Advertisement

ನವೀನ್‌ ಜಾಮೀನು ವಿಚಾರಣೆ 26ಕ್ಕೆ ಮುಂದೂಡಿಕೆ

11:44 AM Jun 22, 2018 | |

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿ ನವೀನ್‌ ಕುಮಾರ್‌ ಅಲಿಯಾಸ್‌ ಹೊಟ್ಟೆ ಮಂಜನ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸೆಷನ್ಸ್‌ ನ್ಯಾಯಾಲಯ ಜೂ.26ಕ್ಕೆ ವಿಚಾರಣೆ ಮುಂದೂಡಿದೆ.

Advertisement

ಆರಂಭದಲ್ಲಿ ಎಸ್‌ಐಟಿ ಪರ ವಕೀಲರು ವಾದ ಮಂಡಿಸಿ, ಗೌರಿ ಲಂಕೇಶ್‌ ಹತ್ಯೆ ಪ್ರಕರಣ ಗಂಭೀರವಾದದ್ದು. ಆರೋಪಿಗೆ ಜಾಮೀನು ನೀಡಿದರೆ ಇನ್ನೂ ಬಂಧನವಾಗಬೇಕಿರುವ ಹಲವು ಆರೋಪಿಗಳು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ಜತೆಗೆ ಇದೇ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಾಲ್ವರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ತನಿಖೆ ಕೂಡ ಮುಕ್ತಾಯವಾಗಿಲ್ಲ. ಈ ಹಂತದಲ್ಲಿ ಜಾಮೀನು ನೀಡುವುದು ಸೂಕ್ತವಲ್ಲ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆರೋಪಿ ಪರ ವಕೀಲ ವೇದಮೂರ್ತಿ, ಕೇವಲ ಮೂರು ಸಾಕ್ಷಿ ಹೇಳಿಕೆಗಳ ಆಧಾರದ ಮೇಲೆ ಎಸ್‌ಐಟಿ ಅಧಿಕಾರಿಗಳು ನವೀನ್‌ ಕುಮಾರ್‌ನನ್ನು ಆರೋಪಿಯನ್ನಾಗಿ ಮಾಡಿದ್ದಾರೆ. ಈ ಮೊದಲು ಮದ್ದೂರಿನ ತೋಟದ ಮನೆಯಲ್ಲಿ ಹಿಂದಿ ಮತ್ತು ಮರಾಠಿ ಮಾತನಾಡುವ ಇಬ್ಬರು ಸೇರಿ ಈಗಾಗಲೇ ಬಂಧನವಾಗಿರುವ ನಾಲ್ವರು ಆರೋಪಿಗಳನ್ನು ನೋಡಿದ್ದಾಗಿ ಶ್ರೀರಂಗಪಟ್ಟಣದ ಅನಿಲ್‌, ಗಿರೀಶ್‌ ಮತ್ತು ಅಭಿಷೇಕ್‌ ಹೇಳಿಕೆ ನೀಡಿದ್ದರು.

ಅಲ್ಲದೆ, ಈ ಸ್ಥಳದಲ್ಲಿದ್ದ ವ್ಯಕ್ತಿಗಳ ಮುಖ ಚಹರೆ ಮತ್ತು ಎತ್ತರವನ್ನು ಎಸ್‌ಐಟಿ ಎದುರು ವಿವರಿಸಿದ್ದರು. ಈ ಹೇಳಿಕೆಗಳನ್ನೇ ಆಧಾರವಾಗಿಟ್ಟುಕೊಂಡು ನವೀನ್‌ನನ್ನು ಆರೋಪಿ ಎಂದು ಹೇಳಿರುವ ತನಿಖಾ ತಂಡ ಈವರೆಗೂ ಗುರುತು ಪತ್ತೆ ಪರೇಡ್‌ ನಡೆಸಿಲ್ಲ.

ಇನ್ನು ಪ್ರಕರಣದಲ್ಲಿ ಮಹಾರಾಷ್ಟ್ರದ ಅಮೋಲ್‌ ಕಾಳೆ, ಅಮಿತ್‌ ದೇಗ್ವೇಕರ್‌ ಮತ್ತು ವಿಜಯಪುರದ ಮನೋಹರ್‌ ಯವಡೆ ಹಾಗೂ ಶಿಕಾರಿಪುರದ ಪ್ರವೀಣ್‌ನನ್ನು ಬಂಧಿಸಿ 15 ದಿನಗಳ ಕಾಲ ತಮ್ಮ ವಶಕ್ಕೆ ಪಡೆದುಕೊಂಡಿತ್ತು. ಆದರೆ, ಈ ಮೂರು ಸಾಕ್ಷಿಗಳಿಂದ ಆರೋಪಿಗಳ ಗುರುತು ಪತ್ತೆ ಪೆರೇಡ್‌ ನಡೆಸಿಲ್ಲ. ಹೀಗಾಗಿ ಕೇವಲ ಹೇಳಿಕೆಯನ್ನಾಧರಿಸಿ ಆರೋಪಿಯನ್ನಾಗಿಸುವುದು ಸಮಂಜಸವಲ್ಲ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

Advertisement

ಅಲ್ಲದೆ, ಆರೋಪ ಪಟ್ಟಿಯಲ್ಲಿ ನವೀನ್‌ ಕುಮಾರ್‌ ಮಾಡಿದ ಅಪರಾಧ ಏನು? ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖೀಸಿಲ್ಲ. ಏಳು ವರ್ಷಗಳ ಹಿಂದೆ ಬುಲೆಟ್‌ ಮಾರಾಟಕ್ಕೆ ಬಂದಿದ್ದ ಎಂದು ಹೇಳಿದ್ದಾರೆ. ಮತ್ತೂಂದೆಡೆ ಬುಲೆಟ್‌ ಖರೀದಿಗೆ ಬಂದಿದ್ದ ಎಂದು ತಿಳಿಸಿದ್ದಾರೆ. ಆತನ ಕೃತ್ಯ ಏನು ಎಂಬ ಬಗ್ಗೆ ತನಿಖಾಕಾರಿಗಳಿಗೇ ಖಚಿತ ಮಾಹಿತಿ ಇಲ್ಲ.

ಇನ್ನು ಪ್ರೊ.ಭಗವಾನ್‌ ಕೊಲೆ ಸಂಚಿನಲ್ಲಿ ಈ ಮೊದಲು ನವೀನ್‌ನನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಈಗಾಗಲೇ ನ್ಯಾಯಾಲಯ ನವೀನ್‌ಗೆ ಜಾಮೀನು ಮಂಜೂರು ಮಾಡಿದೆ. ಹೀಗಾಗಿ ಯಾವ ನಿರ್ದಿಷ್ಟ ಆರೋಪಗಳಿಲ್ಲದಿರುವ ಗೌರಿ ಹತ್ಯೆ ಪ್ರಕರಣದಲ್ಲೂ ಜಾಮೀನು ನೀಡಬೇಕು ಎಂದು ವೇದಮೂರ್ತಿ ವಾದ ಮಂಡಿಸಿದರು. ಕೊನೆಗೆ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ಜೂ.26ಕ್ಕೆ ಮುಂದೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next