ಕಾರ್ಕಳ: ಮುಡಾರು ಗ್ರಾಮದ 7 ಅಂಗನವಾಡಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಬಜಗೋಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ, ನ್ಯಾಯವಾದಿಗಳ ಸಂಘ ಕಾರ್ಕಳ ಹಾಗೂ ಸ್ತ್ರೀಶಕ್ತಿ ಸಂಘಗಳ ಸಮೂಹದಲ್ಲಿ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹವನ್ನು ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಇತ್ತೀಚೆಗೆ ಆಚರಿಸಲಾಯಿತು.
ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಯನಿರ್ವಾಹಕ ಸದಸ್ಯ ಕಾರ್ಯದರ್ಶಿ ಹಾಗೂ ಸಹಾಯಕ ಸರಕಾರಿ ಅಭಿಯೋಜಕಿ ಶೋಭಾ ಎಂ. ನಾಯ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಸೇವಿಸುವ ಆಹಾರದ ಗುಣಮಟ್ಟವನ್ನು ನೋಡಿಕೊಂಡು ಹಾಗೂ ಮನೆಯಲ್ಲಿ ತಯಾರಿಸಿದ ಆಹಾರವನ್ನೇ ಹೆಚ್ಚು ಸೇವಿಸುವಂತೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ| ಕೃಷ್ಣಾನಂದ, ಪೌಷ್ಟಿಕಾಹಾರದ ಸ್ವತ್ಛತೆಯನ್ನು ಕಾಪಾಡುವಂತೆ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ| ಗಿರೀಶ್ ಗೌಡ, ಶಿಶುವಿನ ಆರೋಗ್ಯಕ್ಕೆ ನೀಡಬೇಕಾದ ಪೌಷ್ಟಿಕಾಹಾರ, ಗರ್ಭಿಣಿ, ಬಾಣಂತಿ, ಕಿಶೋರಿಯರು ಸೇವಿಸಬೇಕಾದ ಆಹಾರ ಹಾಗೂ ವಹಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ವಿಚಾರಕಿ ರಾಜೇಶ್ವರಿ ಎಂ., ವಿವಿಧ ಮಾಹಿತಿ ನೀಡಿದರು. ಕಾರ್ಕಳ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಪ್ತಾಹದಲ್ಲಿ ಸುಮಾರು 63 ಬಗೆಯ ಪೌಷ್ಟಿಕ ಆಹಾರಗಳನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಸಹಾಯಕ ಅಭಿಯೋಜಕ ಜಗದೀಶ್ ಕೆ. ಚಾಲಿ, ಜನಾರ್ದನ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಪದ್ಮಾವತಿ ಕಾರ್ಯಕ್ರಮ ನಿರೂಪಿಸಿದರು. ಆರೋಗ್ಯ ಇಲಾಖೆಯ ಹಿರಿಯ ಸಹಾಯಕ ಶಶಿಧರ ವಂದಿಸಿದರು.