ನವಲಗುಂದ : ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ನವಲಗುಂದ ತಾಲೂಕಿನ ಖನ್ನೂರ ಗ್ರಾಮದ ಬಳಿ ಸೇತುವೆಯೊಂದು ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ವೇಳೆ ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಚನ್ನಬಸಪ್ಪ ದೇವಣ್ಣವರ (25) ಎಂಬಾತ ಮರದ ಸಹಾಯವನ್ನು ಪಡೆದುಕೊಂಡಿದ್ದ ಆತನನ್ನು ಎನ್.ಡಿ.ಆರ್.ಎಫ್, ಅಗ್ನಿಶಾಮಕ ದಳ ಹಾಗೂ ಪೋಲಿಸ್ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ.
ಸೋಮವಾರ ರಾತ್ರಿ ಸುರಿದ ಮಳೆಯಿಂದ ಅಪಾರ ಪ್ರಮಾಣ ನೀರು ತಾಲೂಕಿನ ಖನ್ನೂರ ಗ್ರಾಮದಲ್ಲಿರುವ ಹಂದಿಗನಹಳ್ಳದ ತುಂಬಿ ಹರಿದು ಗ್ರಾಮಕ್ಕೂ ಸಹ ವ್ಯಾಪಿಸಿದ್ದು ಮನೆಯಲ್ಲಿ ಸಿಲುಕಿಗೊಂಡಿದ್ದರು, ರಾತ್ರಿ ಸುದ್ದಿ ತಿಳಿದ ತಕ್ಷಣ ತಹಶೀಲ್ದಾರ ಅನೀಲ ಬಡಿಗೇರ ಅವರು ಸ್ಥಳಕ್ಕೆ ಆಗಮಿಸಿ ಮಂಜುನಾಥ ನಾಗಪ್ಪ ತಳವಾರ, ಹನುಮಂತ ನಾಗಪ್ಪ ತಳವಾರ, ನಾಗಪ್ಪ ಮೋಟಪ್ಪ ತಳವಾರ ಇವರನ್ನು ಬೆಳಗಿನ ಜಾವ ಎನ್.ಡಿ.ಆರ್.ಎಫ್ ತಂಡ ಹಾಗು ಪೋಲಿಸ್ ಸಿಬ್ಬಂದಿಗಳ ಸಹಾಯದಿಂದ ಎಲ್ಲರನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ತರಲಾಯಿತು.
ಅಣ್ಣಿಗೇರಿ ತಾಲೂಕಿನ ಬಸಾಪೂರ ಗ್ರಾಮದಲ್ಲಿ ಹಳ್ಳದ ಪ್ರವಾಹದಿಂದ ಸಾರ್ವಜನಿಕರು ರಾತ್ರಿ ನಿದ್ದೆ ಮಾಡದೆ ಮನೆಯೊಳಗೆ ಬಂದ ನೀರನ್ನು ಹೊರಗೆ ಹಾಕುವ ಕೆಲಸದಲ್ಲಿ ತೊಡಗಿದ್ದರು. ಬಸಾಪೂರ ಗ್ರಾಮ ಹಾಗೂ ಹೊಸ ಗ್ರಾಮ ಸೇರಿದಂತೆ ಹಳ್ಳದ ದಡದಲ್ಲಿರುವ ಮನೆಯೊಳಗೆ ಅಗಸನಹಳ್ಳದ ನೀರು ಆವರಿಸಿದೆ. ನವಲಗುಂದ ಅಣ್ಣಿಗೇರಿ ಮಾರ್ಗದ ಮಧ್ಯ ಬಸಾಪೂರ ಹತ್ತಿರ ಇರುವಂತಹ ಸೇತುವೆ ಹತ್ತಿರ ಲಾರಿಗಳು ಸೇತುವೆಯ ರಸ್ತೆಯಲ್ಲಿ ಸಿಲುಕಿ ರಸ್ತೆ ಸಂಚಾರ ಬಂದ್ ಆಗಿದೆ.
ತಾಲೂಕಿನ ರೋಣ ರಸ್ತೆ, ಅಣ್ಣಿಗೇರಿ ರಸ್ತೆ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಸಂಚಾರ ಬಂದ್ ಆಗಿದ್ದು ಇನ್ನು ಮಳೆ ಹಾಗೂ ಹಳ್ಳದ ಪ್ರವಾಹದಿಂದ ಅಪಾರ ಪ್ರಮಾಣದ ಬೆಳೆಗಳು ಹಾನಿಯಾಗಿದೆ. ರೈತರು, ಸಾರ್ವಜನಿಕರು ಪಟ್ಟಣಕ್ಕೆ ಸಂಚರಿಸಲು ತೊಂದರೆ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ : ಪ್ರಮುಖ ಪಂದ್ಯಕ್ಕೂ ಮೊದಲು ಭಾರತ ತಂಡವನ್ನು ಹಾಡಿ ಹೊಗಳಿದ ಲಂಕಾ ನಾಯಕ