ಯಶವಂತಪುರ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಯೊಂದಿಗೆ ಮುಂಬರುವ ದಿನಗಳಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುವ ಮೂಲಕ ಅಭಿವೃದ್ಧಿಶೀಲ, ಸಶಕ್ತ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್ ಹೇಳಿದರು.
ಬೆಂಗಳೂರು ಮೈಸೂರು ಮುಖ್ಯರಸ್ತೆಯ ಆರ್.ವಿ. ತಾಂತ್ರಿಕ ಮಹಾವಿದ್ಯಾಲಯದಿಂದ ಪೂರ್ಣಿಮಾ ಪ್ಯಾಲೇಸ್‌ನಲ್ಲಿ 2023-24ನೇ ಸಾಲಿನ ಪ್ರಥಮ ವರ್ಷದ ಬಿಇ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಪ್ರಾದೇಶಿಕ ಭಾಷೆಯಲ್ಲಿ ತಾಂತ್ರಿಕ ಪಠ್ಯಕ್ರಮ ದೊರಕುವ ಪರಿಣಾಮದಿಂದ ವಿದ್ಯಾರ್ಥಿಗಳು ಸುಲಭ, ಸರಳವಾಗಿ ಅರ್ಥೈಸಿಕೊಂಡು ಜ್ಞಾನದ ಅರಿವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ವಿವರಿಸಿದರು.
ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ಇತರ ರಾಷ್ಟ್ರಗಳೊಂದಿಗೆ ಪ್ರತಿಸ್ಪರ್ಧೆಯೊಡ್ಡಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲು ಕೇಂದ್ರ ಸರ್ಕಾರ ಗುಣಮಟ್ಟದ ಶಿಕ್ಷಣದೊಂದಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ಎಲ್ಲಾ ರೀತಿಯ ಸಹಕಾರ ನೀಡುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುತ್ತಿದೆ ಎಂದು ಹೇಳಿದರು.
ಬಾಹ್ಯಾಕಾಶ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡುವ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ನೂತನ ಮೈಲಿಗಲ್ಲು ಸ್ಥಾಪಿಸಿದೆ. ವಿದ್ಯಾರ್ಥಿಗಳು ಎಷ್ಟೇ ಸಾಧನೆ ಮಾಡಿದರೂ ಕಲಿತ ಶಾಲೆ,ಗುರು ಹಿರಿಯರನ್ನು ಕಡೆಗಣಿಸದೆ, ಮಾನವೀಯತೆಯನ್ನು ಮೈಗೂಡಿಸಿಕೊಂಡು ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.
ಆರ್.ವಿ.ತಾಂತ್ರಿಕ ಮಹಾವಿದ್ಯಾಲಯ ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಂಪಿ.ಶ್ಯಾಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನಲ್ಲಿ ವ್ಯಾಸಂಗ ನಡೆಸಿ ಉನ್ನತ ಹುದ್ದೆ ಅಲಂಕರಿಸಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಫಲಕ ನೀಡಿ ಗೌರವಿಸಲಾಯಿತು. ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಗೌರವ ಕಾರ್ಯದರ್ಶಿ ಡಾ.ಎ.ವಿ.ಎಸ್.ಮೂರ್ತಿ, ಪ್ರಾಂಶುಪಾಲ ಡಾ.ಕೆ.ಎನ್.ಸುಬ್ರಹ್ಮಣ್ಯ, ಉಪಪ್ರಾಂಶುಪಾಲರಾದ ಡಾ.ಗೀತಾ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.