?
    ಮೂವತ್ತು ಎಕರೆಯಲ್ಲಿಯೂ ಸಿರಿಧಾನ್ಯ ನವಣೆಯನ್ನು ಬಿತ್ತುವ ದೃಢ ನಿರ್ಧಾರ ಕೈಗೊಂಡ ಇವರು ನವಣೆ ಬೀಜಗಳನ್ನು ಖರೀದಿಸಿ ತಂದರು. ಸ್ಥಳೀಯವಾಗಿ “ಮುಬ್ಬು ನವಣೆ’ ಎಂದು ಕರೆಯಲ್ಪಡುವ ಜವಾರಿ ತಳಿಯ ನವಣೆ ಬಿತ್ತನೆ ಮಾಡಿದ್ದಾರೆ. ಟ್ರ್ಯಾಕ್ಟರ್‌ ಕೂರಿಗೆಯಿಂದ ಬಿತ್ತನೆ. ಸಾಲಿನ ನಡುವೆ ಅರ್ಧ ಅಡಿ ಅಂತರ. ಬಿತ್ತನೆಯ ನಂತರ ಮಳೆ ಸಂಪೂರ್ಣ ಕೈ ಕೊಟ್ಟಿತ್ತು. ಒಂದು ವಾರದ ನಂತರ ಒಂದೂವರೆ ಗಂಟೆ ಸುರಿದ ಒಂದು ಮಳೆ ಆಸರೆಯಾಗಿ ಪರಿಣಮಿಸಿತ್ತು. ವಾರದ ನಂತರ ಸಣ್ಣದಾಗಿ ಗಿಡಗಳು ಮೇಲೇಳತೊಡಗಿದವು. ನಡು ನಡುವೆ, ಒಂದೆರಡು ಬಾರಿ ಸಣ್ಣ ಮಳೆಯಾಯಿತು. ಇಪ್ಪತ್ತನೆಯ ದಿನಕ್ಕೆ ಎಡೆಕುಂಟೆ ಹೊಡೆದು ಕಳೆ ನಿಯಂತ್ರಿಸಿದರು. ಯಾವುದೇ ರಸಗೊಬ್ಬರ ಬಳಸಲಿಲ್ಲ. ಕೊಟ್ಟಿಗೆ ಗೊಬ್ಬರವನ್ನೂ ಉಣಿಸಲಿಲ್ಲ. ಆದರೂ, ಕೇವಲ ಭೂಮಿಯಲ್ಲಿನ ತೇವವನ್ನೇ ಹೀರಿಕೊಂಡು ನವಣೆ ಗಿಡಗಳು ಬೆಳೆಯತೊಡಗಿದವು.

    ಒಮ್ಮೆ ಮಾತ್ರ ಸಾಲಿನಲ್ಲಿ ಎಡೆಕುಂಟೆ ಪ್ರಯೋಗ ಮಾಡಿದರು. ಕೈ ಕಸರತ್ತಿನ ಮೂಲಕ ಗಿಡಗಳ ಮಧ್ಯೆ ಇರುವ ಕಳೆ ನಿಯಂತ್ರಿಸಿದರು. ಆನಂತರದಲ್ಲಿ  ಗಿಡಗಳು ಹುಲುಸಾಗಿ ಮೇಲೆದ್ದು ಮೂರು ಅಡಿಗಳಷ್ಟು ಎತ್ತರ ಬೆಳೆದು ತೆನೆ ಹೊತ್ತು ನಿಂತಿದ್ದವು. ನವೆಂಬರ್‌ ಎರಡನೆಯ ವಾರ ಕಟಾವು ಮುಗಿಸಿದ್ದಾರೆ. ಎಕರೆಗೆ ನಾಲ್ಕು ಕ್ವಿಂಟಾಲ್‌ ಇಳುವರಿ ಸಿಕ್ಕಿದೆ.

Advertisement

    ರಸಗೊಬ್ಬರ ಸೋಕಿಸಿಲ್ಲ. ಕಾಂಪೋಸ್ಟ್‌ ಗೊಬ್ಬರ ಬಳಸಿಲ್ಲ. ಸುತ್ತಮುತ್ತಲಿನ ಜಮೀನುಗಳಲ್ಲಿ ಸೈನಿಕ ಹುಳುಗಳ ಬಾಧೆಯಿಂದ ಇಳುವರಿಯಲ್ಲಿ ಕುಸಿತ ಕಂಡುಬಂದಿದೆ. ಆದರೆ ಇವರ ಹೊಲದಲ್ಲಿನ ಬೆಳೆ ಹುಳುಗಳ ಬಾಧೆಗೆ ಒಳಗಾಗಿಲ್ಲ. ಮೂವತ್ತು ಎಕರೆಯ ಉಳುಮೆ ಹಾಗೂ ಬಿತ್ತನೆಗೆ 50,000 ರೂಪಾಯಿ ಖರ್ಚಾಗಿದೆ. ಎಕರೆಯಿಂದ ನಾಲ್ಕು ಕ್ವಿಂಟಾಲ್‌ ಇಳುವರಿ ದೊರೆತಂತಾಗಿದೆ. ಒಟ್ಟು 120 ಕ್ವಿಂಟಾಲ್‌ ಇಳುವರಿ ಪಡೆದಿದ್ದಾರೆ. ಕ್ವಿಂಟಾಲ್‌ ನವಣೆಗೆ 1200 ರೂ ದರವಿದೆ. ನೀರಿನ ಕೊರತೆಯ ನಡುವೆಯೇ ವೆಚ್ಚ ಮಾಡಿದ ಮೊತ್ತ ಕಳೆದು ಹೆಚ್ಚಿನ ಲಾಭ ಪಡೆದು ಬೀಗಿದ್ದಾರೆ.

ಕೋಡಕಣಿ ಜೈವಂತ ಪಟಗಾರ

Advertisement

Udayavani is now on Telegram. Click here to join our channel and stay updated with the latest news.

Next