ಒಡಿಶಾ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಹಿನ್ನಡೆ ಅನುಭವಿಸಿದ ಜೊತೆಗೆ ಒಡಿಶಾ ಮುಖ್ಯಮಂತ್ರಿ ಮತ್ತು ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್ ಅವರ 24 ವರ್ಷಗಳ ಆಳ್ವಿಕೆ ಕೊನೆಗೊಂಡಿದ್ದು ಅದರಂತೆ ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಇಂದು ಭುವನೇಶ್ವರದಲ್ಲಿರುವ ರಾಜಭವನಕ್ಕೆ ತೆರಳಿದ ಪಾಟ್ನಾಯಕ್ ರಾಜ್ಯಪಾಲರಾದ ರಘುಬರ್ ದಾಸ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.
ಇದರೊಂದಿಗೆ ಒಡಿಶಾದಲ್ಲಿ ಆಡಳಿತವಿರೋಧಿ ಅಲೆಗೆ ಸಿಕ್ಕ ಆಡಳಿತರೂಢ ಬಿಜೆಡಿ ಅಧಿಕಾರ ಕಳೆದುಕೊಂಡಿದೆ. ಬಿಜೆಪಿ ಸರಳ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
1997 ರಿಂದ, ಬಿಜು ಜನತಾ ದಳವು ಒಡಿಶಾದಲ್ಲಿ ತನ್ನ ಆಳ್ವಿಕೆಯನ್ನು ಆರಂಭಿಸಿತ್ತು ಅಂದಿನಿಂದ ಇಂದಿನವರೆಗೂ ಬಿಜೆಡಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು ಆದರೆ ಆಡಳಿತ ವಿರೋಧಿ ಅಲೆಗೆ ಸಿಕ್ಕಿ ತನ್ನ ಅಧಿಕಾರವನ್ನು ಕಳೆದುಕೊಂಡಿದೆ. 147 ಸ್ಥಾನಗಳ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ 80 ಸ್ಥಾನಗಳನ್ನು ಪಡೆದು ಸರಳ ಬಹುಮತವನ್ನು ಪಡೆದುಕೊಂಡಿದೆ, ಬಿಜೆಡಿ ಕೇವಲ 49 ಸ್ಥಾನಗಳನ್ನು ಪಡೆಯುವಲ್ಲಿ ಸಫಲವಾಗಿದೆ, ನಂತರ ಕಾಂಗ್ರೆಸ್ 18 ಸ್ಥಾನಗಳನ್ನು ಗಳಿಸಿತು.