Advertisement

ರಾಜ್ಯದಲ್ಲೂ ಭಗವದ್ಗೀತೆ ಕಲಿಸುವ ಚಿಂತನೆ ಸ್ವಾಗತಾರ್ಹ: ನಳಿನ್ ಕುಮಾರ್ ಕಟೀಲ್

04:44 PM Mar 22, 2022 | Team Udayavani |

ಬೆಂಗಳೂರು: ಶಿಕ್ಷಣ ಎಂದರೆ ಅದು ಮನುಷ್ಯನ ಸುಪ್ತ ಸಾಮರ್ಥ್ಯವನ್ನು ಅಭಿವ್ಯಕ್ತಿಗೊಳಿಸುವ ಪ್ರಕ್ರಿಯೆ. ಇಂದಿನ ಶಿಕ್ಷಣದಲ್ಲಿ ಕೇವಲ ಮೆದುಳಿಗೆ ಮಾಹಿತಿ ಕೊಡಲಾಗುತ್ತಿದೆ. ಶಿಕ್ಷಣವು ಮನುಷ್ಯನೊಳಗಿನ ವ್ಯಕ್ತಿತ್ವಕ್ಕೆ ಹೊಳಪು ಮತ್ತು ಬೆಳಕು ಕೊಡುವ ಮಾದರಿಯಲ್ಲಿರಬೇಕು. ಆದ್ದರಿಂದ ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲೂ ತರಗತಿಗಳಲ್ಲಿ ಭಗವದ್ಗೀತೆಯ ಶಿಕ್ಷಣ ನೀಡಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್ ಕಟೀಲ್ ಹೇಳಿದರು.

Advertisement

ಅಂತಹ ಬೆಳಕಿನಿಂದ ಸತ್ಪ್ರಜೆಯ ನಿರ್ಮಾಣ ಸಾಧ್ಯ. ಸತ್ಪ್ರಜೆ ರಾಷ್ಟ್ರಕ್ಕೆ ಆಸ್ತಿಯಾಗುತ್ತಾನೆ. ವಿದ್ಯಾರ್ಥಿಯ ಸರ್ವತೋಮುಖ ವಿಕಾಸದ ಬದಲಾಗಿ ಇಂದು ಆತನ ತಲೆಗೆ ಏನೇನೋ ತುರುಕುವ ಕೆಲಸ ನಡೆದಿದೆ. ಮನುಷ್ಯನ ನೈತಿಕ ಮೌಲ್ಯಗಳನ್ನು ಗಟ್ಟಿಗೊಳಿಸುವ ನಮ್ಮ ಪ್ರಾಚೀನ ಚಿಂತನೆ, ವಿಚಾರಧಾರೆಯನ್ನು ತಿಳಿಸುವ ಕೆಲಸ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿದ್ಯಾರ್ಜನೆ “ನಹಿ ಜ್ಞಾನೇನ ಸದೃಶಂ” ಎಂಬಂತೆ ದೇಶ ಮತ್ತು ಜಗತ್ತಿನ ಒಳಿತಿಗೆ ಬಳಕೆ ಆಗಬೇಕೆಂಬುದನ್ನು ಹೇಳಿಕೊಡಬೇಕು. ಸ್ವಂತ ಬೆಳವಣಿಗೆ ಮಾತ್ರವಲ್ಲದೆ ಸಮಾಜದ ಒಳಿತಿಗಾಗಿ ಕಲಿತ ವಿದ್ಯೆ ಬಳಕೆ ಆಗಬೇಕು. ಭಗವದ್ಗೀತೆಯು ಭಾರತ ದೇಶದ ಅಂತಃಸತ್ವ. ಹಿಂದೆ ಶಿಕ್ಷಣ ಸಚಿವರಾಗಿದ್ದ ಎಂ.ಸಿ. ಚಾಗ್ಲಾ ಅವರು ನೈತಿಕ ಶಿಕ್ಷಣವನ್ನು ಕೊಡುವ ಕುರಿತು ಪ್ರತಿಪಾದಿಸಿದ್ದರು. ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ವಿಚಾರಧಾರೆಯನ್ನು ತಿಳಿಸಲು ಅವರು ತಿಳಿಸಿದ್ದರು ಎಂದು ವಿವರಿಸಿದ್ದಾರೆ.

ಭಗವದ್ಗೀತೆಯನ್ನು ವಿದೇಶಗಳಲ್ಲೂ ಇಷ್ಟಪಟ್ಟು ಕಲಿಸುತ್ತಿದ್ದಾರೆ. ಮನುಷ್ಯ ಮನುಷ್ಯತ್ವದೊಂದಿಗೆ ಬದುಕಬೇಕು ಎಂಬುದನ್ನು ತಿಳಿಸುವ ಕಾರ್ಯವನ್ನು ಭಗವದ್ಗೀತೆ ಮಾಡುತ್ತದೆ. ಇವತ್ತಿನ ಕ್ರೌರ್ಯ, ಹಿಂಸೆ, ಅಪರಾಧ ಪ್ರವೃತ್ತಿ ಹೆಚ್ಚಳದ ಈ ಕಾಲಘಟ್ಟದಲ್ಲಿ ಭಗವದ್ಗೀತೆಯ ಅಗತ್ಯ ಹೆಚ್ಚಾಗಿದೆ ಎಂದಿದ್ದಾರೆ.

ಭಗವದ್ಗೀತೆಯು ದೇಶದ ಸಂಸ್ಕೃತಿಯ ಭಾಗವಾಗಿದೆ. ಮತಬ್ಯಾಂಕ್ ರಾಜಕಾರಣ, ಓಲೈಕೆಯ ರಾಜಕೀಯ ಮಾಡುವವರಿಗೆ ದೇಶದ ಇಂಥ ಗಟ್ಟಿ ಬೇರುಗಳ ಅರಿವಿಲ್ಲ. ಗಾಂಧೀಜಿ ಅವರು ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಭಗವದ್ಗೀತೆಯನ್ನು ದೇಶದಾದ್ಯಂತ ಪ್ರಸಾರ ಆಗಬೇಕೆಂದು ಪ್ರಯತ್ನ ಮಾಡಿದ್ದರು. ಭಗವದ್ಗೀತೆ ಓದುವವರು ದೇಶದ ಆಸ್ತಿಯಾಗುತ್ತಾರೆ. ಅವರು ದೇಶಕ್ಕೆಂದೂ ಹೊರೆ ಅನಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

Advertisement

ನ್ಯಾಯಾಂಗ ವ್ಯವಸ್ಥೆಯಲ್ಲೂ ಭಗವದ್ಗೀತೆಯನ್ನು ಮುಟ್ಟಿ ಸತ್ಯವನ್ನೇ ಹೇಳುವುದಾಗಿ ಪ್ರಮಾಣ ಮಾಡುವ ಪದ್ಧತಿಯಿದೆ. ಭಗವದ್ಗೀತೆ ಎಂದಾಗ ದೇಶದೊಳಗೆ ವ್ಯಕ್ತಿಯಲ್ಲಿ ರೋಮಾಂಚನ ಆಗಿ ಸುಳ್ಳು ಹೇಳುವವನೂ ಸತ್ಯ ಹೇಳುವಂಥ ಸ್ಥಿತಿ ನಿರ್ಮಾಣವಾಗುತ್ತದೆ. ಸ್ವಾಮಿ ವಿವೇಕಾನಂದರು ಮನುಷ್ಯ ನಿರ್ಮಾಣದ ಶಿಕ್ಷಣ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು. ಅದಕ್ಕೆ ಅನುಗುಣವಾಗಿ ಮೂಲ ಶಿಕ್ಷಣದಲ್ಲಿ ಭಗವದ್ಗೀತೆಯ ಶಿಕ್ಷಣ ಅತ್ಯಗತ್ಯ ಎಂದು ನಳಿನ್ ಕುಮಾರ್ ಕಟೀಲ್ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next