ಬೆಂಗಳೂರು: ಮಲ್ಲೇಶ್ವರದ ಮಂತ್ರಿ ಸ್ಕ್ವೇರ್ ಮೆಟ್ರೋ ನಿಲ್ದಾಣಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ಚೌಡಯ್ಯ ಸ್ಮಾರಕ ಸಭಾ ಭವನದಲ್ಲಿ ಗುರುವಾರ ಆಯೋಜಿಸಿದ ಬ್ರಹ್ಮರ್ಷಿ ನಾರಾಯಣ ಗುರುಗಳ 168ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈಡಿಗ- ಬಿಲ್ಲವ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಇನ್ನಿತರ ಅಭಿವೃದ್ಧಿಗೆ ಪ್ರತ್ಯೇಕ ನಿಧಿಯನ್ನು ಪ್ರಾರಂಭಿಸಲಾಗುವುದು. ಈ ವರ್ಷದ ಬಜೆಟ್‌ನಲ್ಲೇ ಇದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಂಗಳೂರಿನಲ್ಲಿ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಬಿಡಿಎ ವತಿಯಿಂದ ಮಂಜೂರಾಗಿರುವ 1000 ಚ.ಮೀ. ನಿವೇಶನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಹೆಸರಿನ ಸಮುದಾಯ ಭವನ ಆರಂಭಿಸಲು ಸರಕಾರದಿಂದ 2 ಕಂತಿನಲ್ಲಿ 5 ಕೋಟಿ ರೂ. ಮಂಜೂರು ಮಾಡಲಾಗುವುದು. ನೆಲಮಂಗಲ ಸಮೀಪ ಇರುವ ಸೋಲೂರು ಆರ್ಯ-ಈಡಿಗ ಮಠ ಪ್ರಾರಂಭಿಸಿರುವ ಶೈಕ್ಷಣಿಕ ಚಟುವಟಿಕೆ ಹಾಗೂ ಶೈಕ್ಷಣಿಕ ಸಂಸ್ಥೆಗಳ ನಿರ್ಮಾಣಕ್ಕೆ ಸರಕಾರದಿಂದ ಜಾಗ ನೀಡಲು ಕೆಲವೇ ದಿನಗಳಲ್ಲಿ ಆದೇಶಿಸುತ್ತೇನೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿವಿಧ ತರಬೇತಿ ಕೇಂದ್ರಗಳ ನಿರ್ಮಾಣಕ್ಕೆ ಸೋಲೂರಿನಲ್ಲಿ ನಾರಾಯಣಗುರು ಮಠಕ್ಕೆ ಹೊಂದಿಕೊಂಡಿರುವ ಗೋಮಾಳ ಜಾಗದಲ್ಲಿ 10 ಎಕ್ರೆ ಮಂಜೂರಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಬ್ರಹಶ್ರೀ ನಾರಾಯಣ ಗುರು 4 ವಸತಿ ಶಾಲೆಗಳಿಗೆ ತಲಾ 25ರಿಂದ 30 ಕೋಟಿ ರೂ. ಖರ್ಚು ಮಾಡುತ್ತೇವೆ ಎಂದರು.
ಸೋಲೂರಿನ ಆರ್ಯ ಈಡಿಗ ಸಂಸ್ಥಾನದ ಪೀಠಾ ಧಿಪತಿ ವಿಖ್ಯಾತಾನಂದ ಸ್ವಾಮೀಜಿ ಮಾತನಾಡಿ, ನಾರಾಯಣ ಗುರುಗಳು ಸಮಾಜದ ಉನ್ನತಿಗೆ ಶ್ರಮಿಸಿದವರು. ಎಲ್ಲ ಜಿಲ್ಲೆಗಳಲ್ಲಿ ಅವರ ಹೆಸರಿನಲ್ಲಿ ಶಾಲೆ ಸ್ಥಾಪಿಸಬೇಕು. ನಮ್ಮ ಮಠಕ್ಕೆ ಕನಿಷ್ಠ ಒಂದು ಶಾಲೆಯ ನಿರ್ವಹಣೆಯ ಜವಾಬ್ದಾರಿ ನೀಡಿದರೂ ಮಾದರಿಯಾಗಿ ರೂಪಿಸುತ್ತೇವೆ ಎಂದರು.
ಸಚಿವ ವಿ. ಸುನಿಲ್ ಕುಮಾರ್, ಶಾಸಕ ಎಚ್. ಹಾಲಪ್ಪ, ಸಂಘದ ಅಧ್ಯಕ್ಷ ಎಂ. ತಿಮ್ಮೇಗೌಡ ಮತ್ತಿತರರು ಪಾಲ್ಗೊಂಡಿದ್ದರು.