Advertisement

Nandavara: ಕಸ ತೆರವಿಗೂ ತಗಲಿತು ಗಡಿ ವಿವಾದ

05:34 PM Sep 01, 2024 | Team Udayavani |

ಬಂಟ್ವಾಳ: ರಸ್ತೆ, ಸೇತುವೆ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳು ಗಡಿ ವಿವಾದಕ್ಕೆ ತುತ್ತಾಗಿ ಅಭಿವೃದ್ಧಿ ಕಾಣದ್ದನ್ನು ಕಂಡಿದ್ದೇವೆ. ಆದರೆ ಇಲ್ಲೊಂದು ಕಡೆ ರಸ್ತೆ ಬದಿ ಬಿದ್ದಿರುವ ಕಸದ ರಾಶಿಯೇ ಗಡಿ ವಿವಾದದ ಪರಿಣಾಮ ಸಮರ್ಪಕವಾಗಿ ವಿಲೇವಾರಿಯಾಗದೆ ದುರ್ನಾತ ಬೀರುವ ಜತೆಗೆ ಬೀದಿ ನಾಯಿಗಳಿಂದ ಸ್ಥಳೀಯವಾಗಿ ಓಡಾಡುವ ಮಕ್ಕಳು ಸಹಿತ ಸಾರ್ವಜನಿಕರಿಗೆ ಅಪಾಯ ಎದುರಾಗಿದೆ.

Advertisement

ಇದು ಬಂಟ್ವಾಳ ಪುರಸಭೆ ಹಾಗೂ ಸಜೀಪಮುನ್ನೂರು ಗ್ರಾ.ಪಂ. ಗಡಿ ವ್ಯಾಪ್ತಿಯ ಪಾಣೆಮಂಗಳೂರು ನಂದಾವರ ಸೇತುವೆ ಬಳಿಯ ಕಥೆ-ವ್ಯಥೆ. ಸೇತುವೆಯ ಬಳಿಯಲ್ಲೇ ಟನ್‌ಗಟ್ಟಲೆ ಕಸ ರಾಶಿ ಬಿದ್ದಿದ್ದು, ದಿನ ಕಳೆದಂತೆ ಕಸದ ರಾಶಿ ಹೆಚ್ಚುತ್ತಿದೆಯೇ ವಿನಃ, ಅದು ವಿಲೇವಾರಿಯಾಗುವುದು ಬಹಳ ಅಪರೂಪ. ಕಸದ ಬೀಳುವ ಪ್ರದೇಶವು ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿದೆ. ಆದರೆ ಕಸ ತಂದು ಹಾಕುವವರು ಸಜೀಪಮುನ್ನೂರು ಗ್ರಾಮದ ನಂದಾವರ ಪ್ರದೇಶವರು ಎಂಬುದು ಪುರಸಭೆಯ ಆರೋಪವಾಗಿದೆ.

ಹಸಿದಿರುವ ನಾಯಿಗಳಿಂದ ಅಪಾಯ ಕಸ ರಾಶಿ ಬಿದ್ದು ದುರ್ನಾತ ಬೀರುವುದು ಒಂದು ಚಿಂತೆ ಆದರೆ ಅದರ ಜತೆಗೆ ಮತ್ತೂಂದು ಗಂಭೀರ ಸಮಸ್ಯೆಯ ಕುರಿತು ನಾವು ಗಮನ ಹರಿಸಲೇಬೇಕಿದೆ. ಕಸ ಬೀಳುವ ಪ್ರದೇಶದ ಪಕ್ಕದಲ್ಲೇ ಎರಡು ವಿದ್ಯಾಸಂಸ್ಥೆಗಳು ಕಾರ್ಯಾಚರಿಸುತ್ತಿದ್ದು, ಶಾಲೆಗೆ ನಂದಾವರ ಭಾಗದಿಂದ ಆಗಮಿಸುವ 500ಕ್ಕೂ ಅಧಿಕ ವಿದ್ಯಾರ್ಥಿಗಳು ನಡೆದುಕೊಂಡೇ ಸಾಗುತ್ತಾರೆ. ಕಸದ ರಾಶಿಯಲ್ಲಿ ತಿನ್ನುವುದಕ್ಕೆ ಏನಾದರೂ ಸಿಗುತ್ತದೆಯೇ ಎಂದು ಹತ್ತಾರು ನಾಯಿಗಳು ಹೊಂಚು ಹಾಕಿ ಕುಳಿತಿರುತ್ತವೆ.

ನೂರಾರು ವಿದ್ಯಾರ್ಥಿಗಳು ಓಡಾಡುವ ಸಂದರ್ಭದಲ್ಲಿ ಅವುಗಳು ಮಕ್ಕಳ ಮೇಲೆ ಎರಗುವ ಅಪಾಯ ಎದುರಾಗಿದ್ದು, ಇದಕ್ಕೆ ಯಾರು ಹೊಣೆ ಎಂಬ ಆತಂಕ ಸ್ಥಳೀಯ ವಿದ್ಯಾಸಂಸ್ಥೆಗಳು, ಪೋಷಕರನ್ನು ಕಾಡುತ್ತಿದೆ.

ದ.ಕ.ಜಿಲ್ಲಾಧಿಕಾರಿಗಳಿಗೆ ಮನವಿ ಶಾಲಾ ಪರಿಸರದಲ್ಲಿ ಕಸ ಬಿದ್ದು ದುರ್ನಾತ ಬೀರುವ ಜತೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿ ಮಕ್ಕಳಿಗೆ ಅಪಾಯ ಎದುರಾಗಿರುವ ಹಿನ್ನೆಲೆಯಲ್ಲಿ ಸೂಕ್ತ ಕ್ರಮಕೈಗೊಂಡು ಅಪಾಯ ತಪ್ಪಿಸುವಂತೆ ಪಾಣೆಮಂಗಳೂರು ಎಸ್‌ ಎಲ್‌ಎನ್‌ಪಿ ವಿದ್ಯಾಲಯದಿಂದ ದ.ಕ. ಜಿಲ್ಲಾಧಿಕಾರಿಗಳು ಸೇರಿದಂತೆ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿಗಳು, ಸಜೀಪಮುನ್ನೂರು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳಿಗೂ ದೂರು ನೀಡಲಾಗಿದೆ.

Advertisement

ಜತೆಗೆ ವಿದ್ಯಾಸಂಸ್ಥೆಯವರು ಆರೋಗ್ಯ ಇಲಾಖೆಯನ್ನೂ ಕೂಡ ಭೇಟಿಯಾಗಿ ಪರಿಸ್ಥಿತಿಯನ್ನು ವಿವರಿಸಿದ್ದು, ಇಲಾಖೆಯವರು ಪರಿಶೀಲನೆ ಮಾಡಿರುವುದು ಬಿಟ್ಟರೆ ಬೇರೆ ಯಾವುದೇ ಪ್ರಯೋಜನ ಆಗಿಲ್ಲ ಎನ್ನಲಾಗಿದೆ

ಹೊರಗಿನ ಕಸ ಬೀಳದಂತೆ ನಿಗಾ
ಪುರಸಭಾ ವ್ಯಾಪ್ತಿಯಲ್ಲಿ ನಮ್ಮ ವಾಹನಗಳು ತೆರಳಿ ತ್ಯಾಜ್ಯ ವಿಲೇವಾರಿ ಮಾಡುತ್ತಿದೆ. ಆದರೆ ಗ್ರಾಮೀಣ ಭಾಗಗಳಿಂದ ನಮ್ಮ ವ್ಯಾಪ್ತಿಗೆ ಕಸ ತಂದು ಹಾಕುವ ಪ್ರಕರಣಗಳು ನಡೆಯುತ್ತಿದೆ. ಇದರ ತಡೆಯ ಕುರಿತು ಆರೋಗ್ಯ ನಿರೀಕ್ಷಕರ ಜತೆ ಈಗಾಗಲೇ ಚರ್ಚೆ ನಡೆಸಿದ್ದು, ಹೊರಗಿನಿಂದ ಕಸ ಬೀಳುವ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಅಡ್ಡಲಾಗಿ ನೆಟ್‌ ಅಳವಡಿಸುವ ಜತೆಗೆ ಬೋರ್ಡ್‌ ಹಾಕಿ ಒಂದಷ್ಟು ಸಮಯ ನಿಗಾ ಇರಿಸುವ ಆಲೋಚನೆ ಇದೆ.
-ವಾಸು ಪೂಜಾರಿ ಲೊರೆಟ್ಟೊ ಅಧ್ಯಕ್ಷರು, ಬಂಟ್ವಾಳ ಪುರಸಭೆ

ನೆರೆ ಬಂದರೆ ಮಾತ್ರ ಮುಕ್ತಿ
ನಂದಾವರ ಭಾಗದಿಂದ ಆಗಮಿಸುವವರು ಈ ಜಾಗದಲ್ಲಿ ಬೆಳಗ್ಗಿನ ಹೊತ್ತು ಕಸ ಬಿಸಾಡುತ್ತಿದ್ದು, ಬಳಿಕ ದಿನಗಟ್ಟಲೆ ಕಸದ ರಾಶಿ ಅಲ್ಲೇ ಬಿದ್ದಿರುತ್ತದೆ. ಯಾವಾಗಲಾದರೊಮ್ಮೆ ಇಲ್ಲಿನ ಕಸ ವಿಲೇವಾರಿಯಾಗುತ್ತಿದ್ದು, ಪೂರ್ತಿ ಕಸ ಹೋಗಬೇಕಾದರೆ ನೆರೆಯೇ ಬರಬೇಕಿದೆ. ಕಳೆದ ತಿಂಗಳು ನೆರೆ ಬಂದ ಸಂದರ್ಭದಲ್ಲಿ ಇಲ್ಲಿನ ಕಸದ ರಾಶಿ ಕೊಚ್ಚಿ ಹೋಗಿದ್ದು, ಈಗ ಮತ್ತೆ ರಾಶಿ ಬಿದ್ದಿದೆ. ಹೀಗಾಗಿ ಮತ್ತೆ ಕಸಕ್ಕೆ ಮುಕ್ತಿ ಸಿಗಬೇಕಾದರೆ ಮತ್ತೂಂದು ನೆರೆ ಬರಬೇಕೇನೋ ಎಂಬ ಸ್ಥಿತಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next