ಬೆಂಗಳೂರು: ಬಸವನಗುಡಿ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕಾರ್ಯಕ್ರಮಗಳಿಗೂ ಅನುಮತಿ ನೀಡಬಾರದು ಎಂದು ಹೈಕೋರ್ಟ್ ಸೋಮವಾರ ಬಿಬಿಎಂಪಿಗೆ ಮೌಖೀಕ ಸೂಚನೆ ನೀಡಿದೆ.
ಶಂಕರಪುರಂ ನಿವಾಸಿಗಳು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎಸ್.ಕೆ ಮುಖರ್ಜಿ ಹಾಗೂ ನ್ಯಾ.ಪಿ.ಎಸ್ ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ, ಮೈದಾನದಲ್ಲಿ ಕ್ರೀಡಾಚಟುವಟಿಕೆ ಹೊರತು ಪಡಿಸಿ ಬೇರೆ ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು ಎಂದು ಬಿಬಿಎಂಪಿ ಹಾಗೂ ನಗರ ಪೊಲೀಸ್ ಇಲಾಖೆಗೆ ತಿಳಿಸಿದೆ.
ಅರ್ಜಿಯಲ್ಲಿ ಏನಿತ್ತು?: ಬಸವನಗುಡಿ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಇತ್ತೀಚೆಗೆ ಕ್ರೀಡಾಚಟುವಟಿಕೆಗಳನ್ನು ಹೊರತುಪಡಿಸಿ ಧಾರ್ಮಿಕ ಹಾಗೂ ರಾಜಕೀಯ ಕಾರ್ಯಕ್ರಮಗಳೇ ಹೆಚ್ಚಾಗಿ ನಡೆಯುತ್ತಿವೆ. ಇದರಿಂದ ಶಬ್ದಮಾಲಿನ್ಯ ಹೆಚ್ಚಳವಾಗಿ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ಇನ್ನಿಲ್ಲದ ತೊಂದರೆ ಯಾಗುತ್ತಿದೆ.ಅಲ್ಲದೆ ಇಂತಹ ಸಮಾವೇಶಗಳಿಗೆ ಸೇರುವ ಸಾವಿರಾರು ಮಂದಿ, ಬಹಿರ್ದೆಸೆಗೆ ಹತ್ತಿರಲ್ಲಿರುವ ಸಾರ್ವಜನಿಕ ಸ್ಥಳಗಳು, ಶಾಲೆಗಳನ್ನು ಅವಲಂಬಿಸುತ್ತಿದ್ದಾರೆ.
ಇದರಿಂದ ಅನೈರ್ಮಲಿಕರಣ ಉಂಟಾಗಿದೆ. ಅಲ್ಲದೆ ವಾಣಿಜ್ಯ ಚಟುವಟಿಕೆಗಳ ಪ್ರದರ್ಶನಕ್ಕೂ ಅವಕಾಶ ನೀಡುತ್ತಿರುವುದರಿಂದ ಮೈದಾನ ವಾಣಿಜ್ಯ ಚಟುವಟಿಕೆಗಳ ಕೇಂದ್ರವಾಗಿ ಬದಲಾಗುತ್ತಿದೆ. ಜತೆಗೆ ಕಳೆದ ವರ್ಷ ಆಗಸ್ಟ್‌ನಿಂದ ಡಿಸೆಂಬರ್ ಅವಧಿಯವರೆಗೆ ಮೂರು ತಿಂಗಳು, ಕ್ರೀಡೇತರ ಚಟು ವಟಿಕೆಗಳಿಗೆ ಮೈದಾನ ಬಳಕೆಯಾಗಿದೆ.
ಇದರಿಂದ ವಿದ್ಯಾರ್ಥಿಗಳು ಹಾಗೂ ಸ್ಥಳೀ ಯರಿಗೆ ಮೈದಾನದಲ್ಲಿ ಅವಕಾಶವೇ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಕಾಲೇಜು ಮೈದಾನದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಹೊರತು ಪಡಿಸಿ ಬೇರೆ ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ನೀಡದಂತೆ ಅಥವಾ ಬಿಬಿಎಂಪಿ, ನಗರ ಪೊಲೀಸ್ ವಿಭಾಗಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.