Advertisement

ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹ

06:05 AM Sep 03, 2017 | |

ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹವನ್ನು 1999ರಿಂದೀಚೆಗೆ ಪ್ರತಿವರ್ಷ ಆಚರಿಸಲಾಗುತ್ತಿದೆ. ಈ ವರ್ಷ ಸೆಪ್ಟಂಬರ್‌ 1ರಿಂದ 7ರ ವರೆಗೆ ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಶಿಶುಗಳಿಗೆ ಆರಂಭದಿಂದಲೇ ಯುಕ್ತವಾದ ಆಹಾರವನ್ನು ಉಣ್ಣಿಸುವ ಅತ್ಯಂತ ನಿರ್ಣಾಯಕವಾದ ವಿಚಾರದ ಬಗ್ಗೆ ಅರಿವು ಮೂಡಿಸುವ ಉದ್ದೇಶ ಇದರ ಹಿಂದೆ ಇದೆ. 

Advertisement

ಜಾಗತಿಕ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ ಶೈಶವದಲ್ಲಿ ಸಮರ್ಪಕವಾದ ಪೌಷ್ಟಿಕಾಂಶ ಯುಕ್ತ ಆಹಾರವನ್ನು ಸೇವಿಸುವುದು ಜೀವಮಾನಪರ್ಯಂತ ಆರೋಗ್ಯ ಮತ್ತು ಸುಖೀಜೀವನಕ್ಕೆ ಅತ್ಯಂತ ಆವಶ್ಯಕ. ಶಿಶುಗಳು ಸರಿಯಾದ ಬೆಳವಣಿಗೆ, ಅಭಿವೃದ್ಧಿ ಮತ್ತು ಆರೋಗ್ಯವನ್ನು ಪಡೆಯಬೇಕಾದರೆ ಅವರಿಗೆ ಮೊದಲ ಆರು ತಿಂಗಳ ಅವಧಿಯಲ್ಲಿ ಸಂಪೂರ್ಣವಾಗಿ ಎದೆಹಾಲು ಉಣ್ಣಿಸಬೇಕು.

ಅಭಿವೃದ್ಧಿಶೀಲ ದೇಶಗಳಲ್ಲಿ ಜನರು ಪೌಷ್ಟಿಕಾಂಶಗಳ ಕೊರತೆ ಮತ್ತು ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಗಳು ಎಂಬ ಅವಳಿ ಸಮಸ್ಯೆಗಳಿಗೆ ತುತ್ತಾಗಿದ್ದಾರೆ. ಇಂತಹ ಜನಸಮುದಾಯಗಳಲ್ಲಿರುವ ಅನೇಕ ಕುಟುಂಬಗಳಲ್ಲಿ ಪೌಷ್ಟಿಕಾಂಶ ಹೀನತೆ ಮತ್ತು ಬೆಳವಣಿಗೆ ಕುಂಠಿತಗೊಂಡಿರುವ (ವಿಶೇಷವಾಗಿ ಮಕ್ಕಳು ಮತ್ತು ಎಳೆ ಹರೆಯದ ಸ್ತ್ರೀಯರು) ಸದಸ್ಯರಿರುತ್ತಾರೆ. ಇದೇ ಕುಟುಂಬದ ಇತರ ಸದಸ್ಯರಲ್ಲಿ ಬೊಜ್ಜು, ಮಧುಮೇಹದಿಂದ ಬಳಲುತ್ತಿರುವವರು, ಅಧಿಕ ರಕ್ತದೊತ್ತಡವುಳ್ಳವರು ಹಾಗೂ ಹೃದ್ರೋಗ ಅಥವಾ ಕ್ಯಾನ್ಸರ್‌ಗೆ ತುತ್ತಾಗಿರುವವರು ಇರುತ್ತಾರೆ. 

ಇತ್ತೀಚೆಗಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್ಎಚ್‌ಎಸ್‌)ಯ ಮಾಹಿತಿಗಳ ಪ್ರಕಾರ, ಪ್ರೌಢರಲ್ಲಿ ಬೊಜ್ಜಿನ ಸಮಸ್ಯೆಯು ಪೌಷ್ಟಿಕಾಂಶ ಹೀನತೆಯಷ್ಟೇ ಕಳವಳಕಾರಿಯಾದ ಸಮಸ್ಯೆಯಾಗಿ ದೇಶವನ್ನು ಕಾಡುತ್ತಿದೆ. 2015-16ರಲ್ಲಿ ದೇಶದ ಆರು ಲಕ್ಷ ಕುಟುಂಬಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ದೇಶದ ಕಡುಬಡವರಿರುವ ಭಾಗಗಳಲ್ಲಿ ಪೌಷ್ಟಿಕಾಂಶಗಳ ಕೊರತೆಯು ಗರಿಷ್ಠ ಪ್ರಮಾಣದಲ್ಲಿರುವಂತೆಯೇ ಇನ್ನೊಂದೆಡೆ, ಸಿರಿವಂತ ಸಮುದಾಯಗಳಲ್ಲಿ ಬೊಜ್ಜಿನ ಸಮಸ್ಯೆಯು ಒಂದು ಸಾಂಕ್ರಾಮಿಕ ರೋಗದ ಸ್ಥಿತಿಯನ್ನು ತಲುಪಿದೆ. 

ಸ್ತನ್ಯಪಾನ
ಶಿಶುವಿನ ಪೌಷ್ಟಿಕಾಂಶ ಮತ್ತು ಮಾನಸಿಕ ಅಗತ್ಯಗಳನ್ನು ಪೂರೈಸಿ ಸಂತೃಪ್ತಿಗೊಳಿಸಲು ಸ್ತನ್ಯಪಾನವು ಅತ್ಯಂತ ಶ್ರೇಷ್ಠ ಮತ್ತು ಸೂಕ್ತವಾದ ಮಾರ್ಗವಾಗಿದೆ. ಶಿಶುವಿನ ಬೆಳವಣಿಗೆ, ಅಭಿವೃದ್ಧಿಗೆ ಅಗತ್ಯವಾದ ಎಲ್ಲ ಪೌಷ್ಟಿಕಾಂಶಗಳನ್ನು ತಾಯಿಯ ಎದೆಹಾಲು (ಸ್ತನ್ಯ) ಸರಿಯಾದ ಪ್ರಮಾಣಗಳಲ್ಲಿ ಒಳಗೊಂಡಿರುತ್ತದೆ. ಇನ್ನಿತರ ಯಾವುದೇ ಹಾಲುಗಳಲ್ಲಿ ಇಲ್ಲದ ಸೋಂಕು ನಿರೋಧಕ ಗುಣಗಳು ತಾಯಿಯ ಎದೆಹಾಲಿನಲ್ಲಿ ತಾನೇತಾನಾಗಿ ಬೆರೆತಿರುತ್ತವೆ. 

Advertisement

ಎದೆಹಾಲೂಡುವಿಕೆಯನ್ನು ಬೇಗನೆ ಆರಂಭಿಸುವುದು ಸ್ತನಗಳಲ್ಲಿ ಹಾಲು ಉತ್ಪತ್ತಿಯಾಗಲು ಹಾಗೂ ಶಿಶುವಿಗೆ ಪ್ರಥಮ ಸ್ತನ್ಯವನ್ನು ಒದಗಿಸುವುದಕ್ಕೆ ಅತ್ಯಂತ ಮುಖ್ಯವಾದದ್ದು. ಮೊದಲ ಸ್ತನ್ಯವನ್ನು ಶಿಶು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗನೆ, ಜನಿಸಿದ ಅರ್ಧ ತಾಸಿನ ಒಳಗೆ ಪಡೆಯುವುದು ಅಗತ್ಯ. 
ಕೊಲೊಸ್ಟ್ರಮ್‌ ಅಥವಾ ಪ್ರಥಮ ಸ್ತನ್ಯ ಎಂದು ಕರೆಯಲ್ಪಡುವ, ಸ್ವಲ್ಪ ದಪ್ಪನೆಯ ಮತ್ತು ಹಳದಿ ವರ್ಣದ, ಮೊದಲ ಕೆಲವು ದಿನಗಳಲ್ಲಿ ಮಾತ್ರ ಉತ್ಪತ್ತಿಯಾಗುವ ಮೊದಲ ಎದೆಹಾಲನ್ನು ಶಿಶು ಪಡೆಯುವುದು ಅತ್ಯಗತ್ಯ. ಪ್ರಥಮ ಸ್ತನ್ಯವು ಶಿಶುವಿಗೆ ಅತ್ಯಂತ ಒಳ್ಳೆಯದು, ಶಿಶುವಿನ ಮೊದಲ ಹಸಿವನ್ನು ಅದು ನೀಗಿಸುತ್ತದೆ. ಶಿಶು ಅದೇ ತಾನೇ ಜನಿಸಿದ ಆ ಹೊತ್ತಿನಲ್ಲಿ ಅದಕ್ಕೆ ಅತ್ಯಂತ ಅಗತ್ಯವಾದ ಆಹಾರ-ದ್ರವವೆಂದರೆ ಪ್ರಥಮ ಸ್ತನ್ಯ, ಬೇರಾವ ಉಪ ಆಹಾರಗಳೂ ಅದಕ್ಕೆ ಬೇಡ; ನೀರು ಸಹಿತ. 

ಪ್ರಸವದ ಬಳಿಕ ಮೊದಲ ಕೆಲವು ದಿನಗಳಲ್ಲಿ ಎದೆಹಾಲು ಒಸರುವಿಕೆಯ ಪ್ರಮಾಣ ನಿಧಾನವಾಗಿ ವೃದ್ಧಿಸುತ್ತದೆ. ಅದು ಉತ್ತುಂಗ ಸ್ಥಿತಿಯನ್ನು ತಲುಪುವುದು ದ್ವಿತೀಯ ತಿಂಗಳಿನಲ್ಲಿ; ಈ ಪ್ರಮಾಣ ಮುಂದಿನ ಆರು ತಿಂಗಳಿನವರೆಗೆ ಇರುತ್ತದೆ. 

ಹಾಲೂಡಿಸುವಿಕೆಯ ಪ್ರಥಮದಲ್ಲಿ ಉತ್ಪತ್ತಿಯಾಗುವ ಪ್ರಥಮ ಸ್ತನ್ಯ ಅಲ್ಪ ಪ್ರಮಾಣದಲ್ಲಿ ಇರುತ್ತದೆಯಾದರೂ ಮುಂದಿನ ಎದೆಹಾಲಿಗೆ ಹೋಲಿಸಿದರೆ ಅದರಲ್ಲಿ ಆವಶ್ಯಕ ಪೋಷಕಾಂಶಗಳು ಅತ್ಯಂತ ಸಾಂದ್ರ ಪ್ರಮಾಣದಲ್ಲಿರುತ್ತವೆ. ಎದೆಹಾಲು ಅತ್ಯುತ್ತಮ ಗುಣಮಟ್ಟದ ಪ್ರೊಟೀನ್‌ಗಳು, ಕೊಬ್ಬು, ವಿಟಮಿನ್‌ಗಳು, ಕ್ಯಾಲ್ಸಿಯಂ, ಕಬ್ಬಿಣದಂಶ ಮತ್ತು ಇತರ ಖನಿಜಾಂಶಗಳನ್ನು ಮುಂದಿನ ನಾಲ್ಕು ತಿಂಗಳ ಅವಧಿಯ ಬಳಿಕವೂ ಸಾಕಾಗುವಷ್ಟು ಶಿಶುವಿಗೆ ಒದಗಿಸುತ್ತದೆ. ಅಲ್ಲದೆ, ತಾಯಿಯ ಆಹಾರದಲ್ಲಿ ಸೂಕ್ತ ಪೌಷ್ಟಿಕಾಂಶಗಳನ್ನು ಒದಗಿಸುವ ಮೂಲಕ ಎದೆಹಾಲಿನ ಕೆಲವು ಪೋಷಕಾಂಶಗಳ ಗುಣಮಟ್ಟವನ್ನು ವೃದ್ಧಿಸಬಹುದಾಗಿದೆ. 

ಎದೆಹಾಲನ್ನುಂಡ ಶಿಶುಗಳ ಬೆಳವಣಿಗೆಯು ಆರು ತಿಂಗಳು ವಯಸ್ಸಿನವರೆಗೆ ಸಂತೃಪ್ತಿಕರವಾಗಿರುತ್ತದೆ.ಮಿದುಳಿನ ಬೆಳವಣಿಗೆಯಲ್ಲಿ ಪ್ರಾಮುಖ್ಯ ಪಾತ್ರವನ್ನು ನಿರ್ವಹಿಸುವ ಡೊಕೊಸಾಹೆಕೊನಿಕ್‌ ಆ್ಯಸಿಡ್‌ (ಡಿಎಚ್‌ಎ) ಎದೆಹಾಲಿನಲ್ಲಿ ಅತ್ಯುಚ್ಚ ಪ್ರಮಾಣದಲ್ಲಿರುವುದರಿಂದಲೇ ಪ್ರಾಯಃ ಎದೆಹಾಲೂಡುವಿಕೆ ಮತ್ತು ಮಗುವಿನ ಉತ್ತಮ ಜ್ಞಾನಗ್ರಹಣ ಶಕöಭಿವೃದ್ಧಿಗೆ ಕಾರಣವಾಗುತ್ತದೆ. 

ಆರು ತಿಂಗಳು ವಯಸ್ಸಿನ ಬಳಿಕ ನಿಮ್ಮ ಮಗುವಿಗೆ ಆರೋಗ್ಯ ವೃದ್ಧಿಗೆ, ಬೆಳವಣಿಗೆಗೆ ನೆರವಾಗಲು ಮತ್ತು ಪ್ರಗತಿಯನ್ನು ಉತ್ತೇಜಿಸಲು ಎದೆಹಾಲಿನ ಜತೆಗೆ ಘನ ಆಹಾರಗಳು ಬೇಕಾಗುತ್ತವೆ. ಇದನ್ನು ಪೂರಕ ಆಹಾರ ನೀಡುವಿಕೆ ಎಂದು ಕರೆಯಲಾಗುತ್ತದೆ:

– ಆರು ತಿಂಗಳ ಬಳಿಕ ಕೆಲವು ದಿನಗಳಿಗೊಮ್ಮೆ ನಿಮ್ಮ ಮಗುವಿಗೆ ಹೊಸ ಆಹಾರಗಳನ್ನು ಪರಿಚಯಿಸಿ. 
– ಆರು ತಿಂಗಳು ವಯಸ್ಸಿನಲ್ಲಿ ಎದೆಹಾಲಿನ ಜತೆಗೆ ದಿನಕ್ಕೆ ಎರಡು ಊಟಗಳನ್ನು ಆರಂಭಿಸಿ. ಹತ್ತು ತಿಂಗಳು ವಯಸ್ಸಾಗುವ ಹೊತ್ತಿಗೆ ಎದೆ ಹಾಲೂಡುವಿಕೆಯನ್ನು ಮುಂದುವರಿಸುತ್ತಾ ತಿಂಡಿತಿನಿಸುಗಳ ಜತೆಗೆ ಐದು ಸಣ್ಣ ಪ್ರಮಾಣದ ಊಟಗಳಾಗಿ ಹೆಚ್ಚಿಸಿ. ನಿಮ್ಮ ಮಗುವಿಗೆ ಎರಡು ವರ್ಷಗಳ ವಯಸ್ಸಾಗುವ ತನಕ ಈ ನಿಗದಿತ ಊಟ -ಉಪಾಹಾರಗಳನ್ನು ಎದೆಹಾಲೂಡುವಿಕೆಯ ಜತೆಗೆ ಮುಂದುವರಿಸಿ. 
– ಮಗುವಿಗೆ ಉಣ್ಣಿಸುವುದಕ್ಕೆ ಮುನ್ನ ನಿಮ್ಮ ಕೈಗಳನ್ನು ಸಾಬೂನು ಉಪಯೋಗಿಸಿ ಚೆನ್ನಾಗಿ ತೊಳೆದುಕೊಳ್ಳಬೇಕು. 
– ನಿಮ್ಮ ಮಗುವಿಗೆ ಆಹಾರ ತಯಾರಿಸುವಾಗ ಎಲ್ಲದರಲ್ಲೂ ಶುಚಿತ್ವವನ್ನು ಕಾಯ್ದುಕೊಳ್ಳಿ.  

ಅಂಬೆಗಾಲಿಕ್ಕುವ ಮಗು – 1ರಿಂದ 3 ವರ್ಷ ವಯಸ್ಸು
ಹಸಿವು ಕಡಿಮೆಯಾಗುತ್ತದೆ ಮತ್ತು ಆಹಾರ ಸೇವನೆಯ ಸ್ವಭಾವ ಬದಲಾಗುತ್ತದೆ. ಮಕ್ಕಳು ಕೊಬ್ಬನ್ನು ಕಳೆದುಕೊಂಡು ತೆಳ್ಳಗಾಗುತ್ತಾರೆ – ಈಗ ಸ್ನಾಯುಗಳ ವೃದ್ಧಿಯಾಗುತ್ತದೆ. 2 ವರ್ಷ ವಯಸ್ಸಿನ ಹೊತ್ತಿಗೆ ಶಿಶುಹಲ್ಲುಗಳು ಬಂದಿರುತ್ತವೆ. ಆರೋಗ್ಯಕರ ಊಟ – ಉಪಾಹಾರ ಸೇವನೆಯನ್ನು ಮಕ್ಕಳಲ್ಲಿ ಆರಂಭಿಸಲು ಇದು ಸರಿಯಾದ ಸಮಯ. ಹೆತ್ತವರು ಮತ್ತು ಮನೆಯ ಹಿರಿಯರು ಇದಕ್ಕೆ ಮಕ್ಕಳಿಗೆ ಮಾದರಿಯಾಗುತ್ತಾರೆ – ಆಗಬೇಕು. 

ಶಾಲಾಪೂರ್ವ ಹಂತ – 3ರಿಂದ 5 ವರ್ಷ ವಯಸ್ಸು
ಶಾಲಾಪೂರ್ವ ಹಂತದ ವಯಸ್ಸಿನ ಮಕ್ಕಳು ಹೊಸ ಆಹಾರಗಳನ್ನು ಹೆಚ್ಚು ಇಷ್ಟಪಡುವುದಿಲ್ಲ. ಅವರ ನಾಲಗೆಯ ರಸಾಗ್ರಗಳು ವಯಸ್ಕರಿಗಿಂತ ಹೆಚ್ಚು ಸೂಕ್ಷ್ಮ ಸಂವೇದಿಗಳಾಗಿದ್ದು, ಆಹಾರದ ವಿಚಾರದಲ್ಲಿ ಬಲವಾದ ಇಷ್ಟಾನಿಷ್ಟಗಳನ್ನು ಹೊಂದಿರುತ್ತಾರೆ.

ಹೆತ್ತವರು ಎದುರಿಸುವ ಸಾಮಾನ್ಯ ಸಮಸ್ಯೆಗಳು
ಮಗು ಸಾಕಷ್ಟು ಉಂಡು – ತಿನ್ನದಿದ್ದಾಗ ಅಥವಾ ಶಿಶುವಾಗಿದ್ದಾಗಿನಷ್ಟು ಸೇವಿಸದಿದ್ದಾಗ ಇದು ಶಾಲಾಪೂರ್ವ ಹಂತದ ಮಕ್ಕಳ ಅತಿ ಸಾಮಾನ್ಯ ನಡವಳಿಕೆ – ಬೆಳವಣಿಗೆ ನಿಧಾನವಾಗುವುದರಿಂದ ಹೀಗಾಗುತ್ತದೆ. ಬೆಳವಣಿಗೆ ನಿಧಾನಗತಿಯಲ್ಲಿರುವುದರಿಂದ ಈ ವಯಸ್ಸಿನ ಪುಟಾಣಿಗಳಿಗೆ ಹಸಿವು ಕಡಿಮೆ. ಹೀಗಾಗಿ ಆಹಾರ ಸೇವನೆಯತ್ತ ಹೆಚ್ಚು ಗಮನಹರಿಸುವುದಿಲ್ಲ. ಇದಲ್ಲದೆ, ಇಂದ್ರಿಯ ಸಂಬಂಧಿಯಾದ ಮತ್ತು ಸ್ನಾಯುಚಲನಾ ಕೌಶಲಗಳು ಆಗಷ್ಟೇ ಪರಿಷ್ಕರಣೆಗೊಳ್ಳುತ್ತಿರುವುದರಿಂದ ಅವರಲ್ಲಿ ಸುತ್ತಲಿನ ಪರಿಸರದ ಶೋಧನೆ, ಅನ್ವೇಷಣೆಯ ಬಗೆಗಿನ ಆಸಕ್ತಿಯೇ ಅಧಿಕವಾಗಿರುತ್ತದೆ. ಮಗು ಸಹಜವಾಗಿ ಪ್ರಗತಿ, ಬೆಳವಣಿಗೆ ಹೊಂದುತ್ತಿರುವಂತೆ ಹೆತ್ತವರು ನೋಡಿಕೊಳ್ಳಬೇಕು. ವೈವಿಧ್ಯಮಯ ಆರೋಗ್ಯಕರ ಆಹಾರ ಅವರಿಗೆ ಲಭಿಸುವಂತೆ ನೋಡಿಕೊಳ್ಳಿ: ಶಕ್ತಿ ಮತ್ತು ಪೌಷ್ಟಿಕಾಂಶಗಳು ಸಾಂದ್ರವಾಗಿರುವ ಆಹಾರಗಳನ್ನು ಒದಗಿಸಿ. ಆಹಾರ ಸೇವಿಸುವಂತೆ ಬಲವಂತಪಡಿಸುವುದು, ಒತ್ತಾಯಿಸುವುದು ಅಥವಾ ಆಮಿಷವೊಡ್ಡುವುದು ಬೇಡ.

– ಡಾ| ಅಮೃತಾ ಎಂ.ಎಸ್‌., ವಿನೀತಾ ಕೋಟ್ಯಾನ್‌ ,   
ಡಯಾಟೀಶಿನ್‌, ನ್ಯೂಟ್ರಿಶಿಯನ್‌, ಪಥ್ಯಾಹಾರ ವಿಭಾಗ,
ಕೆ.ಎಂ.ಸಿ. ಆಸ್ಪತ್ರೆ,  ಮಣಿಪಾಲ.

 

Advertisement

Udayavani is now on Telegram. Click here to join our channel and stay updated with the latest news.

Next