ಸೃಷ್ಟಿಯ ಅಸ್ತಿತ್ವವೇ ಇಲ್ಲದಿರುವಾಗ ಎಲ್ಲೆಡೆ ಅಂಧಕಾರವೇ ಪಸರಿಸಿತ್ತು. ಆಗ ತನ್ನ “ಈಶತ್’ ಹಾಸ್ಯದಿಂದ ಬ್ರಹ್ಮಾಂಡವನ್ನು ಸೃಷ್ಟಿಸಿದವಳೇ ಕೂಷ್ಮಾಂಡ ದೇವಿ. ಆದ್ದರಿಂದ ಇವಳೇ ಸೃಷ್ಟಿಯ ಆದಿ- ಸ್ವರೂಪ ಶಕ್ತಿಯಾಗಿದ್ದಾಳೆ. ಈಕೆಯು ಸೂರ್ಯನ ಸ್ಥಾನದಲ್ಲಿ ನಿಲ್ಲುವ ಕಾರಣದಿಂದಾಗಿ ಭೂಮಿಯ ಮೇಲಿರುವ ಅಂಧಕಾರವನ್ನೆಲ್ಲಾ ನಿವಾರಣೆ ಮಾಡುತ್ತಾಳೆ ಎನ್ನಲಾಗುತ್ತದೆ.
ಸದಾ ಮಂದಸ್ಮಿತೆಯಾಗಿರುವ ದುರ್ಗಾದೇವಿಯ ನಾಲ್ಕನೇ ಅವತಾರವೇ ಕೂಷ್ಮಾಂಡ. ಈಕೆಯ ಆರಾಧನೆಯಿಂದ ಮನದ ಕ್ಲೇಷ ಕಳೆದು ಜ್ಞಾನದ ಬೆಳಕು ಮೂಡುತ್ತದೆ. ಜ್ಞಾನದ ಹೊನಲು ಸಂತಸಕ್ಕೆ ಕಾರಣವಾಗುತ್ತದೆ. ಸಂಸ್ಕೃತದಲ್ಲಿ ಕೂಷ್ಮಾಂಡವೆಂದರೆ ಬೂದುಗುಂಬಳಕಾಯಿ ಎಂದರ್ಥ. ಆಯುರ್ವೇದ ಶಾಸ್ತ್ರದ ಪ್ರಕಾರ ಬೂದುಗುಂಬಳಕಾಯಿಯು ಜ್ಞಾನವರ್ಧಕ, ತೇಜೋ ವರ್ಧಕ. ಸಕಲ ತಾಪವನ್ನು ನಿವಾರಣೆ ಮಾಡಿ ದೇಹಕ್ಕೆ ತಂಪೆರೆವ ಶಾಕಾಹಾರ.
ಕೂಷ್ಮಾಂಡ ಪದದಲ್ಲಿ “ಕು’ ಎಂದರೆ ಚಿಕ್ಕದು, “ಉಷ್ಮ ‘ಎಂದರೆ ಶಕ್ತಿ ಮತ್ತು ಅಂಡ ಎಂದರೆ ಭ್ರೂಣ ಎಂದರ್ಥ. ಸರಳವಾಗಿ ಹೇಳುವುದಾದರೆ ಇಡೀ ಬ್ರಹ್ಮಾಂಡವೆನ್ನುವ ಚೈತನ್ಯಶಕ್ತಿಯನ್ನೇ ತನ್ನಲ್ಲಿ ಇಟ್ಟುಕೊಂಡವಳು ಎಂದರ್ಥ.
ಸೌರವ್ಯೂಹದ ಗ್ರಹಳ ಚಲನೆಯನ್ನು ನಿಯಂತ್ರಿಸುತ್ತಾಳೆ. ಆಕೆ ಇರುವಲ್ಲಿ ಬೆಳಕು ಹಾಗೂ ಜ್ಞಾನವಿದೆ. ಕೂಷ್ಮಾಂಡ ದೇವಿಯು ಸೂರ್ಯನಿಗೆ ಅಧಿಪತಿಯಾಗಿರುವ ಕಾರಣ ಆಕೆಯನ್ನು ಪೂಜಿಸುವುದರಿಂದ ಜಾತಕದಲ್ಲಿ ಸೂರ್ಯನಿಂದಾಗುವ ಕೆಡುಕನ್ನು ನಿವಾರಿಸಬಹುದು. ಜೊತೆಗೆ ಎಲ್ಲಾ ರೀತಿಯ ಸಂಕಷ್ಟಗಳೂ ನಿವಾರಣೆಯಾಗುವವು.
ಕೂಷ್ಮಾಂಡ ದೇವಿಯನ್ನು ಅರ್ಚಿಸಲು ಶ್ರೇಷ್ಠವಾದದ್ದು, ಕೆಂಪು ಬಣ್ಣದ ಹೂಗಳು. ದೇವಿಗೆ ಷೋಡಶೋಪಚಾರ ಪೂಜೆ ಅಂದರೆ, 16 ವಿಧದ ಪೂಜೆ, ಆರತಿಯೊಂದಿಗೆ ಪೂಜೆ ಮಾಡಲಾಗುತ್ತದೆ.
(ಶ್ರೀ ಲಕ್ಷ್ಮೀ ಶ್ರೀನಿವಾಸ ಗುರುಗಳು, ಶಿರ್ಡಿ ಸಾಯಿ ಭಿಕ್ಷಾಕೇಂದ್ರ ಮುಖ್ಯಸ್ಥರು, ಬೆಂಗಳೂರು )
ದೇವಿ: ಕೂಷ್ಮಾಂಡ
ಬಣ್ಣ : ಕಂದು
ದಿನಾಂಕ : 29/09/2022, ಗುರುವಾರ