ವಾಷಿಂಗ್ಟನ್: ಬೃಹತ್ ಗಾತ್ರದ ಆಕಾಶಕಾಯವೊಂದು ಭೂಮಿಯತ್ತ ವೇಗವಾಗಿ ಧಾವಿಸುತ್ತಿರುವುದಾಗಿ ಅಮೆರಿಕದ ಬಾಹ್ಯಾಕಾಶ ಏಜೆನ್ಸಿ ನಾಸಾ ತಿಳಿಸಿದ್ದು, ಇದು ಫೆಬ್ರುವರಿ 15ರಂದು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹೇಳಿದೆ.
ಎಕ್ಸ್ ಪ್ರೆಸ್ ಯುಕೆ ವರದಿ ಪ್ರಕಾರ, ನಾಸಾ ವಿಜ್ಞಾನಿಗಳ ತಂಡಕ್ಕೆ ಭೂಕಕ್ಷೆಯ ಸಮೀಪ ಬೃಹತ್ ಗಾತ್ರದ ಆಕಾಶಕಾಯ ಬರುತ್ತಿರುವುದನ್ನು ಪತ್ತೆ ಹಚ್ಚಿರುವುದಾಗಿ ತಿಳಿಸಿದೆ. ಈ ಆಕಾಶಕಾಯಕ್ಕೆ 2002 PZ39 ಎಂದು ಹೆಸರಿಸಲಾಗಿದೆ.
ಈ ಕ್ಷುದ್ರಗ್ರಹ ಗಂಟೆಗೆ 57,240 ಕಿಲೋ ಮೀಟರ್ ಅತೀ ವೇಗದಲ್ಲಿ ಧಾವಿಸುತ್ತಿರುವುದಾಗಿ ನಾಸಾ ವಿವರಿಸಿದೆ. ಈ ಬೃಹತ್ ಗಾತ್ರದ ಆಕಾಶಕಾಯದ ಗಾತ್ರದ ಬಗ್ಗೆ ಅಂದಾಜಿಸಿರುವ ನಾಸಾ, ಇದು 3,280 ಅಡಿ ಸುತ್ತಳತೆಯಷ್ಟು ಅಗಲವಾಗಿರುವುದಾಗಿ ತಿಳಿಸಿದೆ. ಇದು ಇಡೀ ವಿಶ್ವದಲ್ಲಿಯೇ ಮಾನವ ನಿರ್ಮಿತ ಬೃಹತ್ ಗಾತ್ರದ ರಚನೆಗಿಂತ ದೊಡ್ಡದಾಗಿದೆ ಎಂದು ನಾಸಾ ಹೇಳಿದೆ.
ಪಿಝಡ್39 ಅನ್ನು ನಿಗೂಢ ಅಪಾಯಕಾರಿ ವಸ್ತು(ಪಿಎಚ್ ಒ) ಎಂದು ನಾಸಾ ವರದಿ ತಿಳಿಸಿದೆ. ಈ ಬೃಹತ್ ಗಾತ್ರದ ಆಕಾಶಕಾಯ ಭೂಮಿಗೆ ಅಪ್ಪಳಿಸಿದರೆ 60ಮೆಗಾ ಟನ್ ನಷ್ಟು ಸ್ಫೋಟಕ್ಕೆ ಸಮನಾಗಿರುತ್ತದೆ. 66 ದಶಲಕ್ಷ ವರ್ಷಗಳ ಹಿಂದೆ ಹೀಗೆ ಭೂಮಿಗೆ ಬೃಹತ್ ಗಾತ್ರದ ಕ್ಷುದ್ರಗ್ರಹ ಅಪ್ಪಳಿಸಿದ ಪರಿಣಾಮ ಡೈನೋಸಾರ್ಸ್ ಸಂತತಿ ನಾಶವಾಗಲು ಕಾರಣವಾಗಿರಬಹುದು ಎಂಬುದು ವಿಜ್ಞಾನಿಗಳ ಅಭಿಪ್ರಾಯ.
ಫೆಬ್ರವರಿ 15ರಂದು ಭೂಮಿಯತ್ತ ಸಮೀಪಿಸುವ ಈ ಬೃಹತ್ ಆಕಾಶಕಾಯ ಅಪ್ಪಳಿಸುವ ಸಾಧ್ಯತೆ ತುಂಬಾ ಕಡಿಮೆ ಎಂದು ನಾಸಾ ಹೇಳಿದೆ.