ಬೆಂಗಳೂರು: ಟೆಕಿ ಅತುಲ್ ಸುಭಾಷ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಸಂಬಂಧ ಅವರ ಪತ್ನಿ ನಿಕಿತಾ ಸಿಂಘಾನಿಯ ಮತ್ತಿತರರ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ಪ್ರಕರಣದಲ್ಲಿ ಮೇಲ್ನೋಟಕ್ಕೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಂಶಗಳಿವೆ ಎಂದು ತಿಳಿಸಿರುವ ನ್ಯಾಯಪೀಠ, ವಿಚಾರಣೆಯನ್ನು ಜ.21ಕ್ಕೆ ಮುಂದೂಡಿದೆ.
ಮಾರತ್ತಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಮತ್ತು ಏಕ ಉದ್ದೇಶದಿಂದ ಅನೇಕ ಮಂದಿ ಕ್ರಿಮಿನಲ್ ಕೃತ್ಯದಲ್ಲಿ ತೊಡಗಿರುವ ಆರೋಪದಲ್ಲಿ ತಮ್ಮ ಮೇಲೆ ದಾಖಲಿಸಿರುವ ಎಫ್ಐಆರ್ ರದ್ದುಪಡಿಸಬೇಕು ಎಂದು ಅತುಲ್ ಪತ್ನಿ ನಿಖಿತಾ, ಅತ್ತೆ ನಿಶಾ , ಬಾಮೈದ ಅನುರಾಗ್ ಹಾಗೂ ಸುಶೀಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಆರ್. ಕೃಷ್ಣ ಕುಮಾರ್‌ಅವರ ಏಕಸದಸ್ಯ ಪೀಠ, ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ವಿಚಾರಣಾಧೀನ ನ್ಯಾಯಾಲಯವು ಕಳೆದ ಶನಿವಾರ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಆತ್ಮಹತ್ಯೆ ಪ್ರಚೋದನೆಯಡಿ ಪ್ರಕರಣ ದಾಖಲಿಸಲು ಯಾವುದೇ ಅಂಶಗಳಿಲ್ಲ. ಆರೋಪಿಗಳನ್ನು ಬಂಧಿಸುವುದಕ್ಕೆ ಆಧಾರಗಳನ್ನೂ ಪೊಲೀಸರು ನೀಡಿಲ್ಲ. ಹೀಗಾಗಿ, ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದರು.
ಆಗ ಪ್ರತಿಕ್ರಿಯಿಸಿದ ನ್ಯಾಯಪೀಠ, “ಎಫ್ಐಆರ್ ಓದಿದರೆ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಎಲ್ಲ ಅಂಶ ಸ್ಪಷ್ಟವಾಗಿವೆ. ನನ್ನ ಪ್ರಕಾರ ಎಲ್ಲಾ ವಿವರಗಳನ್ನು ನೀಡಲಾಗಿದೆ. ಎಫ್ಐಆರ್ ನಲ್ಲಿ ಇದಕ್ಕಿಂತ ಇನ್ನೂ ಹೆಚ್ಚಿನದನ್ನು ಏನು ಕೊಡಲಾಗುತ್ತದೆ’ ಎಂದು ಪೀಠ ಪ್ರಶ್ನಿಸಿತು.
ಹಾಗೆಯೇ, ಈ ಕುರಿತು ತನಿಖೆ ನಡೆಯುತ್ತಿದೆಯೇ, ಏನೆಲ್ಲಾ ದಾಖಲೆಗಳನ್ನು ಸಂಗ್ರಹಿಸಲಾಗಿದೆ, ಡೆತ್‌ನೋಟ್, ಆತ್ಮಹತ್ಯೆ ವಿಡಿಯೋ ಸಂಗ್ರಹಿಸಲಾಗಿದೆಯೇ ಎಂದು ಸರ್ಕಾರಿ ವಕೀಲರನ್ನು ನ್ಯಾಯಪೀಠ ಪ್ರಶ್ನಿಸಿತು. ಈ ವೇಳೆ, ಸರ್ಕಾರಿ ಪರ ವಕೀಲರು ತನಿಖೆ ಪ್ರಗತಿಯಲ್ಲಿದೆ ಎಂದರು. ಆಗ ಪೀಠವು ತನಿಖೆಯ ಸಂದರ್ಭದಲ್ಲಿ ಸಂಗ್ರಹಿಸಿರುವ ದಾಖಲೆಗಳನ್ನು ಸಲ್ಲಿಸಬೇಕು. ಜೊತೆಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಮುಂದೂಡಿತು.