ಅಬ್ಬಬ್ಟಾ ಏನ್ ಟ್ರಾಫಿಕ್! ಒಂದು ಸಿಗ್ನಲ್‌ನಿಂದ ತಪ್ಪಿಸಿಕೊಂಡು ನಿಟ್ಟುಸಿರು ಬಿಟ್ಟಾಗ ಇನ್ನೊಂದು ಸಿಗ್ನಲ್‌ನಲ್ಲಿ ಸಿಕ್ಕಿ ಬೀಳ್ತಿವಿ. 10 ಕಿ.ಮೀ. ಇರೋ ಊರನ್ನು ತಲುಪಬೇಕಾದರೆ ಈ ಟ್ರಾಫಿಕ್ ಮಧ್ಯೆ ಸುಮಾರು ಅರ್ಧ ಗಂಟೆ ಬೇಕು. ಯಾರಿಗೆ ಆಗ್ಬೋದು ಈ ಬೆಂಗಳೂರು ಟ್ರಾಫಿಕ್ ಎಂದು ಜನರು ಚಿಂತೆಯಲ್ಲಿರುವಾಗ ನಿಮ್ಮ ಪಯಣ ಅತೀ ವೇಗದ ಜತೆಗೆ ಸುಖಕರವಾಗಿರುವಂತೆ ಮಾಡಲು ನಾನ್ ನಿಮ್ಮೊಂದಿಗೆ ಇದ್ದೀನಿ ಎಂದು ಹೇಳುತ್ತಾ ಬಂದಿರೋದು ನಮ್ಮ ಮೆಟ್ರೋ.
ಹೌದು, ಕಾಲ ಬದಲಾದಂತೆ ಹಲವು ತಂತ್ರಜ್ಞಾನಗಳಲ್ಲಿಯೂ ಬದಲಾವಣೆ ಕಾಣಬಹುದು. ಈ ರೀತಿಯ ಬದಲಾವಣೆಯಲ್ಲಿ ನಮ್ಮ ಮೆಟ್ರೋ ಕೂಡ ಒಂದು. ಬಸ್‌ನಲ್ಲಿ ಕೆ.ಆರ್. ಮಾರ್ಕೆಟ್‌ನಿಂದ ಮೆಜೆಸ್ಟಿಕ್‌ಗೆ ಹೋಗಬೇಕಾದರೆ ಅರ್ಧ ಗಂಟೆಗಿಂತ ಹೆಚ್ಚಿನ ಸಮಯ ಬೇಕು. ಆದರೆ, ಮೆಟ್ರೋ ಬಂದ ಮೇಲೆ ಕೇವಲ 5 ನಿಮಿಷಗಳಲ್ಲಿ ನಮ್ಮ ದಾರಿ ತಲುಪುವ ಕ್ಷಿಪ್ರ ಸಾರಿಗೆ ವ್ಯವಸ್ಥೆ ಆಗಿದೆ. 2011ರ ಅ. 20ರಂದು ಪ್ರಾರಂಭವಾದ ಮೆಟ್ರೋ ದಿಲ್ಲಿ ಅನಂತರ ಭಾರತದಲ್ಲಿ ಎರಡನೇ ಉದ್ದದ ಕಾರ್ಯಾಚರಣೆಯ ಜಾಲ ನಮ್ಮ ಮೆಟ್ರೋ.
ನೇರಳೆ ಹಾಗೂ ಹಸುರು ಎಂಬ ಎರಡು ಮಾರ್ಗದಲ್ಲಿ ಮೆಟ್ರೋ ರೈಲುಗಳು ಸಂಚರಿಸುತ್ತಿವೆ. ಈ ಎರಡೂ ಮಾರ್ಗವು ಕ್ರಮವಾಗಿ ಪೂರ್ವ-ಪಶ್ಚಿಮ ಕಾರಿಡಾರ್‌ನಲ್ಲಿ 43.49 ಕಿ.ಮೀ. (37 ನಿಲ್ದಾಣ) ಮತ್ತು ದಕ್ಷಿಣ-ಉತ್ತರ ಕಾರಿಡಾರ್‌ನಲ್ಲಿ 30 ಕಿ.ಮೀ. (29 ನಿಲ್ದಾಣ) ಉದ್ದಕ್ಕೂ ವಿಸ್ತರಣೆಗೊಂಡಿದೆ. ನೇರಳೆ ಮಾರ್ಗ ವೈಟ್‌ಫೀಲ್ಡ…-ಚಲ್ಲಘಟ್ಟ ಸಂಪರ್ಕಿಸಿದರೆ, ಹಸುರು ಮಾರ್ಗವು ರೇಷ್ಮ ಸಂಸ್ಥೆ-ನಾಗಸಂದ್ರದ ವರೆಗೆ ಸಂಪರ್ಕಿಸುತ್ತದೆ. ಈ ಎರಡೂ ಮಾರ್ಗಗಳು ಮೆಜೆಸ್ಟಿಕ್‌ನಲ್ಲಿ ಸಂದಿಸಲಿದ್ದು, ಇಂಟರ್‌ಚೇಂಜ… ಮೂಲಕ ಒಂದು ಮಾರ್ಗದಿಂದ ಇನ್ನೊಂದು ಮಾರ್ಗದಲ್ಲಿ ಸಂಚರಿಸಲು ಅವಕಾಶ ಇದೆ.
ಮೆಟ್ರೋ ರೈಲಲ್ಲಿ ಮೊದಲ ಬಾರಿಗೆ ಸಂಚರಿಸಿದರೂ ಯಾವುದೇ ಗಲಿಬಿಲಿ ಇಲ್ಲದೆ ಪ್ರಯಾಣಿಸಬಹುದು. ನಿಲ್ದಾಣಗಳ ಒಳಗೆ ಕಾಲಿಡುತ್ತಿದ್ದಂತೆ ಸೂಚನಾಲಕಗಳಲ್ಲಿ ಮಾಹಿತಿ ಇರುತ್ತದೆ. ಇದನ್ನು ಗಮನಿಸಿ ಮುಂದೆ ಹೋದಲ್ಲಿ ಟಿಕೆಟ್ ಕೌಂಟರ್ ಎದುರಾಗುತ್ತದೆ. ನಿರ್ದಿಷ್ಟ ನಿಲ್ದಾಣದ ಹೆಸರು ಹೇಳಿ ಹಣ ಪಾವತಿಸಿದರೆ ಸಿಬಂದಿ ಒಂದು ಪ್ಲಾಸ್ಟಿಕ್ ಬಿಲ್ಲೆ ನೀಡುತ್ತಾರೆ. ಇದೇ ನಿಮ್ಮ ಮೆಟ್ರೋ ರೈಲಿನ ಟಿಕೆಟ್. ಪ್ಲಾಟ್ ಫಾರಂ ಪ್ರವೇಶಿಸುವ ಮುನ್ನ ಈ ಬಿಲ್ಲೆಯನ್ನು ದ್ವಾರದಲ್ಲಿ ಯಾಂತ್ರಿಕ ಉಪಕರಣಕ್ಕೆ ಸ್ಪರ್ಶಿಸಿದರೆ ಪ್ರವೇಶದ ಬಾಗಿಲುಗಳು ತೆರೆದುಕೊಳ್ಳುತ್ತದೆ. ಅಲ್ಲಿಂದ ಮುಂದೆ ಸಾಗಿ ರೈಲು ಬರುವ ಜಾಗದಲ್ಲಿ ನಿಲ್ಲಬಹುದು.
ರೈಲು ಬಂದೊಡನೆ ಬಾಗಿಲ ಮೂಲಕ ಒಳಪ್ರವೇಶಿಸಿದರೆ ಇನ್ನು ನಿಮ್ಮದೇ ಗುಂಗಿನಲ್ಲಿ ಪ್ರಯಾಣಿಸಬಹುದು. ಯಾರಿಗೂ ತೊಂದರೆ ಆಗದಂತೆ ನಿಮ್ಮ ಮೊಬೈಲ್‌ನಿಂದ ಕಿವಿಗೆ ಇಯರ್ ಫೋನ್ ಹಾಕಿಕೊಂಡು ಸಂಗೀತ ಆಸ್ವಾದಿಸಬಹುದು. ಬೇಡ ಎಂದಾದರೆ ರೈಲು ಸಾಗುವ ಮಾರ್ಗದುದ್ದಕ್ಕೂ ಕಾಣುವ ಉದ್ಯಾನ ನಗರಿಯ ಸೊಬಗನ್ನು ಕಣ್ತುಂಬಿಕೊಳ್ಳಬಹುದು. ಇಳಿಯುವ ಅಥವಾ ಹತ್ತುವ ಜಾಗದಲ್ಲಿ ಅನಗತ್ಯವಾಗಿ ನಿಲ್ಲದೆ ಅನ್ಯರಿಗೆ ಅಡ್ಡಿ ಮಾಡಬೇಡಿ ಎಂಬ ಸುಸ್ವರ ದನಿಯ ಮಹಿಳಾ ವಾಣಿ ನಿಮ್ಮನ್ನು ಎಚ್ಚರಿಸುವ ಕೆಲಸ ಮಾಡುತ್ತದೆ.
ದೇಶದಲ್ಲೆ ಸಂಚರಿಸುತ್ತಿದ್ದರೂ ವಿದೇಶಗಳಲ್ಲಿ ಸಂಚರಿಸಿದ ಅನುಭವ ಕೂಡ ನಮ್ಮ ಮೆಟ್ರೋದಲ್ಲಿ ಸಿಗಲಿದ್ದು, ಸ್ವತ್ಛತೆ ಹಾಗೂ ದಕ್ಷತೆಯನ್ನೂ ಕಾಣಬಹುದು.
ಪ್ರಸ್ತುತ ಉದ್ಯಾನ ನಗರಿಯ ಉದ್ದಕ್ಕೂ ಮೆಟ್ರೋ ಸದ್ದು ಕೇಳಿಬರುತ್ತಿದೆ. ಪ್ರತಿನಿತ್ಯ 6.5 ಲಕ್ಷಕ್ಕೂ ಹೆಚ್ಚು ಮಂದಿ ಇದರಲ್ಲಿ ಪ್ರಯಾಣಿಸುತ್ತಿದ್ದು, ಅವರೆಲ್ಲರ ಅಚ್ಚುಮೆಚ್ಚಿನ ಸಾರಿಗೆ ಎನಿಸಿದೆ. ಟೆಕ್ಕಿಗಳು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಮಂದಿ ತಮ್ಮ ದೈನಂದಿನ ಕಾರ್ಯಕ್ಕಾಗಿ ಮೆಟ್ರೋ ಮೂಲಕವೇ ಪ್ರಯಾಣಿಸುತ್ತಿದ್ದಾರೆ. ಪ್ರಯಾಣಿಕರಿಗೆ ಅನುಗುಣವಾಗಿ 10 ನಿಮಿಷಕ್ಕೆ ಒಂದರಂತೆ ಮೆಟ್ರೋ ರೈಲು ಸೇವೆ ಕೈಗೆಟುಕಿದೆ. ಟಿಕೆಟ್ ದರ ಕೂಡ ಕಡಿಮೆ ಇದೆ. ಮಾಸಿಕ ಪಾಸ್ ಕೂಡ ಜನರಿಗೆ ಸುಲಭ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ.
ಅಂದ ಹಾಗೆ ಲೇಖನಿ ಕೆಳಗಿಳಿಸುವ ಮುನ್ನ ನಮ್ಮ ಮೆಟ್ರೋ ಬಗ್ಗೆ ಒಂದಿಷ್ಟು ಅನಿಸಿಕೆ. ಟ್ರಾಫಿಕ್ ಮಧ್ಯೆ ಆಫೀಸ್‌ಗೆ ಹೋಗುವಾಗ ದಿನಾ ಲೇಟ್ ಆಗುತ್ತಾ ಇತ್ತು. ಯಾವಾಗಲೂ ಬಾಸ್ ಕೈಯಿಂದ ಬೈಗುಳ ತಿನ್ನೋದೆ ನಮ್ಮ ಜೀವನ ಆಗಿತ್ತು. ಆದರೀಗ ಮೆಟ್ರೋ ಬಂದ ಮೇಲೆ ನಮ್ಮ ದುನಿಯಾನೇ ಚೇಂಜ್ ಆಗಿಬಿಟ್ಟಿದೆ. ಬೇಗ ಆಫೀಸ್‌ಗೆ ತಲುಪಬಹುದು. ಜತೆಗೆ ಆರಾಮವಾಗಿ ನಮ್ಮ ಕೆಲಸ ಮಾಡಲು ಸಹಕಾರವಾಗಿದೆ. ಥ್ಯಾಂಕ್ಯೂ ಮೆಟ್ರೋ.
- ಕೃತಿಕಾ ಬೆಳ್ಳಿಪ್ಪಾಡಿ, ವಿವೇಕಾನಂದ ಸ್ವಾಯತ್ತ ಕಾಲೇಜು ಪುತ್ತೂರು