ನವದೆಹಲಿ: ದುಡಿಮೆಯೇ ದೇವರೆನ್ನುವ ಜನರಲ್ಲಿ (ಕಾಮ್‌ದಾರ್) ದ್ವೇಷ ಬಿತ್ತುವ ಕೆಲಸವನ್ನು ನಾಮಧಾರ್ (ವಂಶಪಾರಂಪರ್ಯ ರಾಜಕಾರಣಿಗಳು) ಮಾಡುತ್ತಿದ್ದಾರೆ.
ಕಾಮ್‌ಧಾರಿಗಳಲ್ಲಿ ಯಾರೋ ಒಬ್ಬರು ಪ್ರಧಾನಿಯಾದರೆ ಅದನ್ನು ನಾಮ್‌ಧಾರಿಗೆ ಸಹಿಸಿಕೊಳ್ಳಲು ಆಗುವುದಿಲ್ಲ …
ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಪರೋಕ್ಷ ಟೀಕಾ ಪ್ರಹಾರ ನಡೆಸಿದ್ದಾರೆ. ಚೌಕಿದಾರ್ ಚೋರ್ ಹೈ ಎಂಬ ಕಾಂಗ್ರೆಸ್ ಮುಖಂಡರಿಗೆ ತಿರುಗೇಟು ನೀಡುವ ನಿಟ್ಟಿನಲ್ಲಿ ಬುಧವಾರ 25 ಲಕ್ಷ ಮಂದಿ ಚೌಕಿದಾರರ ಜತೆಗೆ ಪ್ರಧಾನಿ ಮೋದಿ ನಡೆಸಿದ ಸಂವಾದದಲ್ಲಿ ಈ ಮಾತುಗಳನ್ನಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಟಿವಿಗಳಲ್ಲಿ ಮೈ ಭೀ ಚೌಕಿದಾರ್ ಎಂಬ ದೊಡ್ಡ ಆಂದೋಲನವೇ ನಡೆಯುತ್ತಿದೆ. ದೇಶಭಕ್ತಿಯುಳ್ಳ ಅನೇಕರು ತಮ್ಮ ಸಾಮಾಜಿಕ ಜಾಲತಾಣದ ಹೆಸರಿನ ಜತೆಗೆ ಮೈ ಭೀ ಚೌಕಿದಾರ್ ಎಂದು ಬರೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ ಪ್ರಧಾನಿ. ವಿದೇಶಗಳಲ್ಲಿರುವ ಭಾರತೀಯರಲ್ಲೂ ಇದೊಂದು ಟ್ರೆಂಡ್ ಆಗಿದೆ. ಚೌಕೀದಾರರನ್ನು ಅವಮಾನಿಸಲು ಬಳಸಿದ ಪದವೊಂದು ಇಂದು ದೇಶಭಕ್ತಿಯ ಪ್ರತೀಕವಾಗಿದೆ ಎಂದಿದ್ದಾರೆ.
ನನ್ನ ವಿರುದ್ಧ ನೇರವಾಗಿ ಆರೋಪ ಮಾಡಲು ಧೈರ್ಯವಿಲ್ಲದ ಜನ, ನನ್ನ ವಿರುದ್ಧ ಟೀಕೆಗಳನ್ನು ಮಾಡುವಾಗ ಇಡೀ ದೇಶದಲ್ಲಿ ಸ್ವಾಭಿಮಾನದಿಂದ ದುಡಿಯುತ್ತಿರುವ ಕಾವಲುಗಾರರ ಹೆಸರನ್ನು (ಚೌಕಿದಾರ್) ಬಳಕೆಗೆ ತಂದರು ಎಂದು ಅವರು ಹೇಳಿದ್ದಾರೆ. ಚೌಕಿದಾರ್ ಚೋರ್ (ಕಾವಲುಗಾರ ಕಳ್ಳ) ಎನ್ನುವವರ ಪರವಾಗಿ ಕ್ಷಮೆ ಯಾಚಿಸುತ್ತೇನೆ ಎಂದು ಪ್ರಧಾನಿ ಮೋದಿ ಹೃದಯಸ್ಪರ್ಶಿಯಾಗಿ ಮಾತನಾಡಿದ್ದಾರೆ. ನಮ್ಮ ವಿರುದ್ಧ ಯಾರು ಎಷ್ಟೇ ಟೀಕೆ ಮಾಡಲಿ, ನಾವು ಎದೆಗುಂದುವುದು ಬೇಡ. ಧೈರ್ಯಗೆಡುವುದು ಬೇಡಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ. ಐಎಎಫ್ ಯೋಧರು ಪಾಕಿಸ್ತಾನಕ್ಕೆ ನುಗ್ಗಿ ಉಗ್ರರ ನೆಲೆಯನ್ನು ಧ್ವಂಸ ಮಾಡಿದಾಗ ಪ್ರತಿಪಕ್ಷಗಳು ವ್ಯಕ್ತಪಡಿಸಿದ ಅಭಿಪ್ರಾಯ ಆಘಾತಕಾರಿಯಾದದ್ದು ಎಂದಿದ್ದಾರೆ.